ದೆಹಲಿಯಲ್ಲಿ ಮೋದಿ ಭೇಟಿಯಾದ ಸುಮಲತಾ ಅಂಬರೀಶ್: ವಿಜಯೇಂದ್ರ ಹೇಳಿದ್ದೇನು?
ದೆಹಲಿ, ಫೆಬ್ರವರಿ 09: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯ ರಾಜಕಾರಣ ಮತ್ತೆ ರಂಗೇರಿದೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಿಂದಾಗಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ತೆಕ್ಕೆಗೆ ಸಿಗಲಿದ್ದು, ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಈ ಬಾರೀ ಮಂಡ್ಯ ಲೋಕಸಭೆ ಟಿಕೆಟ್ ಕೈ ತಪ್ಪಲಿದ್ದು, ಟಿಕೆಟ್ ಗಾಗಿ ದೆಹಲಿ ನಾಯಕರನ್ನ ಭೇಟಿ ಮಾಡುವ ಮೂಲಕ ಟಿಕೆಟ್ಗಾಗಿ ಕಸರತ್ತು ನಡೆಸಿದ್ದಾರೆ.
ಹೌದು, ಗುರುವಾರ ಅಷ್ಟೇ ಜೆಪಿ ನಡ್ಡಾ ಹಾಗೂ ಬಿಎಲ್ ಸಂತೋಷ್ ಅವರನ್ನು ಭೇಟಿ ಮಾಡಿ ಟಿಕೆಟ್ಗಾಗಿ ಸುಮಲತಾ ಅಂಬರೀಶ್ ಅವರು ಮನವಿ ಮಾಡಿದ್ದರು. ಇಂದಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಟಿಕೆಟ್ ಗೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಕುರಿತು ಮಾಹಿತಿ ತಿಳಿದು ಬಂದಿದೆ.

ಇನ್ನು, ಸುಮಲತಾ ಅಂಬರೀಶ್ ಅವರು ಮೋದಿ ಭೇಟಿ ಮಾಡಿರುವ ಕುರಿತು ದೆಹಲಿಯಲ್ಲಿ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ರಾಜ್ಯಕ್ಕೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರು ಬರುತ್ತಿದ್ದಾರೆ. ಫೆಬ್ರವರಿ 11 ಕ್ಕೆ ಮೈಸೂರಿಗೆ ಬಂದಾಗ ಈ ಬಗ್ಗೆ ಚರ್ಚೆಯಾಗಲಿದೆ ಎಂದು ಹೇಳಿದ್ದಾರೆ.
ರಾಧ ಮೋಹನ್ ಸಿಂಗ್ ನಮ್ಮ ರಾಜ್ಯದ ಉಸ್ತುವಾರಿಗಳು. ರಾಜ್ಯದ ಬೆಳವಣಿಗೆ ಬಗ್ಗೆ ಚರ್ಚೆ ನಡೆದಿದೆ, ಪೂರ್ವ ತಯಾರಿ ಬಗ್ಗೆ ಸಮಾಲೋಚನೆ ನಡೆಸಿದೆ. ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿದೆ, ಮುಂಬರುವ ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡಿದೆ. ನಡ್ಡಾ ಅವರು ನನ್ನ ಕಾರ್ಯವೈಖರಿಗೆ ಸಂತಸ ವ್ಯಕ್ತಪಡಿಸಿದ್ದಾರೆ ಹಾಗೂ ಬಿಜೆಪಿ ಹೊಸ ದಾಖಲೆ ಬರೆಯಲಿದ್ದೇವೆ ಎಂದು ಭರವಸೆ ನೀಡಿದ್ದೇನೆ ಎಂದು ಹೇಳಿದರು.
