ಇವರೇ ಕೇಂದ್ರ ಬಜೆಟ್ ತಯಾರಿಸಿದ ಅಧಿಕಾರಿಗಳು
Recommended Video

ನವದೆಹಲಿ, ಜನವರಿ 21: ಕೇಂದ್ರ ಸರ್ಕಾರದ ಮತ್ತೊಂದು ಪೂರ್ಣಾವಧಿ ಬಜೆಟ್ ಮಂಡಿಸಲು ವಿತ್ತ ಸಚಿವ ಅರುಣ್ ಜೇಟ್ಲಿ ಸಿದ್ಧರಾಗುತ್ತಿದ್ದಾರೆ.
ಮುಂಗಡ ಪತ್ರ, ಸಾಮಾನ್ಯ ಆರ್ಥಿಕ ಸಮೀಕ್ಷೆ ಹಾಗೂ ನೀತಿಗಳ ಕುರಿತ ಹೇಳಿಕೆ, ತೆರಿಗೆ ಪ್ರಸ್ತಾವನೆ, ಆಯ-ವ್ಯಯ ತಯಾರಿಸಲು ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಜತೆಗೆ ಉನ್ನತ ಅಧಿಕಾರಿಗಳಿರುತ್ತಾರೆ.
ಹಣಕಾಸು ಸಚಿವಾಲಯ, ನೀತಿ ಆಯೋಗ ಮತ್ತು ಇತರೆ ಸಚಿವಾಲಯಗಳ ಉನ್ನತಾಧಿಕಾರಿಗಳು ಸಮಾಲೋಚನಾ ಪ್ರಕ್ರಿಯೆ ಮೂಲಕ ಮುಂಗಡಪತ್ರವನ್ನು ಸಿದ್ಧಪಡಿಸಲಾಗುತ್ತದೆ.
ಖರ್ಚು ವೆಚ್ಚವನ್ನಾಧರಿಸಿ ಮಾರ್ಗಸೂಚಿಯನ್ನು ಪ್ರಕಟಿಸಿ, ಇದಕ್ಕೆ ಅನುಗುಣವಾಗಿ ವಿವಿಧ ಸಚಿವಾಲಯಗಳು ಬೇಡಿಕೆಯನ್ನು ಮುಂದಿರಿಸುತ್ತವೆ. ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಆರ್ಥಿಕ ವ್ಯವಹಾರಗಳ ಇಲಾಖೆಯ ಮುಂಗಡಪತ್ರ ವಿಭಾಗವು ಇದನ್ನು ಸಿದ್ಧಪಡಿಸುತ್ತದೆ.
ಪ್ರತಿ ಶುಭಕಾರ್ಯ ಮಾಡುವಾಗ ಸಿಹಿ ಹಂಚಿಕೆಗೆ ಮಹತ್ವ ನೀಡುವಂತೆ ಬಜೆಟ್ ಗೂ ಮುನ್ನ 'ಹಲ್ವಾ ಸಮಾರಂಭ' ನಡೆಯುವುದು ಭಾರತದಲ್ಲಿ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಅದರಂತೆ ಇಂದು ಸಾಂಪ್ರದಾಯಿಕಾಗಿ ಕೇಂದ್ರ ಹಣಕಾಸು ಸಚಿವಾಲಯದಲ್ಲಿ ಹಲ್ವಾ ಸಮಾರಂಭ ನಡೆಯಿತು. ಹಲ್ವಾ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪಾಲ್ಗೊಂಡಿದ್ದರು.

ಸಂಸತ್ ಭವನದಿಂದ ಮನೆಗೆ ತೆರಳುವಂತಿಲ್ಲ
ಬಜೆಟ್ ತಯಾರಿ ಆರಂಭವಾಗಿ, ಕೇಂದ್ರ ಸಚಿವರು ಸದನದಲ್ಲಿ ಆಯವ್ಯಯ ಮಂಡಿಸುವವರೆಗೂ ಬಜೆಟ್ ಕೆಲಸದಲ್ಲಿ ತೊಡಗಿಸಿಕೊಂಡಿರುವ ಸಿಬ್ಬಂದಿಗಳು ಸಂಸತ್ ಭವನದಿಂದ ತಮ್ಮ ಮನೆಗೆ ತೆರಳುವಂತಿಲ್ಲ. ಯಾರೊಂದಿಗೂ ಫೋನ್ ಕರೆ ಅಥವಾ ಯಾವುದೇ ರೀತಿಯಲ್ಲಿ ಸಂಪರ್ಕಿಸುವಂತಿಲ್ಲ. ಈ ನಿಟ್ಟಿನಲ್ಲಿ ಸಿಬ್ಬಂದಿಗಳಿಗೆ ಬೇಸರ ಆಗದಿರಲಿ ಎಂದು ಈ ಹಲ್ವಾ ಸಂಪ್ರದಾಯ ಚಾಲ್ತಿಯಲ್ಲಿದೆ.
ಬಜೆಟ್ನ ವಿಷಯಗಳನ್ನು ಆಯ್ದ ಅಧಿಕಾರಿಗಳು, ಬೆರಳಚ್ಚುಗಾರರು ಸೇರಿ ಸಿದ್ಧಪಡಿಸುತ್ತಾರೆ. ಇವರು ಕೆಲಸ ಮಾಡುವ ಕಂಪ್ಯೂಟರ್ಗಳು ಇತರೆ ಯಾವ ಜಾಲಗಳೊಂದಿಗೂ ಸಂಪರ್ಕ ಹೊಂದಿರುವುದಿಲ್ಲ.

