ಶ್ರೀಲಂಕಾ ಬೆಳವಣಿಗೆ ಭಾರತಕ್ಕೆ ಒಂದು ಪಾಠ: ಮೆಹಬೂಬಾ ಮುಫ್ತಿ
ಬೆಂಗಳೂರು, ಮೇ 12: ನೆರೆಯ ದೇಶ ಶ್ರೀಲಂಕಾದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿವೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ. ನಿನ್ನೆ ಬುಧವಾರ ಟ್ವೀಟ್ ಮಾಡಿರುವ ಅವರು, ಶ್ರೀಲಂಕಾದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಭಾರತಕ್ಕೆ ಪಾಠವಾಗಬಹುದು ಎಂದಿದ್ದಾರೆ.
2014ರಿಂದಲೂ ಭಾರತದಲ್ಲಿ ಕಲ್ಪಿತ ಭಯ ಮತ್ತು ಕೋಮು ಉನ್ಮಾದತೆಯ ವಾತಾವರಣ ಇದೆ ಎಂದಿರುವ ಅವರು, ಶ್ರೀಲಂಕಾದ ಧಾರ್ಮಿಕ ಬಹುಸಂಖ್ಯಾತವಾದ ಮತ್ತು ಅತಿರೇಕದ ರಾಷ್ಟ್ರೀಯತೆಯ ಹಾದಿಯನ್ನೇ ಭಾರತ ತುಳಿಯುತ್ತಿದೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.
"ಶ್ರೀಲಂಕಾದಲ್ಲಿ ಏನು ಆಗಿದೆಯೋ ಅದು ಎಚ್ಚರಿಕೆ ಕರೆಗಂಟೆಯಾಗಿದೆ. 2014ರಿಂದಲೂ ಭಾರತದಲ್ಲಿ ಕೋಮುವಾದದ ಜ್ವರ ಮತ್ತು ಕಲ್ಪಿತ ಭಯ ಮನೆಮಾಡಿದೆ. ಅದೇ ಅತಿರೇಕದ ರಾಷ್ಟ್ರೀಯತೆ ಮತ್ತು ಧಾರ್ಮಿಕ ಬಹುಸಂಖ್ಯಾತವಾದದ ಹಾದಿಯಲ್ಲೇ ಸಾಗಿದೆ. ಸಾಮಾಜಿಕ ಬೆಸುಗೆ ಮತ್ತು ಆರ್ಥಿಕ ಭದ್ರತೆಗೆ ಧಕ್ಕೆ ಆಗಿದೆ" ಎಂದು ಬುಧವಾರ ಬೆಳಗ್ಗೆ ಮೆಹಬೂಬ ಮುಫ್ತಿ ಟ್ವೀಟ್ ಮಾಡಿದ್ದಾರೆ.
What happened in Sri Lanka should serve as a wake up call. Since 2014, India is being whipped into a communal frenzy & imagined fears. It is treading the same path of hyper nationalism & religious majoritarianism. All at the cost of disrupting social cohesion & economic security. https://t.co/c0WZUHW1DH
— Mehbooba Mufti (@MehboobaMufti) May 11, 2022
ದ ಹಿಂದೂ ಪತ್ರಿಕೆಯ ಟ್ವಿಟ್ಟರ್ ಖಾತೆಯೊಂದು, "ಪ್ರಬಲ ರಾಷ್ಟ್ರೀಯವಾದ ಮತ್ತು ಬಹುಸಂಖ್ಯಾತ ಧ್ರುವೀಕರಣದಿಂದ ನಿರಂತರವಾಗಿ ಬೆಂಬಲ ಹರಿದುಬರುವುದಿಲ್ಲ. ಜನರು ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವಾಗ ಇವ್ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಇದು ರಾಜಪಕ್ಸೆ ಬ್ರ್ಯಾಂಡ್‌ನ ಅವನತಿಯಿಂದ ತಿಳಿದುಬರುತ್ತದೆ" ಎಂದು ಟ್ವೀಟ್ ಮಾಡಿತ್ತು. ಅದಕ್ಕೆ ಪೂರಕ ಪ್ರತಿಕ್ರಿಯೆಯಾಗಿ ಮೆಹಬೂಬ ಮುಫ್ತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾದ ವಿಷಮ ಪರಿಸ್ಥಿತಿ:
ಶ್ರೀಲಂಕಾದಲ್ಲಿ ಈಗ್ಗೆ ಕೆಲವಾರು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ತತ್‌ಪರಿಣಾಮವಾಗಿ ರಾಜಕೀಯ ಮುಗ್ಗಟ್ಟೂ ಸೃಷ್ಟಿಯಾಗಿದೆ. ವಿವಿಧ ಬಿಳಿಯಾನೆ ಯೋಜನೆಗಳು, ಸಾಲದ ಮೇಲೆ ಸಾಲಗಳು, ಆರ್ಥಿಕ ಚೇತರಿಕೆಗೆ ಸೂಕ್ತ ಕ್ರಮ ಕೈಗೊಳ್ಳದೇ ಹೋದದ್ದು, ಹೀಗೆ ಹಲವು ಕಾರಣಗಳಿಂದ ಶ್ರೀಲಂಕಾ ಈ ಪರಿಸ್ಥಿತಿಗೆ ಬಂದಿದೆ.
ಹಿಂದೆ ಶ್ರೀಲಂಕಾ ಅಧ್ಯಕ್ಷರಾಗಿದ್ದಾಗ ಪ್ರತ್ಯೇತಕಾವಾದಿ ಸಂಘಟನೆ ಎಲ್‌ಟಿಟಿಇಯನ್ನು ಬುಡಸಮೇತ ನಿರ್ಮೂಲನೆ ಮಾಡಿದ್ದ ಮಹಿಂದಾ ರಾಜಪಕ್ಸೆ ಪ್ರಧಾನಿಯಾಗಿ ದೇಶವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಬಹುದು ಎಂದು ಶ್ರೀಲಂಕಾದ ಬಹಳ ಜನರು ನಿರೀಕ್ಷಿಸಿದ್ದರು. ಆದರೆ, ಅದೆಲ್ಲವೂ ತಿರುವುಮುರುವು ಆಗಿಹೋಗಿದೆ. ಸುಮಾರು ಎರಡು ಕೋಟಿ ಜನಸಂಖ್ಯೆಯ ಶ್ರೀಲಂಕಾದಲ್ಲಿ ಈಗ ಮೂಲಭೂತ ಸೌಕರ್ಯಕ್ಕೂ ಜನರು ಪರಿತಪಿಸಬೇಕಾದರ ಸ್ಥಿತಿ ಇದೆ ಎಂಬ ಅಭಿಪ್ರಾಯಗಳಿವೆ.