ಸೋಮಣ್ಣ ಅವರಿಗೆ ರಾಜ್ಯಸಭೆ ಸ್ಪರ್ಧೆ ವಿಚಾರವಾಗಿ ಮಾತನಾಡಿ, ಎಲ್ಲವೂ ಚರ್ಚೆಯಾಗಿದೆ, ಈ ಬಗ್ಗೆ ವರಿಷ್ಠರು ತಿರ್ಮಾನ ಮಾಡುತ್ತಾರೆ. ಪ್ರಹ್ಲಾದ್ ಜೋಶಿ ಭೇಟಿ ವೇಳೆ ಯತ್ನಾಳ್ ಭೇಟಿಯಾಗಿದೆ. ಇದಕ್ಕೆ ವಿಶೇಷ ಒತ್ತು ಕೊಡುವ ಅಗತ್ಯ ಇಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ, ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎನ್ನುವುದು ಜನರ ಅಭಿಪ್ರಾಯ. ಸರ್ವೆಗಳು ಪೂರ್ಣ ಪ್ರಮಾಣದಲ್ಲಿ ಸತ್ಯ ಇಲ್ಲ. ನಾವು 28 ಸ್ಥಾನಗಳನ್ನು ಗೆಲ್ಲಲಿದೆ, ಹೊಸ ದಾಖಲೆ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ವೈಫಲ್ಯ ಮುಚ್ಚಿಕೊಳ್ಳಲು ಈ ಆರೋಪ ಮಾಡುತ್ತಿದೆ. ಭರವಸೆ ಈಡೇರಿಸಿವಲ್ಲಿ ವಿಫಲವಾಗಿದೆ, ಲೋಪದೋಷ ಮುಚ್ಚಿ ಹಾಕಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ಇದು ಸಿಎಂ ಸ್ಥಾನಕ್ಕೆ ಗೌರವ ತರುವುದಲ್ಲ. ದೆಹಲಿಯಲ್ಲಿ ಕರ್ನಾಟಕದ ಮರ್ಯಾದ ತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಹತಾಶೆಗೊಂಡಿದ್ದಾರೆ. ಅದಕ್ಕಾಗಿ ಹೀಗೆ ಮಾತನಾಡುತ್ತಿದ್ದಾರೆ, ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಉತ್ತರ ಕೊಡಲಿದೆ. ಹಣಕಾಸು ಸಚಿವರು ಕಾಂಗ್ರೆಸ್ ಪಕ್ಷದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಕಳೆದ ಎರಡು ಅವಧಿಯಲ್ಲಿ ಎಷ್ಟು ಅನುದಾನ ನೀಡಿದ್ದಾರೆ. ರಾಜ್ಯಕ್ಕೆ ಯಾವುದೇ ಅನ್ಯಾಯ ಆಗಿಲ್ಲ, ದೇಶದ ಎಲ್ಲ ರಾಜ್ಯಗಳಿಗೂ ವಿಶೇಷ ಅನುದಾನ ಬಂದ್ ಮಾಡಿದೆ. ವಿಶೇಷ ಅನುದಾನ ಐದು ವರ್ಷಕ್ಕೆ ಸೀಮಿತವಾಗಿತ್ತು. ಅರ್ಧ ಸತ್ಯವನ್ನು ಹೇಳುವ ಕೆಲಸ ಮಾಡುತ್ತಿದ್ದಾರೆ, ಅಸತ್ಯ ನುಡಿದು ರಾಜ್ಯದ ಗೌರವ ಹಾಳು ಮಾಡುತ್ತಿದ್ದಾರೆ. ಕೇಂದ್ರದ ಜೊತೆಗಿನ ಸಂಬಂಧ ಹಾಳು ಮಾಡುತ್ತಿದ್ದಾರೆ, ಸಿಎಂ ಆರುವರೆ ಕೋಟಿ ಜನರ ಪ್ರತಿನಿಧಿ ಅದನ್ನು ಅವರು ಮರೆಬಾರದು. ಹಣಕಾಸು ಸಚಿವರು ಸುಳ್ಳು ಹೇಳ್ತಿದ್ದಾರ? ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ, ಅವರಿಗೆ ಅಸ್ತಿತ್ವ ಇಲ್ಲ ಅದಕ್ಕಾಗಿ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಜನರ ಕಣ್ಣಿಗೆ ಮಣ್ಣು ಎರಚುವ ಪ್ರಯತ್ನ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ಮೋದಿ ಭೇಟಿ ಕುರಿತು ಸುಮಲತಾ ಹೇಳಿದ್ದೇನು?
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು, ತಮ್ಮ ನಿರಂತರ ಕಾರ್ಯದೊತ್ತಡದ ನಡುವೆಯೂ ನನಗೆ ಸಮಯ ನೀಡಿದ್ದಕ್ಕಾಗಿ, ಭಾರತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಮೋದಿ ಅವರಿಗೆ ಧನ್ಯವಾಧ ಎಂದು ಸುಮಲತಾ ಅವರು ಟ್ವೀಟ್ ಮಾಡಿದ್ದಾರೆ.
ನರೇಂದ್ರ ಮೋದಿರವರು ವಿಶ್ವದ ಮಹಾನ್ ನಾಯಕರಾಗಿದ್ದು, ಭಾರತದಂತಹ ಬೃಹತ್ ದೇಶವನ್ನು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸುತ್ತಾ, ಭಾರತವನ್ನು ಮುಂದುವರೆದ ರಾಷ್ಟ್ರಗಳ ಸಾಲಿಗೆ ಸೇರಿಸಲು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ದೇಶದ ಅಭಿವೃದ್ಧಿ ಹಾಗೂ ದೇಶದ ಭವಿಷ್ಯದ ಬಗ್ಗೆ ನಿಮಗಿರುವ ದೂರದೃಷ್ಟಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಭಾರತ ದೇಶವು ಇಂದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸನ್ಮಾನ್ಯ ಪ್ರಧಾನ ಮಂತ್ರಿಗಳ ಸಮರ್ಥ ನಾಯಕತ್ವವೇ ಕಾರಣ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕಾರಣದಿಂದಲೇ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ.
ತಮ್ಮನ್ನು ಭೇಟಿ ಮಾಡಿದ ಸಂಧರ್ಭದಲ್ಲಿ, ತಾವು ನೀಡಿದ ಪ್ರೋತ್ಸಾಹದಾಯಕ ಮಾತುಗಳು, ನಮ್ರತೆ, ಮತ್ತು ಗೌರವಕ್ಕೆ ನಾನು ಕೃತಜ್ಞಳಾಗಿದ್ದೇನೆ. ತಮ್ಮನ್ನು ಭೇಟಿ ಮಾಡಿದ ಆ ಕ್ಷಣಗಳು ನನ್ನನ್ನು ಸಾರ್ವಜನಿಕರ ಸೇವೆಯಲ್ಲಿ ಇನ್ನಷ್ಟು ಉತ್ಸಾಹದಿಂದ ತೊಡಗಿಸಿಕೊಳ್ಳಲು ಸ್ಫೂರ್ತಿಯಾಗಿದ್ದು, ನಿಮ್ಮ ಸಹಕಾರ ಮತ್ತು ಮಾರ್ಗದರ್ಶನಕ್ಕೆ ನಾನು ಹೃದಯಪೂರ್ವಕವಾಗಿ ಆಭಾರಿಯಾಗಿದ್ದೇನೆ.
ವಿಶ್ವದ ಅತ್ಯಂತ ಜನಪ್ರಿಯ ನಾಯಕರಾಗಿರುವ ನಿಮಗೆ, ನಮ್ಮ ದೇಶದ ಭವಿಷ್ಯದ ಬಗ್ಗೆ ಇರುವ ಪರಿಕಲ್ಪನೆ ಹಾಗೂ ದೂರದೃಷ್ಟಿ ನಮ್ಮ ದೇಶದ ಎಲ್ಲಾ ಭವಿಷ್ಯದ ಮಹತ್ವಾಕಾಂಕ್ಷಿ ನಾಯಕರಿಗೆ ಮಾದರಿಯಾಗಿದೆ. ಪ್ರಧಾನ ಮಂತ್ರಿಗಳಾಗಿ ಅಚಲವಾದ ಧೃಢತೆಯಿಂದ ಅದ್ಭುತವಾದ ನಾಯಕತ್ವದ ಗುಣಗಳೊಂದಿಗೆ ತಾವು ಸಲ್ಲಿಸಿದ ಅತ್ಯುತ್ತಮ ಸೇವೆ ಮತ್ತು ದೇಶಕ್ಕೆ ನೀಡಿದ ಆಡಳಿತವು ಭಾರತ ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ.
17ನೇ ಲೋಕಸಭೆಯ ಕೊನೆಯ ಅಧಿವೇಶನವು ಮುಕ್ತಾಯದ ಹಂತದಲ್ಲಿದ್ದು, ನಿಮ್ಮ ಅಧಿಕಾರಾವಧಿಯಲ್ಲಿ ಸಂಸತ್ ಸದಸ್ಯೆಯಾಗಿ ಸೇವೆ ಸಲ್ಲಿಸಿರುವುದು ನಿಜಕ್ಕೂ ನನ್ನ ಸೌಭಾಗ್ಯವಾಗಿದೆ. ಈ ಬಾರಿಯ ತಮ್ಮ ಭೇಟಿ ಸಂಧರ್ಭದಲ್ಲಿ "ಮುಂದಿನ ದಿನಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸೋಣ" ಎಂಬ ನಿಮ್ಮ ಮಾತುಗಳು ನನಗೆ ಸ್ಪೂರ್ತಿದಾಯಕವಾಗಿದ್ದು, ವಿಶ್ವದ ಹೆಮ್ಮೆಯ ನಾಯಕರಾದ ತಮ್ಮ ಅಮೂಲ್ಯ ಮಾರ್ಗದರ್ಶನದಲ್ಲಿ ಜನರ ಸೇವೆ ಮಾಡಲು ಮತ್ತು ಭಾರತವನ್ನು ಮುಂದುವರೆದ ದೇಶಗಳ ಸಾಲಿನಲ್ಲಿ ನೋಡಲು ನಾನು ಉತ್ಸುಕಳಾಗಿದ್ದೇನೆ.
ಮಂಡ್ಯ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಆಸಕ್ತಿ ವಹಿಸಿ, ಉತ್ತಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಅನುದಾನವನ್ನು ಒದಗಿಸಿದ್ದಕ್ಕಾಗಿ ನನ್ನ ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾಭಿಮಾನಿ ಮತದಾರರು, ಕಾರ್ಯಕರ್ತರು, ನನ್ನ ಬೆಂಬಲಿಗರು ಮತ್ತು ಸಮಸ್ತ ಸಾರ್ವಜನಿಕರ ಪರವಾಗಿ, ಭಾರತ ದೇಶದ ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂದಿನ ಅವಧಿಯಲ್ಲಿಯೂ ಸಹ, ನಮ್ಮ ರಾಜ್ಯ ಮತ್ತು ರಾಷ್ಟ್ರದ ಸೇವೆಯಲ್ಲಿ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.












Click it and Unblock the Notifications