ಮಣಿಪುರದಲ್ಲಿ ವಿವಸ್ತ್ರಗೊಳಿಸಿ ಮೆರವಣಿಗೆ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಅರ್ಜಿ ಸಲ್ಲಿಕೆ
ಮಣಿಪುರದಲ್ಲಿ ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ತಮ್ಮ ವೈರಲ್ ವೀಡಿಯೊಗೆ ಸಂಬಂಧಿಸಿದ ಹೊಸ ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಮೇ 4 ರಂದು ನಡೆದ ಲೈಂಗಿಕ ದೌರ್ಜನ್ಯ ಘಟನೆಗೆ ಸಂಬಂಧಿಸಿದಂತೆ ತಮ್ಮ ಗುರುತಿನ ರಕ್ಷಣೆಗಾಗಿ ಸಂತ್ರಸ್ತ ಮಹಿಳೆಯರು ಮನವಿಯೊಂದಿಗೆ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಇಂದು ಜುಲೈ 31 ರಂದು ಗೃಹ ವ್ಯವಹಾರಗಳ ಸಚಿವಾಲಯದ (ಎಂಎಚ್‌ಎ) ಉತ್ತರವನ್ನು ಪರಿಶೀಲಿಸಲು ಸಜ್ಜಾಗಿದೆ. ಈ ನಡುವೆ ಸಂತ್ರಸ್ತ ಮಹಿಳೆಯರು ಸುಪ್ರಿಂ ಕೋರ್ಟ್‌ಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲಾಗಿದೆ ಎಂದು ಕಳೆದ ವಾರ ಗೃಹ ಸಚಿವಾಲಯ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಸಿಬಿಐ ಇದೀಗ ಔಪಚಾರಿಕವಾಗಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಎಫ್‌ಐಆರ್ ದಾಖಲಿಸಿದೆ.
ಎಂಎಚ್‌ಎ ತನ್ನ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಮೂಲಕ ಸಲ್ಲಿಸಿದ ಅಫಿಡವಿಟ್‌ನಲ್ಲಿ, ಪ್ರಕರಣದ ವಿಚಾರಣೆಯನ್ನು ಕಾಲಮಿತಿಯಲ್ಲಿ ಮುಕ್ತಾಯಗೊಳಿಸಲು ಮಣಿಪುರದ ಹೊರಗೆ ವಿಚಾರಣೆಯನ್ನು ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದೆ.
ಈ ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಜೂನ್ 19 ರಂದು ಇಬ್ಬರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದಿದೆ. ತೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ.
ಜುಲೈ 20 ರಂದು ನಡೆದ ಘಟನೆಯನ್ನು ಸುಪ್ರೀಂ ಕೋರ್ಟ್ ಗಮನಿಸಿದೆ. ವೀಡಿಯೊದಿಂದ ತೀವ್ರ ಬೇಸರ ವ್ಯಕ್ತಪಡಿಸಿದ ಪೀಠ ಹಿಂಸೆಯನ್ನು ನಡೆಸಲು ಮಹಿಳೆಯರನ್ನು ಸಾಧನವಾಗಿ ಬಳಸುವುದು "ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಸ್ವೀಕಾರಾರ್ಹವಲ್ಲ" ಎಂದು ಹೇಳಿದೆ. ಸಿಜೆಐ ಚಂದ್ರಚೂಡ್ ಅವರು ಕೇಂದ್ರ ಮತ್ತು ಮಣಿಪುರ ಸರ್ಕಾರಕ್ಕೆ ತಕ್ಷಣದ ಪರಿಹಾರ, ಪುನರ್ವಸತಿ ಮತ್ತು ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.

ಮಣಿಪುರ ಅತ್ಯಾಚಾರ ಘಟನೆ:-
ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ನಡೆದ ಘಟನೆಯ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕುಕಿ- ಜೋ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿದ ಗುಂಪು, ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಾ ಮೆರವಣಿಗೆ ಮಾಡಿಕೊಂಡು ಮೈದಾನವೊಂದಕ್ಕೆ ಕರೆದುಕೊಂಡು ಹೋಗಿದ್ದು ವಿಡಿಯೋದಲ್ಲಿ ಕಾಣಿಸಿತ್ತು.
800- 1000ದಷ್ಟಿದ್ದ ಜನರು, ಆಧುನಿಕ ಶಸ್ತ್ರಗಳೊಂದಿಗೆ ಬಿ. ಫೈನಮ್ ಗ್ರಾಮಕ್ಕೆ ನುಗ್ಗಿದ್ದರು. ಅಲ್ಲಿಮ ದಾಂಧಲೆ ನಡೆಸಿ, ಲೂಟಿ ಮಾಡಿದ್ದರು. ಮನೆಗಳಿಗೆ ಬೆಂಕಿ ಹಚ್ಚಿ, ಆಸ್ತಿ ಪಾಸ್ತಿಗಳನ್ನು ಧ್ವಂಸಗೊಳಿಸಿದ್ದರು. ಈ ದುಷ್ಕರ್ಮಿಗಳು ಮೈತೇಯಿ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ. ಈ ದಾಳಿ ವೇಳೆ ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರು ಸೇರಿ ಒಟ್ಟು ಐದು ಮಂದಿ ಸಮೀಪದ ಕಾಡಿಗೆ ಪರಾರಿಯಾಗಿ ಬಚ್ಚಿಟ್ಟುಕೊಂಡಿದ್ದರು. ಅವರನ್ನು ನಾಂಗ್‌ಪೊಕ್ ಸೆಕ್ಮೈ ಪೊಲೀಸ್ ತಂಡವು ರಕ್ಷಿಸಿ ಠಾಣೆಗೆ ಕರೆದೊಯ್ಯುವ ವೇಳೆ, ಮತ್ತೆ ದಾಳಿ ನಡೆಸಿದ ಗುಂಪು ಅವರನ್ನು ಅಪಹರಿಸಿತ್ತು.
ಈ ಕ್ರೂರಿಗಳು ಅವರಲ್ಲಿ ಒಬ್ಬ ವ್ಯಕ್ತಿಯನ್ನು ಕೂಡಲೇ ಕೊಂದು ಹಾಕಿದ್ದರು. ಮೂವರೂ ಮಹಿಳೆಯರನ್ನು ಬಲವಂತವಾಗಿ ವಿವಸ್ತ್ರಗೊಳಿಸಲಾಗಿತ್ತು. 21 ವರ್ಷದ ಒಬ್ಬ ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಅದನ್ನು ತಡೆಯಲು ಬಂದ ಆಕೆಯ 19 ವರ್ಷದ ಸಹೋದರನನ್ನು ಬರ್ಬರವಾಗಿ ಕೊಂದು ಹಾಕಲಾಗಿತ್ತು.












Click it and Unblock the Notifications