Rain News: ಭಾರಿ ಮಳೆಗೆ ಕೆಲವೇ ದಿನದಲ್ಲಿ ಹರಿದು ಬಂತು 7.4 ಟಿಎಂಸಿ ನೀರು!
ಮುಂಗಾರು ಮಳೆ ಕೈಕೊಟ್ಟರೆ ಏನಂತೆ, ಹಿಂಗಾರು ಮಳೆ ಇದೆಯಲ್ಲ ಎಂಬ ಧೈರ್ಯ ಈಗ ನಮ್ಮ ರೈತರಿಗೆ ಬಂದಿದೆ. ಪ್ರಾಕೃತಿಕ ವಿಕೋಪ ಪರಿಣಾಮ ಈ ಬಾರಿ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಮಳೆಯ ಕೊರತೆ ಉಂಟಾಗಿತ್ತು. ಹೀಗಾಗಿ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಹಲವೆಡೆ ಕುಡಿಯುವ ನೀರಿಗೆ ಕೂಡ ಭಾರಿ ಸಮಸ್ಯೆ ಎದುರಾಗಿತ್ತು. ಆದ್ರೆ ಇದೇ ಸಮಯದಲ್ಲಿ ಕರುಣೆ ತೋರಿಸಿದ್ದಾನೆ ವರುಣ ದೇವ. ಈ ಕಾರಣಕ್ಕೆ ಡ್ಯಾಂಗಳು ತುಂಬಲು ಶುರು ಮಾಡಿವೆ.
ಭಾರಿ ಮಳೆಗೆ ಕೆಲ ದಿನದಲ್ಲೇ ನದಿ, ಕೆರೆ, ಹಳ್ಳ, ಕೊಳ್ಳವು ತುಂಬಿಕೊಳ್ಳಲು ಆರಂಭಿಸಿವೆ. ಜನ ನೀರಿಗೆ ಪರದಾಡುವ ಪರಿಸ್ಥಿತಿ ಬಂದಿದ್ದ ಸಮಯದಲ್ಲಿ ಈ ಬೆಳವಣಿಗೆ ನೆಮ್ಮದಿಯನ್ನ ನೀಡುತ್ತಿದೆ. ಅದರಲ್ಲೂ ಕಳೆದ ಕೆಲವೇ ದಿನಗಳಲ್ಲಿ 7.4 ಟಿಎಂಸಿ ನೀರು ಈ ಜಲಾಶಯಕ್ಕೆ ಹರಿದು ಬಂದಿದೆ. ಹಾಗಾದ್ರೆ ಹಿಂಗಾರು ಮಳೆಯ ಪರಿಣಾಮ ಯಾವ ಯಾವ ಡ್ಯಾಂಗೆ ಈಗ ನೀರು ಹರಿದು ಬರುತ್ತಿದೆ? ಮುಂದೆ ಓದಿ.

ಅಬ್ಬರಿಸಿ ಬೊಬ್ಬಿರಿದ ಮಳೆರಾಯ
ಮಳೆ ಇಲ್ಲ, ಬೆಳೆ ಒಣಗಿ ಹೋಗುತ್ತಿದೆ. ಅಷ್ಟಕ್ಕೂ ಕರ್ನಾಟಕದಲ್ಲಿ ಎಲ್ಲೇ ಹೋದರೂ ರೈತರ ಬಾಯಲ್ಲಿ ಕೇಳಿಬರುವ ನೋವಿನ ಮಾತು ಇದು. ಕಳೆದ 5-6 ವರ್ಷಗಳಿಂದ ಕನ್ನಡಿಗರ ಮೇಲೆ ಕರುಣೆ ತೋರಿದ್ದ ವರುಣ ದೇವ, ಈ ವರ್ಷ ಮುನಿಸಿಕೊಂಡಿದ್ದಾನೆ. ಇದಕ್ಕೆ 'ಎಲ್ ನಿನೋ' ಎಂಬ ಪ್ರಾಕೃತಿಕ ವಿದ್ಯಮಾನ ಕಾರಣ ಅಂತಾ ವಿಜ್ಞಾನಿಗಳು ಹೇಳುವಾಗಲೇ, ಕಾವೇರಿ ನದಿಯ ಈ ಜಲಾಶಯ ಈಗ ತುಂಬಿಕೊಳ್ಳುತ್ತಿದೆ. ಹಾಗೇ ಕಾವೇರಿ ನೀರಿನ ವಿಚಾರಕ್ಕೆ ತಮಿಳುನಾಡು & ಕರ್ನಾಟಕ ನಡುವೆ ಕಿಚ್ಚು ಹೊತ್ತಿಕೊಂಡಿತ್ತು. ಆದರೆ ವಿವಾದವೆಲ್ಲಾ ಈಗ ತಣ್ಣಗಾಗುವ ವಾತಾವರಣ ನಿರ್ಮಾಣವಾಗುತ್ತಿದೆ.
