ಒಡಿಶಾ ರೈಲು ದುರಂತ: ಸಂತ್ರಸ್ತ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಘೋಷಿಸಿದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ, ಜೂನ್. 05: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬ ಸದಸ್ಯರಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ. ಭೀಕರ ಅಪಘಾತದಲ್ಲಿ ಕೈಕಾಲು ಕಳೆದುಕೊಂಡವರ ಸಂಬಂಧಿಕರಿಗೂ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.
ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದವರಿಗೆ ಮತ್ತು ಪ್ರಸ್ತುತ ಮಾನಸಿಕ ಮತ್ತು ದೈಹಿಕ ಆಘಾತದಿಂದ ಬಳಲುತ್ತಿರುವವರಿಗೆ ತಮ್ಮ ಸರ್ಕಾರವು ನಗದು ನೆರವನ್ನು ನೀಡುತ್ತದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ದುರಂತದಿಂದ ವಿವಿಧ ಆಸ್ಪತ್ರೆಗಳಲ್ಲಿ ಚೇತರಿಸಿಕೊಳ್ಳುತ್ತಿರುವ ಗಾಯಗೊಂಡ ಪ್ರಯಾಣಿಕರನ್ನು ಭೇಟಿ ಮಾಡಲು ಅವರು ಮಂಗಳವಾರ ಭುವನೇಶ್ವರ ಮತ್ತು ಕಟಕ್‌ಗೆ ಭೇಟಿ ನೀಡಲಿದ್ದಾರೆ.

ಪ್ರಸ್ತುತ ಪಶ್ಚಿಮ ಬಂಗಾಳದ 206 ಗಾಯಗೊಂಡ ಪ್ರಯಾಣಿಕರನ್ನು ಒಡಿಶಾದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದು, "ಕಟಕ್ ಆಸ್ಪತ್ರೆಗಳಲ್ಲಿ 33 ಮಂದಿ ಪ್ರಯಾಣಿಕರು ಗಂಭೀರ ಪರಿಸ್ಥಿತಿಯಲ್ಲಿದ್ದಾರೆ" ಎಂದು ತಿಳಿಸಿದ್ದಾರೆ. ನಾಳೆ ಕಟಕ್ ಮತ್ತು ಭುವನೇಶ್ವರಕ್ಕೆ ಕೆಲವು ಬಂಗಾಳದ ಸಚಿವರು ಮತ್ತು ಹಿರಿಯ ಅಧಿಕಾರಿಗಳು ಮಮತಾ ಬ್ಯಾನರ್ಜಿ ಅವರೊಂದಿಗೆ ತೆರಳಲಿದ್ದಾರೆ.
ಮಮತಾ ಬ್ಯಾನರ್ಜಿ ಬುಧವಾರ ಸಂತ್ರಸ್ತರ ಕುಟುಂಬಕ್ಕೆ ಸಹಾಯದ ಚೆಕ್ ಮತ್ತು ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. "ಅಪಘಾತದ ಬಗ್ಗೆ ಯಾವುದೇ ರೀತಿಯ ರಾಜಕೀಯ ಮಾಡಲು ನಾನು ಬಯಸುವುದಿಲ್ಲ. ಗಾಯಗೊಂಡ ಪ್ರಯಾಣಿಕರು ಮತ್ತು ಅವರ ಕುಟುಂಬಗಳಿಗೆ ಎಷ್ಟು ಸಹಾಯ ಮಾಡಲು ಸಾಧ್ಯವೋ ಎಲ್ಲವನ್ನೂ ಮಾಡುತ್ತೇನೆ" ಎಂದು ಬಂಗಾಳ ಮುಖ್ಯಮಂತ್ರಿ ಹೇಳಿದ್ದಾರೆ.
