ಕೋರ್ಟ್ ಕಟ್ಟಡದಲ್ಲಿ ಪತ್ನಿಯನ್ನು ಅಟ್ಟಾಡಿಸಿ ಕತ್ತಿಯಿಂದ ಕೊಂದ
ಒಡಿಶಾ, ಏಪ್ರಿಲ್ 24: ಕೌಟುಂಬಿಕ ನ್ಯಾಯಾಲಯದ ಕಟ್ಟಡ ಆವರಣದಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಅಟ್ಟಾಡಿಸಿ, ಕತ್ತಿಯಿಂದ ಕೊಂದ ಘಟನೆ ಒಡಿಶಾದ ಸಂಬಾಲ್ ಪುರ್ ನಲ್ಲಿ ಸೋಮವಾರ ನಡೆದಿದೆ. ಈ ಘಟನೆಯಲ್ಲಿ ಮಹಿಳೆಯ ತಾಯಿ ಹಾಗೂ ಆಕೆಯ ಸೋದರ ಸಂಬಂಧಿಗೆ ಗಾಯಗಳಾಗಿವೆ.
ಹದಿನೆಂಟು ವರ್ಷದ ಸಂಜಿತಾ ಚೌಧುರಿ ಮೇಲೆ ಆಕೆಯ ಪತಿ ರಮೇಶ್ ಕುಂಬಾರ್ ಕತ್ತಿಯಿಂದ ಹಲ್ಲೆ ನಡೆಸಿ ಕೊಂದಿದ್ದಾನೆ. ಈ ವೇಳೆ ತನ್ನ ಅತ್ತೆ ಲಲಿತಾ ಚೌಧುರಿ ಮೇಲೂ ಹಲ್ಲೆ ನಡೆಸಿದ್ದಾನೆ. ರಮೇಶ್ ನ ಮಾವ ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂಜಿತಾ ತನ್ನ ಪೋಷಕರ ಜತೆಗೆ ಕೋರ್ಟ್ ಗೆ ಬಂದಿದ್ದರು. ಮದುವೆ ನಂತರ ಕೆಲ ತಿಂಗಳಿಗೆ ತನ್ನ ಪೋಷಕರ ಮನೆಗೆ ಆಕೆ ಹಿಂತಿರುಗಿದ್ದರು. "ನನ್ನ ಪತ್ನಿಯನ್ನು ವಾಪಸ್ ಕರೆಸಿಕೊಡಬೇಕು" ಎಂದು ರಮೇಶ್ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದ.

ಸಂಜಿತಾ ಆಕೆಯ ಕುಟುಂಬದವರ ಮೇಲೆ ನ್ಯಾಯಾಲಯದ ಆವರಣದಲ್ಲೇ ರಮೇಶ್ ಭೀಕರವಾದ ದಾಳಿ ನಡೆಸಿದ್ದಾನೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರಮೇಶ್ ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸಂಜಿತಾ ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿ ಓಡಿದ್ದಾರೆ. ಆದರೆ ಬೆನ್ನಟ್ಟಿ ಹೋಗಿ ಕೊಲೆ ಮಾಡಲಾಗಿದೆ.
ಅಲ್ಲಿದ್ದ ಜನರು ರಮೇಶ್ ನನ್ನು ಹಿಗ್ಗಾಮುಗ್ಗಾ ಥಳಿಸಿ, ಆ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂಜಿತಾ, ಆಕೆಯ ತಾಯಿ ಮತ್ತು ಸೋದರ ಸಂಬಧಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಸಂಜಿತಾ ಮೃತಪಟ್ಟಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ.












Click it and Unblock the Notifications