Manipur violence: ಕರ್ಫ್ಯೂ ಉಲ್ಲಂಘಿಸಿ ಸಿಎಂ ಬಿರೇನ್ ಸಿಂಗ್ ಮನೆ ಮೇಲೆ ದಾಳಿ, ಮತ್ತೊಂದು ಹಂತಕ್ಕೆ ತಲುಪಿದ ಹಿಂಸಾಚಾರ
ನವದೆಹಲಿ, ಸೆಪ್ಟೆಂಬರ್ 29: ಮಣಿಪುರ ಹಿಂಸಾಚಾರ ಮತ್ತೊಂದು ಹಂತಕ್ಕೆ ತಲುಪಿದೆ. ಕರ್ಫ್ಯೂ ಅನ್ನು ಉಲ್ಲಂಘಿಸಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಪೂರ್ವಜರ ಮನೆ ಮೇಲೆ ಎರಡು ಗುಂಪುಗಳು ದಾಳಿ ಮಾಡಿವೆ. ಈ ಮನೆಯು ಇಂಫಾಲದ ಹೃದಯ ಭಾಗದಲ್ಲಿದೆ. ಆದರೆ, ಈ ಮನೆಯಲ್ಲಿ ಬಿರೇನ್ ಸಿಂಗ್ ಕುಟುಂಬ ವಾಸಿಸುತ್ತಿಲ್ಲವೆಂದು ತಿಳಿದುಬಂದಿದೆ.
ಗುರುವಾರ ರಾತ್ರಿ ಉದ್ರಿಕ್ತರ ಗುಂಪುಗಳು ದಾಳಿ ನಡೆಸಿವೆ. ಈ ದಾಳಿಯು ಪೂರ್ವನಿಯೋಜಿತವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಹೆಚ್ಚಿನ ಭದ್ರತಾ ಉಪಸ್ಥಿತಿ ಇದ್ದ ಕಾರಣ ದಾಳಿಯನ್ನು ನಿಯಂತ್ರಿಸಲು ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿ ಕರ್ಫ್ಯೂ ಇದ್ದರೂ ಗುಂಪು ದಾಳಿಗೆ ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿ ಪರಿಸ್ಥಿತಿಯನ್ನು ಹತೋಟೆಗೆ ತಂದಿದ್ದಾರೆ.

ಭದ್ರತಾ ಪಡೆಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ದಾಳಿ ಯತ್ನವನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿವೆ ಎಂದು ವರದಿಯಾಗಿದೆ. 62 ವರ್ಷ ವಯಸ್ಸಿನ ಬಿರೇನ್ ಸಿಂಗ್ ಹಾಗೂ ಅವರ ಕುಟುಂಬ ಇಂಫಾಲದಲ್ಲಿರುವ ಅಧಿಕೃತ ನಿವಾಸದಲ್ಲಿ ವಾಸಿಸುತ್ತಿದೆ. ಇದು ಸಹ ನಗರದ ಹೃದಯಭಾಗದಲ್ಲಿದೆ. ಇದಕ್ಕೆ ಭಾರೀ ಭದ್ರತೆಯನ್ನು ಕಲ್ಪಿಸಲಾಗಿದೆ.
ಘಟನೆ ನಡೆದಿದ್ದು ಹೇಗೆ?
ಎರಡು ಕಡೆಯಿಂದ ಆಗಮಿಸಿದ ಎರಡು ಗುಂಪುಗಳು ಮುಖ್ಯಮಂತ್ರಿಗಳ ಮನೆ ಮೇಲೆ ದಾಳಿ ಮಾಡಲು ಯತ್ನಿಸಿವೆ. ಸಕಾಲದಲ್ಲಿ ಈ ಗುಂಪುಗಳನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ಉದ್ರಿಕ್ತ ಜನಸಮೂಹವನ್ನು ಚದುರಿಸಲು ಆರ್‌ಎಎಫ್ (ರಾಪಿಡ್ ಆಕ್ಷನ್ ಫೋರ್ಸ್) ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಅನೇಕ ಸುತ್ತಿನ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ.
ಉದ್ರಿಕ್ತ ಪ್ರತಿಭಟನಾಕಾರರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರದೇಶದಾದ್ಯಂತ ವಿದ್ಯುತ್ ಪೂರೈಕೆಯನ್ನು ಸಹ ಸ್ಥಗಿತಗೊಳಿಸಿದರು. ನಿವಾಸದ ಬಳಿ ಇರುವ ಬ್ಯಾರಿಕೇಡ್‌ಗಳನ್ನು ಹೊರತುಪಡಿಸಿ ಹೆಚ್ಚುವರಿ ಬ್ಯಾರಿಕೇಡ್‌ಗಳನ್ನು ಸಹ ಹಾಕಲಾಗಿದೆ. ಪ್ರತಿಭಟನಾಕಾರರು ಹತ್ತಿರದ ರಸ್ತೆಯ ಮಧ್ಯದಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.

ಪೊಲೀಸ್ ಕ್ರಮ
ಇಂಫಾಲ್‌ನ ಹೀಂಗಾಂಗ್ ಪ್ರದೇಶದಲ್ಲಿರುವ ಸಿಎಂ ಬಿರೇನ್ ಸಿಂಗ್ ಪೂರ್ವಜರ ನಿವಾಸವನ್ನು ಗುರಿಯಾಗಿಸಿ ದಾಳಿ ಮಾಡುವ ಪ್ರಯತ್ನ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮನೆಯಿಂದ ಸುಮಾರು 100 ರಿಂದ 150 ಮೀಟರ್ ದೂರದಲ್ಲಿ ಭದ್ರತಾ ಪಡೆಗಳು ಗುಂಪನ್ನು ತಡೆದವು ಎಂದು ಅವರು ಹೇಳಿದ್ದಾರೆ.
ಮನೆಯು ಪ್ರಸ್ತುತ ಖಾಲಿ ಇದೆ. ಆದರೆ, ನಿರಂತರ ಕಣ್ಗಾವಲಿನಲ್ಲಿದೆ. ಈ ಪ್ರದೇಶದ ಸಮೀಪದಲ್ಲಿ ಆಂಬ್ಯುಲೆನ್ಸ್‌ಗಳು ಕಾಣಿಸಿಕೊಂಡಿವೆ. ಇಲ್ಲಿಯವರೆಗೆ, ಯಾವುದೇ ಗಾಯಳುಗಳು ಅಥವಾ ಸಾವಿನ ಬಗ್ಗೆ ವರದಿಯಾಗಿಲ್ಲ.
ಇಬ್ಬರು ವಿದ್ಯಾರ್ಥಿಗಳ ಹತ್ಯೆ ನಂತರ ಮಣಿಪುರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ರಾಜಧಾನಿ ಇಂಫಾಲದಲ್ಲಿ ಮಂಗಳವಾರ ಮತ್ತು ಬುಧವಾರ ಭಾರೀ ಹಿಂಸಾಚಾರ ನಡೆದಿದೆ.
ಗುರುವಾರ ಮುಂಜಾನೆ ಇಂಫಾಲ್ ಪಶ್ಚಿಮ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯನ್ನು ಉದ್ರಿಕ್ತರು ಧ್ವಂಸಗೊಳಿಸಿದ್ದಾರೆ. ಎರಡು ನಾಲ್ಕು ಚಕ್ರಗಳ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಮಂಗಳವಾರದಿಂದ 65 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಇಂಫಾಲ್ ಪೂರ್ವ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.












Click it and Unblock the Notifications