ಹಿಂದಿನ ದಿನ, ರೈಲು ಅಪಘಾತದಲ್ಲಿ ಗಾಯಗೊಂಡ ರಾಜ್ಯದ ಪ್ರಯಾಣಿಕರ ಚಿಕಿತ್ಸೆ ಮತ್ತು ಪುನರ್ವಸತಿ ಮೇಲ್ವಿಚಾರಣೆಗಾಗಿ ಮಮತಾ ಬ್ಯಾನರ್ಜಿ ಅವರು ಕೊನೆಯ ಕ್ಷಣದಲ್ಲಿ ಡಾರ್ಜಿಲಿಂಗ್‌ಗೆ ತಮ್ಮ ನಾಲ್ಕು ದಿನಗಳ ಪ್ರವಾಸವನ್ನು ರದ್ದುಗೊಳಿಸಿದರು ಎಂದು ಮೂಲಗಳು ತಿಳಿಸಿವೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಡಾರ್ಜಿಲಿಂಗ್‌ಗೆ ಭೇಟಿ ನೀಡಬೇಕಿತ್ತು. ಅಲ್ಲಿ ಅವರು ಈ ವರ್ಷ ನಡೆಯಲಿರುವ ಪಂಚಾಯತ್ ಚುನಾವಣೆಗೆ ಮುನ್ನ ಹಿಲ್ಸ್‌ನಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳ ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಆದರೆ, ಘಟನೆ ಹಿನ್ನೆಲೆ ಅವರು ಕೋಲ್ಕತ್ತಾದಲ್ಲಿರಲು ಬಯಸುತ್ತಾರೆ. ಅಪಘಾತಕ್ಕೀಡಾದ ಕೋರಮಂಡಲ್ ಎಕ್ಸ್‌ಪ್ರೆಸ್‌ನಲ್ಲಿದ್ದ ಪಶ್ಚಿಮ ಬಂಗಾಳದ ಗಾಯಗೊಂಡ ಪ್ರಯಾಣಿಕರ ಪುನರ್ವಸತಿ ಮತ್ತು ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಇದಾದ ನಂತರ ಡಾರ್ಜಿಲಿಂಗ್‌ಗೆ ಭೇಟಿ ನೀಡುತ್ತಾರೆ" ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಒಡಿಶಾ ರೈಲು ದುರಂತದ ಬಳಿಕ ಅಪ್ ಲೈನ್ ಮತ್ತು ಡೌನ್ ಲೈನ್ ಟ್ರ್ಯಾಕ್‌ಗಳನ್ನು ಸರಿಪಡಿಸಿದ ಗಂಟೆಗಳ ನಂತರ, ವೈಜಾಗ್ ಬಂದರಿನಿಂದ ರೂರ್ಕೆಲಾ ಸ್ಟೀಲ್ ಪ್ಲಾಂಟ್‌ಗೆ ಕಲ್ಲಿದ್ದಲು ತುಂಬಿದ ಸರಕುಗಳ ರೈಲು ಭಾನುವಾರ ರಾತ್ರಿ 10.40 ರ ಸುಮಾರಿಗೆ ಪುನಃಸ್ಥಾಪನೆಯಾದ ಹಳಿಗಳಲ್ಲಿ ಮೊದಲ ಬಾರಿಗೆ ಚಲಿಸಿದೆ. ಇದಾದ ನಂತರ ಮೊದಲ ಹೈಸ್ಪೀಡ್ ಪ್ಯಾಸೆಂಜರ್ ರೈಲು - ಹೌರಾ-ಪುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸೋಮವಾರ ಬೆಳಗ್ಗೆ ಅದೇ ಹಳಿಗಳ ಮೂಲಕ ಬಾಲಸೋರ್ ಮೂಲಕ ಹಾದುಹೋಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋರಮಂಡಲ್ ಎಕ್ಸ್‌ಪ್ರೆಸ್ ಜೂನ್ 2 ರಂದು ಸಂಜೆ 7 ಗಂಟೆಗೆ ಅದರ ಬೋಗಿಗಳು ಹಳಿತಪ್ಪಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಅದೇ ಸಮಯದಲ್ಲಿ ಹಾದು ಹೋಗುತ್ತಿದ್ದ ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್‌ನ ಕೊನೆಯ ಕೆಲವು ಬೋಗಿಗಳ ಮೇಲೆ ಕೋರಮಂಡಲ್‌ನ ಕೆಲವು ಬೋಗಿಗಳು ಉರುಳಿದ್ದವು. ಇದರಿಂದ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.












Click it and Unblock the Notifications