ಕಳೆದ ಕೆಲ ತಿಂಗಳುಗಳಿಂದ ಶ್ರೀಲಂಕಾದಲ್ಲಿ ವಿವಿಧೆಡೆ ಜನರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ಧಾರೆ. ಹಲವೆಡೆ ದಂಗೆಗಳಾಗುತ್ತಿವೆ. ಇತ್ತೀಚೆಗೆ ಇಂಥದ್ದೊಂದು ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಎಂಟಕ್ಕೂ ಹೆಚ್ಚು ಮಂದಿ ಬಲಿಯಾಗಿಹೋಗಿದ್ದಾರೆ. ಆಡಳಿತ ಪಕ್ಷದವರ ಮನೆ, ಕಚೇರಿಗಳ ಮೇಲೆ ಜನರು ದಾಳಿ ಮಾಡುತ್ತಿರುವುದು ಸರಕಾರದ ಮೇಲೆ ಸಾಮಾನ್ಯ ಜನಕ್ಕಿರುವ ಆಕ್ರೋಶ ವ್ಯಕ್ತ ಆಗುತ್ತದೆ. ಮಹಿಂದಾ ರಾಜಪಕ್ಸೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ತಲೆಮರೆಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಅವರ ಕಿರಿಯ ಸಹೋದರ ಗೋಟಾಬಯ ರಾಜಪಕ್ಸೆ ಶ್ರೀಲಂಕಾ ಅಧ್ಯಕ್ಷರಾಗಿ ಅತೀವ ಒತ್ತಡಕ್ಕೆ ಸಿಲುಕಿದ್ದಾರೆ.

ಮೆಹಬೂಬ ಮುಫ್ತಿ ಹೇಳಿದ ಸಾಮ್ಯತೆ ಏನು?
ಮೆಹಬೂಬ ಮುಫ್ತಿ ಶ್ರೀಲಂಕಾದಲ್ಲಿ ಬಹುಸಂಖ್ಯಾತವಾದ ಮತ್ತು ಅತಿರೇಕದ ರಾಷ್ಟ್ರೀಯತೆಯ ವಿಚಾರವನ್ನು ಎತ್ತಿ ಅದು ಭಾರತಕ್ಕೆ ಪಾಠ ಎಂದು ಹೇಳಿದ್ದಾರೆ. ಶ್ರೀಲಂಕಾದಲ್ಲಿ ರಾಜಪಕ್ಸೆ ಕುಟುಂಬದವರು ಅಧಿಕಾರಕ್ಕೆ ಮರಳಿದ ಬಳಿಕ ರಾಷ್ಟ್ರೀಯತೆ ಮತ್ತು ಬಹುಸಂಖ್ಯಾತವಾದಕ್ಕೆ ಪೂರಕವಾದ ನಿರ್ಧಾರಗಳನ್ನು ಕೈಗೊಳ್ಳುವುದರತ್ತ ಗಮನ ಕೊಟ್ಟರು ಎಂಬ ಅಭಿಪ್ರಾಯಗಳಿವೆ. ಮುಸ್ಲಿಮರು ಸಿಂಹಳೀ ಸಂಸ್ಕೃತಿಗೆ ಅಪಾಯವಾಗಿದ್ದಾರೆ ಎಂಬಂತಹ ಅನಿಸಿಕೆಗಳು, ಬುರ್ಖಾ ನಿಷೇಧ ಇತ್ಯಾದಿ ಕ್ರಮಗಳು ಅಲ್ಪಸಂಖ್ಯಾತವಿರೋಧಿ ಧೋರಣೆಯಾಗಿವೆ. ಭಾರತದಲ್ಲೂ ಇಂಥದ್ದೇ ವಾತಾವರಣ ಇದೆ ಎಂಬುದು ಕೆಲವರ ಟೀಕೆ ಮತ್ತ ಆತಂಕ. ಪಿಡಿಪಿ ಅಧ್ಯಕ್ಷೆ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದು ಇದೇ ಸಾಮ್ಯತೆಯ ವಿಚಾರವನ್ನು.
(ಒನ್ಇಂಡಿಯಾ ಸುದ್ದಿ)












Click it and Unblock the Notifications