ಪ್ರಧಾನಿಗೆ ತಮ್ಮ ಭರವಸೆಗಳನ್ನು ನೆನಪಿಸಲು 1,350 ಕಿ.ಮೀ. ಪಾದಯಾತ್ರೆ
ಆಗ್ರಾ, ಜೂನ್ 16: ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ನೀಡಿದ ಭರವಸೆಗಳನ್ನು ಅವರಿಗೆ ನೆನಪಿಸುವ ಸಲುವಾಗಿ 30ರ ವಯಸ್ಸಿನ ವ್ಯಕ್ತಿಯೊಬ್ಬರು ಒಡಿಶಾದ ರೂರ್ಕೆಲಾದಿಂದ 1,350 ಕಿ.ಮೀ. ದೂರವಿರುವ ದೆಹಲಿಗೆ ಪಾದಯಾತ್ರೆ ನಡೆಸಿದ್ದಾರೆ.
ವಿಗ್ರಹಗಳನ್ನು ತಯಾರಿಸುವ ವೃತ್ತಿ ಮಾಡುತ್ತಿರುವ ಒಡಿಶಾದ ಮುಕ್ತಿಕಂಠ ಎಂಬುವವರು ತಮ್ಮ ಹಳ್ಳಿಗೆ ಇನ್ನೂ ವೈದ್ಯಕೀಯ ಹಾಗೂ ಮೂಲಸೌಕರ್ಯಗಳು ದೊರಕದೆ ಪರದಾಡುತ್ತಿರುವ ಜನರಿಗಾಗಿ ಪ್ರಧಾನಿಯ ಗಮನ ಸೆಳೆಯಲು ಭಾರತದ ಬಾವುಟ ಹಿಡಿದು ನಡೆದೇ ಸಾಗಿದ್ದಾರೆ.
2015ರಲ್ಲಿ ಒಡಿಶಾಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು, ಇಸ್ಪಾಟ್ ಜನರಲ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದಾಗಿ ಮತ್ತು ಬ್ರಹ್ಮಣಿ ಸೇತುವೆಯ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದರು.

ಆದರೆ ನಾಲ್ಕು ವರ್ಷಗಳು ಕಳೆದರೂ ಇವು ಘೋಷಣೆಗಳಾಗಿಯೇ ಉಳಿದಿವೆ ಹೊರತು ಜಾರಿಯಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ದೇಶದ ಬಹುತೇಕ ಹಳ್ಳಿಗಳ ಸ್ಥಿತಿಯು ಇದೇ ರೀತಿ ಪರಿಸ್ಥಿತಿಯಿದ್ದು, ಜನರಿಗೆ ಮೂಲಭೂತ ಸೌಕರ್ಯಗಳು ಸುಲಭವಾಗಿ ಸಿಗುತ್ತಿಲ್ಲ. ಹೀಗಾಗಿ ಪ್ರಧಾನಿಯ ಗಮನ ಸೆಳೆಯಲು ಈ ಪಯಣ ನಡೆಸಲು ತೀರ್ಮಾನಿಸಿದ್ದಾಗಿ ಹೇಳಿದ್ದಾರೆ.
ಪಾದಯಾತ್ರೆ ವೇಳೆ ಆಗ್ರಾ ಹೈವೇಯಲ್ಲಿ ಆಯಾಸಗೊಂಡು ಕುಸಿದುಬಿದ್ದ ಮಣಿಕಂಠ ಅವರನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ತಮ್ಮ ಭರವಸೆಗಳನ್ನು ಈಡೇರಿಸುವಂತೆ ಮನವಿ ಮಾಡುವ ಆಶಯವನ್ನು ಅವರು ಹೊಂದಿದ್ದಾರೆ.
ಇಷ್ಟು ದೂರು ಒಬ್ಬಂಟಿಯಾಗಿ ಪಾದಯಾತ್ರೆ ಮಾಡಲು ತಮ್ಮೊಟ್ಟಿಗೆ ಕೊಂಡೊಯ್ಯುತ್ತಿರುವ ರಾಷ್ಟ್ರಧ್ವಜವೇ ಹುಮ್ಮಸ್ಸು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ.
ನಾಲ್ಕು ವರ್ಷದ ಹಿಂದೆ ನೀಡಿದ ಭರವಸೆಯನ್ನು ಈವರೆಗೆ ಈಡೇರಿಸದೆಯೇ ಇದ್ದರೂ, ಪ್ರಸಕ್ತ ವರ್ಷವಾದರೂ ಅದು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.












Click it and Unblock the Notifications