Go Back Stalin: ಬೆಂಗಳೂರಿನಿಂದ ವಾಪಸ್ಸಾಗುವ ತಮಿಳುನಾಡು ಸಿಎಂ ವಿರುದ್ಧ ಪ್ರತಿಭಟನೆ- ಮೇಕೆದಾಟು ವಿಚಾರವಾಗಿ ಅಣ್ಣಾಮಲೈ ಎಚ್ಚರಿಕೆ
ಚೆನ್ನೈ, ಜುಲೈ 03: ಮೇಕೆದಾಟು ಅಣೆಕಟ್ಟಿನ ವಿಚಾರವಾಗಿ ತಮಿಳುನಾಡಿನ ರಾಜಕೀಯದಲ್ಲಿ ಸಂಘರ್ಷ ಹುಟ್ಟಿಕೊಂಡಿವೆ. ಕರ್ನಾಟಕ ಸರ್ಕಾರ ಮೇಕೆದಾಟು ಜಲಾನಯನ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣದ ಕುರಿತು ಪ್ರಸ್ತಾಪಿಸಿದ ನಂತರ ಈ ಬೆಳವಣಿಗೆಗಳು ನಡೆಯುತ್ತಿವೆ.
ಮೇಕೆದಾಟ ವಿಚಾರವನ್ನು ಮುಂದಿಟ್ಟುಕೊಂಡು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಕೆ ಅಣ್ಣಾಮಲೈ ಅವರು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಂ ಕೆ ಸ್ಟಾಲಿನ್ ಅವರು ಜುಲೈ 17 ಮತ್ತು 18 ರಂದು ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಇದನ್ನು ಪ್ರಶ್ನಿಸಿರುವ ಅಣ್ಣಾಮಲೈ, 'ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸುತ್ತಿರುವ ಸ್ಟಾಲಿನ್ ಅವರು ರಾಜ್ಯದ ಹಕ್ಕುಗಳ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದಾರೆ' ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರೆ ಪಕ್ಷವು 'ಗೋ ಬ್ಯಾಕ್ ಸ್ಟಾಲಿನ್' ಆಂದೋಲನವನ್ನು ನಡೆಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಿಂದ ಹಿಂದಿರುಗಿದ ನಂತರ ಬಿಜೆಪಿ ಕಾರ್ಯಕರ್ತರಿಂದ 'ಗೋ ಬ್ಯಾಕ್' ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ತಮಿಳುನಾಡು ಸರ್ಕಾರದ ವಿರೋಧದ ನಡುವೆಯೂ ಮೇಕೆದಾಟು ಅಣೆಕಟ್ಟು ವಿವಾದವನ್ನು ಮುಂದುವರಿಸಲು ಕರ್ನಾಟಕ ಸರ್ಕಾರದ ಬಯಸುತ್ತಿದೆ ಎಂದು ಅಣ್ಣಾಮಲೈ ತಿಳಿಸಿದ್ದಾರೆ.
2024ರ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಕಾಂಗ್ರೆಸ್ ಆಯೋಜಿಸಿರುವ ವಿರೋಧ ಪಕ್ಷದ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಸ್ಟಾಲಿನ್ ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆಯಿದೆ.
ವಿರೋಧ ಪಕ್ಷಗಳ ನಡುವೆ ಒಗ್ಗಟ್ಟು ಮೂಡಿಸುವಲ್ಲಿ ತಮಿಳುನಾಡು ಮುಖ್ಯಮಂತ್ರಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಭಾರತದ ಯಾವುದೇ ನಗರದಲ್ಲಿ ನಡೆದರೂ ಆ ಸಭೆಯಲ್ಲಿ ಸ್ಟಾಲಿನ್ ಭಾಗವಹಿಸಲಿದ್ದಾರೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ.
ಅಣೆಕಟ್ಟಿಗೆ ಅನುಮತಿ ಕೋರಿದ ಡಿಕೆಶಿ
ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕೆಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ತಮಿಳುನಾಡು ಜಲಸಂಪನ್ಮೂಲ ಸಚಿವ ದುರೈ ಮುರುಗನ್, ಮೇಕೆದಾಟು ವಿವಾದವನ್ನು ಆಗೊಮ್ಮೆ ಈಗೊಮ್ಮೆ ಹುಟ್ಟುಹಾಕುವುದು ಕರ್ನಾಟಕದ ರಾಜಕೀಯ ನಾಯಕರ ಚಾಳಿಯಾಗಿ ಬಿಟ್ಟಿದೆ. ಈ ನಡೆಯು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿದೆ. ಮೇಕೆದಾಟು ಜಲಾನಯನ ಪ್ರದೇಶದಲ್ಲಿ ಅಣೆಕಟ್ಟು ಕಟ್ಟಲು ನಾವು ಎಂದಿಗೂ ಸಮ್ಮತಿಸುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications