Meghalaya election; ಸಾಂಗ್‌ಸಾಕ್‌ನಲ್ಲಿ ಟಿಎಂಸಿ, ಎನ್‌ಪಿಪಿ ಪೈಪೋಟಿ
ಮೇಘಾಲಯ ವಿಧಾನಸಭೆ ಚುನಾವಣೆ 2023ರ ಮತ ಎಣಿಕೆ ನಡೆಯುತ್ತಿದೆ. ಸಾಂಗ್‌ಸಾಕ್‌ನಲ್ಲಿ ಎನ್‌ಪಿಪಿ ಮತ್ತು ಟಿಎಂಸಿ ನೇರ ಪೈಪೋಟಿ ನಡೆಯುತ್ತಿದೆ.
ಶಿಲ್ಲಾಂಗ್, ಮಾರ್ಚ್ 02; ಮೇಘಾಲಯ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಎನ್‌ಪಿಪಿ ಪಕ್ಷ 28 ಸ್ಥಾನಗಳಲ್ಲಿ ಮುನ್ನಡೆ ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಹಲವು ಕ್ಷೇತ್ರಗಳಲ್ಲಿ ಟಿಎಂಸಿ ಮತ್ತು ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸಾಂಗ್‌ಸಾಕ್ ಕ್ಷೇತ್ರದಲ್ಲಿಯೂ ಪೈಪೋಟಿ ಜೋರಾಗಿದೆ.
ಗುರುವಾರ ಮೇಘಾಲಯ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ರಾಜ್ಯದ 60 ಕ್ಷೇತ್ರಗಳ ಪೈಕಿ 59 ಸ್ಥಾನಗಳಿಗೆ ಫೆಬ್ರವರಿ 27ರಂದು ಚುನಾವಣೆ ನಡೆದಿತ್ತು. ಸಾಂಗ್‌ಸಾಕ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಟಿಎಂಸಿ ನಾಯಕ ಮುಕುಲ್ ಸಾಂಗ್ಮಾ 4,403 ಮತಗಳನ್ನು ಪಡೆದಿದ್ದಾರೆ.

ಎನ್‌ಪಿಪಿಯ ನಿಹೀಮ್ ಡಿ. ಶಿರಾ ಮುಕುಲ್ ಸಂಗ್ಮಾಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. 4024 ಮತಗಳನ್ನು ಪಡೆದಿರುವ ಅವರು 379 ಮತಗಳ ಅಂತರದಿಂದ ಸ್ಪರ್ಧೆ ನೀಡುತ್ತಿದ್ದಾರೆ. ಆದ್ದರಿಂದ ಸಾಂಗ್‌ಸಾಕ್ ಕ್ಷೇತ್ರದ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
2021ರಲ್ಲಿ ಮುಕುಲ್ ಸಂಗ್ಮಾ 11 ಶಾಸಕರ ಜೊತೆ ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದರು. ಮುಕುಲ್ ಸಂಗ್ಮಾರಿಂದ ಈ ಬಾರಿಯ ಚುನಾವಣೆಯಲ್ಲಿ ಟಿಎಂಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಚುನಾವಣಾ ಆಯೋಗದ ಸದ್ಯದ ಮಾಹಿತಿ ಪ್ರಕಾರ ಟಿಎಂಸಿ 5 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.

ಮೇಘಾಲಯದಲ್ಲಿ ಎನ್‌ಪಿಪಿ ಮೈತ್ರಿಕೂಟ ಅಧಿಕಾರದಲ್ಲಿದೆ. ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಈಗಾಗಲೇ ಜಯಗಳಿಸಿದ್ದು, 21 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಕಾಂಗ್ರೆಸ್ ಮತ್ತು ವಿಪಿಪಿ ಪಕ್ಷಗಳು ತಲಾ 4 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹೆಚ್‌ಎಸ್‌ಪಿಡಿಪಿ ಮತ್ತು ಪಿಡಿಎಫ್ ತಲಾ 2 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ.
ಗುರುವಾರ ಬೆಳಗ್ಗೆ ಮತ ಎಣಿಕೆ ಆರಂಭವಾದಾಗ ಟಿಎಂಸಿ ರಾಜ್ಯದಲ್ಲಿ ಎನ್‌ಪಿಪಿಗೆ ಪ್ರಬಲ ಪೈಪೋಟಿ ನೀಡಿತು. ಮುಕುಲ್ ಸಂಗ್ಮಾ ಪಕ್ಷ ಸೇರಿದ್ದು, ಬದಲಾವಣೆಗೆ ಕಾರಣ ಎಂದು ಅಂದಾಜಿಸಲಾಗಿತ್ತು. ಆದರೆ ಬಳಿಕ ಎನ್‌ಪಿಪಿ ಎರಡಂಕಿ ದಾಟಿತು. ಆದರೆ ಟಿಎಂಸಿ ಒಂದಂಕಿಯಲ್ಲಿಯೇ ಮುಂದುವರೆಯಿತು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 30. ಎನ್‌ಪಿಪಿ ಈಗಾಗಲೇ 28 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ ಎಂದು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.












Click it and Unblock the Notifications