ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

26 ವರ್ಷಗಳಲ್ಲೇ ಹೊಸ ದಾಖಲೆ: ದಕ್ಷಿಣ ಭಾರತದ ನಾಯಕನಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ!

|
Google Oneindia Kannada News

ನವದೆಹಲಿ, ಅಕ್ಟೋಬರ್ 1: ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ) ಅಧ್ಯಕ್ಷ ಸ್ಥಾನದ ಕಿತ್ತಾಟ ಒಂದು ಹಂತವನ್ನು ದಾಟಿದೆ. ಮಲ್ಲಿಕಾರ್ಜುನ್ ಖರ್ಗೆ ಹಾಗೂ ಶಶಿ ತರೂರ್ ಅಖಾಡಕ್ಕೆ ಧುಮುಕಿದ್ದು ಆಗಿದೆ. ಇಬ್ಬರು ನಾಯಕರಲ್ಲಿ ಯಾರಿಗೇ ಗದ್ದುಗೆ ಗಿಟ್ಟಿದರೂ, ದಕ್ಷಿಣ ಭಾರತದ ನಾಯಕರಿಗೆ ಎಐಸಿಸಿ ಅತ್ಯುನ್ನತ ಹುದ್ದೆ ದಕ್ಕಲಿದೆ.

ಭಾರತದಲ್ಲಿ ಬರೋಬ್ಬರಿ 26 ವರ್ಷಗಳ ನಂತರದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ನಾಯಕರಿಗೆ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರ ಸ್ಥಾನ ಒಲಿದು ಬರುತ್ತಿದೆ. ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅಥವಾ ಕೇರಳದ ಶಶಿ ತರೂರ್ ಕೈ ಪಾರ್ಟಿಯ ಮುಂದಿನ ಸಾರಥಿ ಆಗಲಿದ್ದಾರೆ.

ರಾಹುಲ್ ಗಾಂಧಿ ಬೇಡ ಎಂದರೆ ಯಾರಿಗೆ ಒಲಿಯುತ್ತೆ ಎಐಸಿಸಿ ಅಧ್ಯಕ್ಷ ಸ್ಥಾನ?ರಾಹುಲ್ ಗಾಂಧಿ ಬೇಡ ಎಂದರೆ ಯಾರಿಗೆ ಒಲಿಯುತ್ತೆ ಎಐಸಿಸಿ ಅಧ್ಯಕ್ಷ ಸ್ಥಾನ?

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಅಖಾಡದ ಅಂಗಳಕ್ಕೆ ಬಂದಿದ್ದ ಹಲವು ನಾಯಕರು ಅಂತಿಮ ಹಂತದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಯ್ಕೆ ಬಹುತೇಕ ಖಚಿತ ಎನ್ನುವ ಹಂತದಲ್ಲಿ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಯಿತು. ಇದರಿಂದ ಸಿಎಂ ಕುರ್ಚಿ ಕಡೆಗೆ ವಾಲಿದ ಗೆಹ್ಲೋಟ್, ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲ್ಲ ಎಂಬುದನ್ನು ಘೋಷಿಸಿ ಬಿಟ್ಟರು. ಇದೀಗ ರಾಜ್ಯಸಭೆ ಪ್ರತಿಪಕ್ಷ ನಾಯಕರಾಗಿದ್ದ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಕೇರಳದ ತಿರುವನಂತಪುರಂ ಸಂಸದ ಶಶಿ ತರೂರ್ ಭವಿಷ್ಯವನ್ನು ಕಾಂಗ್ರೆಸ್ ನಾಯಕರು ನಿರ್ಧರಿಸಲಿದ್ದಾರೆ.

ದಕ್ಷಿಣ ಭಾರತದ ನಾಯಕರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಪಟ್ಟ

ದಕ್ಷಿಣ ಭಾರತದ ನಾಯಕರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಪಟ್ಟ

1992 ರಿಂದ 1996ರಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ಪಿವಿ ನರಸಿಂಹ ರಾವ್ ಅವರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಾನವನ್ನು ನೀಡಲಾಗಿತ್ತು. ಅಲ್ಲಿಂದ ಮುಂದೆ ಕೈ ರಾಷ್ಟ್ರೀಯ ಅಧ್ಯಕ್ಷರ ಗದ್ದುಗೆಯಲ್ಲಿ ಸೋನಿಯಾ ಗಾಂಧಿಯವರೇ ಹೆಚ್ಚು ಹಿಡಿತ ಸಾಧಿಸಿದ್ದರು. ತದನಂತರದಲ್ಲಿ ರಾಹುಲ್ ಗಾಂಧಿ ಅದರ ಹೊಣೆ ಹೊತ್ತುಕೊಂಡರು. 2019ರ ಲೋಕಸಭಾ ಚುನಾವಣೆ ಸೋಲಿನ ಹೊಣೆ ಹೊತ್ತುಕೊಂಡು ಕುರ್ಚಿಯಿಂದ ಕೆಳಗಿಳಿದರು.

ಅಧ್ಯಕ್ಷ ಕುರ್ಚಿಗಾಗಿ ಖರ್ಗೆ-ತರೂರ್ ನಾಮಪತ್ರ

ಅಧ್ಯಕ್ಷ ಕುರ್ಚಿಗಾಗಿ ಖರ್ಗೆ-ತರೂರ್ ನಾಮಪತ್ರ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯಲಿರುವ ಚುನಾವಣೆಗೆ ಹೈಕಮಾಂಡ್ ಬೆಂಬಲಿತ ಅಭ್ಯರ್ಥಿ ಆಗಿ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧಿಸಿದರೆ, ಕೇರಳದ ಶಶಿ ತರೂರ್ ಪ್ರತಿಸ್ಪರ್ಧಿ ಆಗಿ ಕಣಕ್ಕೆ ಇಳಿದಿದ್ದಾರೆ. ಇಬ್ಬರು ಅಭ್ಯರ್ಥಿಗಳು ಸೆಪ್ಟೆಂಬರ್ 30ರಂದು ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯು ಅಕ್ಟೋಬರ್ 17ರಂದು ನಡೆಯಲಿದ್ದು, ಫಲಿತಾಂಶವು ಅಕ್ಟೋಬರ್ 19ರಂದು ಹೊರ ಬೀಳಲಿದೆ. ಒಟ್ಟು 9100 ಕಾಂಗ್ರೆಸ್ ನಾಯಕರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದು, ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಏರುತ್ತಿರುವ ಎರಡನೇ ನಾಯಕ ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಏರುತ್ತಿರುವ ಎರಡನೇ ನಾಯಕ ಖರ್ಗೆ

ಕಾಂಗ್ರೆಸ್‌ನ ಬೆಂಬಲವನ್ನು ನೋಡುತ್ತಿದ್ದರೆ ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗುವುದು ಬಹುತೇಕ ಪಕ್ಕಾ ಆಗಿದೆ. ಹಾಗೊಂದು ವೇಳೆ ಆದರೆ, ಕರ್ನಾಟಕದಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಸ್ಥಾನಕ್ಕೆ ಏರಿದ ಎರಡನೇ ನಾಯಕರಾಗಿ ಮಲ್ಲಿಕಾರ್ಜುನ್ ಖರ್ಗೆ ಗುರುತಿಸಿಕೊಳ್ಳಲಿದ್ದಾರೆ. ಈ ಹಿಂದೆ 1968-69ರಲ್ಲಿ ಪಕ್ಷವನ್ನು ಮುನ್ನಡೆಸಿದ್ದ ಹಿರಿಯ ಲಿಂಗಾಯತ ಸಮುದಾಯದ ನಾಯಕ ಎಸ್ ನಿಜಲಿಂಗಪ್ಪ ಆಗಿದ್ದರು. 1967ರ ಸೋಲಿನ ನಂತರ ದೇಶದ ಹಲವಾರು ಭಾಗಗಳಲ್ಲಿ ಕಾಂಗ್ರೆಸ್ ಚುನಾವಣಾ ಅಸಮಾಧಾನವನ್ನು ಎದುರಿಸಿದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಕರ್ನಾಟಕದ ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ತಿಳಿಯಿರಿ