ನಾರ್ತ್ಬ್ಲಾಕ್ ನಲ್ಲಿ ತಯಾರಿ
ಬಜೆಟ್ ತಯಾರಿ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಎಲ್ಲ ಅಧಿಕಾರಿಗಳು, ತಂತ್ರಜ್ಞರು, ಕಾನೂನು ಸಚಿವಾಲಯದ ಕಾನೂನು ತಜ್ಞರು ಮತ್ತು ಇತರೆ ಸಹಾಯಕ ಸಿಬ್ಬಂದಿಯ ಚಲನವಲನ ಹಣಕಾಸು ಸಚಿವಾಲಯವಿರುವ ಸಂಸತ್ತಿನ ನಾರ್ತ್ಬ್ಲಾಕ್ಗಷ್ಟೇ ಸೀಮಿತವಾಗಿರುತ್ತದೆ. ಈ ಅವಧಿಯಲ್ಲಿ ಅವರು ನಾರ್ತ್ಬ್ಲಾಕ್ ಬಿಟ್ಟು ಬೇರೆಲ್ಲೂ ತೆರಳುವಂತಿಲ್ಲ.
ಬಜೆಟ್ ಪ್ರತಿ ಮುದ್ರಣವಾಗಿ ಬಂದು ಹಣಕಾಸು ಸಚಿವರು ಅದನ್ನು ಸಂಸತ್ತಿನಲ್ಲಿ ಮಂಡಿಸಿದ ಬಳಿಕವಷ್ಟೆ ಈ ಎಲ್ಲ ಸಿಬ್ಬಂದಿ ನಾರ್ತ್ಬ್ಲಾಕ್ನಿಂದ ತೆರಳಬಹುದು.

ಬಜೆಟ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ
ಹಣಕಾಸು, ಕಂದಾಯ ಇಲಾಖೆಯ ಕಾರ್ಯದರ್ಶಿ ಡಾ. ಹಸ್ಮುಖ್ ಆಧಿಯಾ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್,ವಿತ್ತ ಸಚಿವಾಲಯದ ರಾಜೀವ್ ಕುಮಾರ್, ಬಜೆಟ್ ಜಂಟಿ ಕಾರ್ಯದಶಿ ಪ್ರವೀಣ್ ಗೋಯಲ್, ಸಿಬಿಟಿಡಿ, ಸಿಬಿಇಸಿ ಇಲಾಖೆಯ ಅಧಿಕಾರಿಗಳು, ಹಣಕಾಸು ಇಲಾಖೆಯ 34 ಅಧಿಕಾರಿಗಳು ಸೇರಿ ಒಟ್ಟು ನೂರಕ್ಕೂ ಸಿಬ್ಬಂದಿಗಳು ಬಜೆಟ್ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಕೊನೆಯ ಪೂರ್ಣ ಆಯವ್ಯಯ
ಫೆಬ್ರವರಿ 1ರಂದು ಅರುಣ್ ಜೇಟ್ಲಿ ಬಜೆಟ್ ಮಂಡಿಸಲಿದ್ದು, ಇದು ನರೇಂದ್ರ ಮೋದಿ ಸರಕಾರದ ಕೊನೆಯ ಪೂರ್ಣ ಆಯವ್ಯಯವಾಗಿದೆ. ಮುಂದಿನ ವರ್ಷ ಮೋದಿ ಸರಕಾರ ಚುನಾವಣೆ ಎದುರಿಸಬೇಕಾಗಿರುವುದರಿಂದ ಬಜೆಟ್ ನಲ್ಲಿ ಭರಪೂರ ಕೊಡುಗೆಗಳನ್ನು ನೀಡಬಹುದು ಎಂದು ಜನರು ಕಾಯುತ್ತಿದ್ದಾರೆ.
2018ರಲ್ಲಿ ಕರ್ನಾಟಕ, ರಾಜಸ್ಥಾನ, ಛತ್ತೀಸ್ ಘಡ ಹಾಗೂ ಮಧ್ಯಪ್ರದೇಶ ಚುನಾವಣೆ ಅಲ್ಲದೆ, ನಾಗಾಲ್ಯಾಂಡ್, ಮೇಘಾಲಯ, ತ್ರಿಪುರಾ ರಾಜ್ಯಗಳ ಚುನಾವಣೆ ಇರುವುದರಿಂದ ಈ ರಾಜ್ಯಗಳಿಗೆ ಹೆಚ್ಚಿನ ಅನುದಾನ, ಯೋಜನೆಗಳನ್ನು ನಿರೀಕ್ಷಿಸಬಹುದು.












Click it and Unblock the Notifications