ರಭಸವಾಗಿ ತುಂಬುತ್ತಿರುವ ಜಲಾಶಯ
ಅಷ್ಟಕ್ಕೂ ರಾಜ್ಯದಲ್ಲಿ ಮಳೆ ಬರುತ್ತಿದ್ರೂ ಜಲಾಶಯಗಳಿಗೆ ಅಷ್ಟೊಂದು ನೀರು ಬಂದಿಲ್ಲ, ಆದ್ರೆ ನೆರೆಯ ತಮಿಳುನಾಡಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಅತಿದೊಡ್ಡ ಡ್ಯಾಂ ಈಗ ರಭಸವಾಗಿ ತುಂಬುತ್ತಿದೆ. ತಮಿಳುನಾಡಿನ ಬಹುದೊಡ್ಡ ಮತ್ತು ಅತಿಮುಖ್ಯ ಜಲಾಶಯ ಎಂಬ ಕೀರ್ತಿ ಪಡೆದ ಮೆಟ್ಟೂರು ಡ್ಯಾಂ ವೇಗವಾಗಿ ತುಂಬುತ್ತಿದ್ದು, 120 ಅಡಿ ಎತ್ತರ ಇರುವ ಮೆಟ್ಟೂರು ಡ್ಯಾಂನಲ್ಲಿ ಇದೀಗ 61.51 ಅಡಿ ನೀರು ಸಂಗ್ರಹವಾಗಿದೆ. ಹಾಗೇ 3,332 ಕ್ಯುಸೆಕ್ ಒಳಹರಿವು ದಾಖಲಾಗಿದ್ದು, ಇದೀಗ 4,165 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಡ್ಯಾಂಗೆ ಬಂತು 7.4 ಟಿಎಂಸಿ ನೀರು!
ತಮಿಳುನಾಡಿನ ವಿವಿಧ ಜಲಾಶಯಗಳಿಗೂ ಇದೇ ರೀತಿ ನೀರು ಹರಿದು ಬರುತ್ತಿದೆ. ಕೆಲವೇ ದಿನದಲ್ಲಿ ಅಂದ್ರೆ ಒಂದು ವಾರದ ಅಂತರದಲ್ಲಿ ನೆರೆಯ ತಮಿಳುನಾಡಿನ ಜಲಾಶಯಗಳಿಗೆ, 7.4 ಟಿಎಂಸಿ ನೀರು ಹರಿದು ಬಂದಿದೆ. ಹಾಗೇ ಮುಂದಿನ ಕೆಲವು ದಿನಗಳ ಕಾಲ ಹೀಗೆಯೆ ಭಾರಿ ಪ್ರಮಾಣದಲ್ಲಿ ಮಳೆ ಬೀಳುವ ನಿರೀಕ್ಷೆ ಇರುವ ಕಾರಣ, ಮತ್ತಷ್ಟು ನೀರು ಹರಿದು ಬಂದು ಜಲಾಶಯಗಳು ಇನ್ನಷ್ಟು ತುಂಬಿಕೊಳ್ಳುವ ಸಾಧ್ಯತೆ ಇದೆ. ಹೀಗೆ ನೀರಿನ ಸಮಸ್ಯೆ ಈಗ ಅಂತ್ಯವಾಗುವ ನಿರೀಕ್ಷೆ ಇದೆ.
ಒಟ್ನಲ್ಲಿ ಕರ್ನಾಟಕವೂ ಸೇರಿ ನೆರೆ ರಾಜ್ಯ ತಮಿಳುನಾಡು ಹಾಗೂ ಭಾಗಶಃ ದಕ್ಷಿಣ ಭಾರತದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ಮೂಲಕ ಹಿಂಗಾರು ಮಳೆ ದಕ್ಷಿಣ ಭಾರತೀಯರ ಕೈಹಿಡಿದಿದ್ದು ಕಾವೇರಿ ಕೊಳ್ಳದಲ್ಲಿ ಮತ್ತೆ ಮಂದಹಾಸ ಮೂಡಿದೆ. ಪದೇ ಪದೆ ಕಾವೇರಿ ನದಿ ನೀರಿಗಾಗಿ ಕಿರಿಕ್ ತೆಗೆಯುತ್ತಿದ್ದ ತಮಿಳುನಾಡು ಇದೀಗ ಸೈಲೆಂಟ್ ಆಗುವ ಸ್ಥಿತಿ ಎದುರಾಗಿದೆ. ಹಂಗಾದ್ರೆ ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಕ್ಕೇಬಿಡ್ತಾ? ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ಇನ್ನಷ್ಟು ದಿನ ಕಾದು ನೋಡಬೇಕಿದೆ. ಆದರೆ, ಆದಷ್ಟು ಬೇಗ ನೀರಿನ ಸಮಸ್ಯೆಗೆ ಮುಕ್ತಿ ಸಿಗಬೇಕಿದೆ ಅಂತಿದ್ದಾರೆ ಜನ.












Click it and Unblock the Notifications