ಕರ್ನಾಟಕದ ಮಲ್ಲಿಕಾರ್ಜುನ್ ಖರ್ಗೆ ಬಗ್ಗೆ ತಿಳಿಯಿರಿ

ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದಲ್ಲಿ ಜುಲೈ 21, 1942ರಂದು ಮಲ್ಲಿಕಾರ್ಜುನ ಖರ್ಗೆ ಜನಿಸಿದರು. ಮಾಪಣ್ಣಾ ಮತ್ತು ಸೈಬವ್ವಾ ದಂಪತಿ ಪುತ್ರರಾಗಿ ಜನಿಸಿದ ಇವರು, ಕಾನೂನು ಪದವೀಧರರಾಗಿದ್ದಾರೆ. ಗುಲಬರ್ಗಾದ ನೂತನ ವಿದ್ಯಾಲಯ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ ಖರ್ಗೆ, ನಂತರ ಗುಲಬರ್ಗಾದ ಸರಕಾರಿ ಮಹಾವಿದ್ಯಾಲಯದಲ್ಲಿ ಬಿಎ ಪದವಿ ಪಡೆದುಕೊಂಡರು. ಇದರ ನಂತರ ಗುಲಬರ್ಗಾದ ಸೇಠ ಶಂಕರಲಾಲ ಲಾಹೋಟಿ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ಗುಲಬರ್ಗಾದ ಸರಕಾರಿ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವಾಗಲೇ ಇವರು ಕಾಲೇಜು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನಕ್ಕೆ ಮುನ್ನುಡಿ ಬರೆದಿದ್ದರು.

ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ 1972 ರಿಂದ 2008ರವರೆಗೂ ಸತತ ಒಂಬತ್ತು ಬಾರಿ ಆಯ್ಕೆಯಾಗಿದ್ದರು. 2009 ಮತ್ತು 2014ರಲ್ಲಿ ಒಟ್ಟು ಎರಡು ಬಾರಿ ಲೋಕಸಭಾ ಚುನಾವಣೆಗಳಲ್ಲಿ ಕಲಬುರಗಿ ಕ್ಷೇತ್ರದಿಂದ ಗೆಲುವಿನ ಪತಾಕೆ ಹಾರಿಸಿದ್ದರು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಕರ್ನಾಟಕದಿಂದ ಜೂನ್ 12, 2020ರಂದು ಸಂಸತ್ತಿನ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು.

ಖರ್ಗೆ ಅಖಾಡಕ್ಕೆ ಪ್ರವೇಶಿಸುತ್ತಿದ್ದಂತೆ ಜಿ-23 ನಾಯಕರು ಉಲ್ಟಾ?

ಖರ್ಗೆ ಅಖಾಡಕ್ಕೆ ಪ್ರವೇಶಿಸುತ್ತಿದ್ದಂತೆ ಜಿ-23 ನಾಯಕರು ಉಲ್ಟಾ?

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಬೇಕು ಎಂದು ಬಂಡಾಯದ ಬಾವುಟ ಹಾರಿಸಿದ್ದ ಜಿ-23 ನಾಯಕರ ತಂಡವು ತಮ್ಮದೇ ಗುಂಪಿನ ನಾಯಕನನ್ನು ಅಖಾಡಕ್ಕೆ ಇಳಿಸಲು ಅಣಿಯಾಗಿದ್ದವು. ಅಶೋಕ್ ಗೆಹ್ಲೋಟ್ ಹೆಸರು ಕಣದಲ್ಲಿ ತೇಲುತ್ತಿರುವವರೆಗೂ ಜಿ-23 ನಾಯಕರು ತಮ್ಮ ತಂಡದಿಂದ ಕೇರಳದ ತಿರುವನಂತಪುರಂ ಕ್ಷೇತ್ರದ ಸಂಸದ ಶಶಿ ತರೂರ್ ಅನ್ನು ತಮ್ಮ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಯೋಜನೆ ಹಾಕಿಕೊಂಡಿದ್ದವು. ಆದರೆ ಮಲ್ಲಿಕಾರ್ಜುನ ಖರ್ಗೆ ಹೆಸರು ರಾಷ್ಟ್ರೀಯ ಅಧ್ಯಕ್ಷರ ಸ್ಥಾನದಲ್ಲಿ ಪ್ರವೇಶಿಸುತ್ತಿದ್ದಂತೆ ಜಿ-23 ನಾಯಕರು ತಮ್ಮ ನಿಲುವು ಬದಲಿಸಿದಂತೆ ತೋರುತ್ತಿದೆ.

ಈ ಸಂಬಂಧ ಗುರುವಾರ ಸಭೆ ನಡೆಸಿದ್ದ ಜಿ-23 ನಾಯಕರು ಶಶಿ ತರೂರ್ ತಮಗೆ ಬೆಂಬಲ ನೀಡುವಂತೆ ಯಾವುದೇ ಜಿ-23 ನಾಯಕರಲ್ಲಿ ಮನವಿ ಮಾಡಿಕೊಂಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಬಗ್ಗೆ ತಮಗೆ ಯಾವುದೇ ಆಕ್ಷೇಪವಿಲ್ಲ ಎಂಬ ರಾಗವನ್ನು ಹಾಡುತ್ತಿದ್ದಾರೆ.

ತಿರುವನಂತಪುರಂ ಸಂಸದ ಶಶಿ ತರೂರ್ ಬಗ್ಗೆ ನಿಮಗೆಷ್ಟು ಗೊತ್ತು?

ತಿರುವನಂತಪುರಂ ಸಂಸದ ಶಶಿ ತರೂರ್ ಬಗ್ಗೆ ನಿಮಗೆಷ್ಟು ಗೊತ್ತು?

ಕೇರಳದ ಪಾಲಕ್ಕಾಡ್ ನ, ಚಿಟ್ಟಿಲಾಂಚೆರಿಯ ತರೂರ್ ಥಾರವಾಡ್ ಎಂಬ ಸ್ಥಳದಲ್ಲಿ ತರೂರ ಚಂದ್ರಶೇಖರನ್ ನಾಯರ್ ಮತ್ತು ಸುಲೇಖಾ ಮೆನನ್ ಪುತ್ರನಾಗಿ ಶಶಿ ತರೂರ್ ಜನಿಸಿದರು. ಯೆರ್ಕಾಡ್ ಮಾನ್ಫೋರ್ಟ್ ಶಾಲೆಯಲ್ಲಿ ವಿದ್ಯಾಭ್ಯಾಸ ಆರಂಭಿಸಿದ ಅವರು, ಕೋಲ್ಕಟಾದ ಸೇಂಟ್ ಝೇವಿಯರ್ ಕಾಲೇಜಿಯೇಟ್ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದುಕೊಂಡರು. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಚರಿತ್ರೆ ವಿಭಾಗದಲ್ಲಿ ಕಲಾ ಪದವಿಯನ್ನು ಪಡೆದರು. ನಂತರ ಟಫ್ಟ್ಸ್ ವಿಶ್ವವಿದ್ಯಾಲಯದ ಫ್ಲೆಚರ್ ಸ್ಕೂಲ್ ಆಫ್ ಲಾ ಎಂಡ್ ದಿಪ್ಲೊಮಸಿಯನ್ನು ಸೇರಿದರು. ತಮ್ಮ 22ನೆಯ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

2009ರ ಲೋಕಸಭಾ ಚುನಾವಣೆಗೆ ಕೇರಳದ ತಿರುವನಂತಪುರಂ ಕ್ಷೇತ್ರದಿಂದ ಶಶಿ ತರೂರ್ ರಾಜಕೀಯ ಪ್ರವೇಶಿಸಿದರು. ಎಡಪಕ್ಷದ ವಿರೋಧದ ಮತಗಳು ಹಲವಾರು ಅಭ್ಯರ್ಥಿಗಳಲ್ಲಿ ಹಂಚಿ ಹೋಗಿದ್ದರೂ ಸಹ, ಸುಮಾರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಶಶಿ ತರೂರ್ ಗೆಲುವು ಸಾಧಿಸಿದರು ಎಂದುಮೇ 16, 2009ರಂದು ಹೊರಬಿದ್ದ ಚುನಾವಣಾ ಫಲಿತಾಂಶದಲ್ಲಿ ಗೊತ್ತಾಯಿತು. ಕಳದ 30 ವರ್ಷಗಳಲ್ಲೇ ಮೊದಲ ಬಾರಿಗೆ ನಾಯಕರೊಬ್ಬರು ಈ ಕ್ಷೇತ್ರದಲ್ಲಿ ಇಷ್ಟೊಂದು ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು ದಾಖಲೆಯಾಗಿತ್ತು. ಅಲ್ಪಾವಧಿಯಲ್ಲೇ ಟ್ವಿಟರ್ ನಲ್ಲಿ ಒಂದು ಲಕ್ಷ ಅಭಿಮಾನಿಗಳನ್ನು ಹೊಂದಿರುವ ಮೊಟ್ಟಮೊದಲ ನಾಯಕ ಎನಿಸಿಕೊಂಡರು.

ಮೇ 28, 2009ರಂದು ಶಶಿ ತರೂರ್, ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸಂಪುಟದಲ್ಲಿ ವಿದೇಶಾಂಗ ಇಲಾಖೆಯ ರಾಜ್ಯಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

English summary
Mallikarjun Kharge vs Shashi Tharoor for AICC president : Congress to get a president from south India after 26 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X