Mallikarjun Kharge: ಬಿಜೆಪಿ ವಿರುದ್ಧ ವಾಗ್ದಾಳಿ ವೇಳೆ ಕುಸಿದು ಬಿದ್ದ ಮಲ್ಲಿಕಾರ್ಜುನ ಖರ್ಗೆ
Mallikarjun Kharge: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (82) ಅವರು ಇಂದು (ಸೆಪ್ಟೆಂಬರ್ 29) ಭಾಷಣ ಮಾಡುವಾಗಲೇ ವೇದಿಕೆ ಮೇಲೆ ದಿಢೀರ್ ಅಸ್ವಸ್ಥರಾದ ಘಟನೆ ಜಮ್ಮು & ಕಾಶ್ಮೀರದ ಕಥುವಾದಲ್ಲಿ ನಡೆದಿದೆ.
ಜಮ್ಮು-ಕಾಶ್ಮೀರಾ ಚುನಾವಣಾ ಪ್ರಚಾರ ಭಾಷಣದ ವೇಳೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಜಮ್ಮು ಕಾಶ್ಮೀರದ ಚುನಾವಣೆ ಪ್ರಚಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೇದಿಕೆ ಭಾಷಣ ಮಾಡುತ್ತಿದ್ದ ಅವರ ಧ್ವನಿಯು ತೀವ್ರವಾಗಿ ಕಟ್ಟಿಕೊಂಡಿದ್ದು, ಈ ವೇಳೆ ಅವರು ಮಾತನಾಡಲು ಆಗದಷ್ಟು ಆಯಾಸ ಅನುಭವಿಸಿದರು.

ಬಳಿಕ ಕೂಡಲೇ ವೇದಿಕೆ ಮೇಲಿದ್ದ ಕಾಂಗ್ರೆಸ್ ನಾಯಕರು ಹಾಗೂ ಖರ್ಗೆ ಅವರ ಭದ್ರತಾ ಸಿಬ್ಬಂದಿ ಅವರ ನೆರವಿಗೆ ಬಂದಿದ್ದು, ಕುಡಿಯಲು ನೀರು ಕೊಟ್ಟರು. ಬಳಿಕ ಖರ್ಗೆ ಅವರು ಕುಳಿತುಕೊಂಡು ಸುಧಾರಿಸಿಕೊಂಡರು. ಬಳಿಕ ಮತ್ತೆ ಭಾಷಣ ಮಾಡಲು ಮುಂದಾದಾಗಲೂ ತೀವ್ರ ಆಯಾಸವಾಗಿದೆ. ಸದ್ಯ ಇದೀಗ ಖರ್ಗೆಯವರ ಆರೋಗ್ಯ ಸ್ಥಿರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಿಜೆಪಿಯನ್ನು ಗುರಿಯಾಗಿಟ್ಟುಕೊಂಡು ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ ಅವರು, ಬಿಜೆಪಿಗರು ಎಂದಿಗೂ ಚುನಾವಣೆ ನಡೆಸಲು ಬಯಸುವುದಿಲ್ಲ. ಆದರೆ ಅವರು ಬಯಸಿದರೆ, ಅದನ್ನು ಒಂದು ಅಥವಾ ಎರಡು ವರ್ಷಗಳಲ್ಲಿ ಮಾಡಬಹುದಿತ್ತು. ಆದರೆ ಸುಪ್ರೀಂ ಕೋರ್ಟ್ ಆದೇಶದ ನಂತರ ಅವರು ಚುನಾವಣೆಗೆ ತಯಾರಿ ಆರಂಭಿಸಿದರು. ಅವರು ಚುನಾವಣೆಯನ್ನು ಬಯಸಿರಲಿಲ್ಲ ಎಂದು ಕಿಡಿಕಾರಿದರು
ಬಿಜೆಪಿಗರು ಲೆಫ್ಟಿನೆಂಟ್ ಗವರ್ನರ್ ಮೂಲಕ ರಿಮೋಟ್-ನಿಯಂತ್ರಿತ ಸರ್ಕಾರವನ್ನು ನಡೆಸಲು ಬಯಸಿದ್ದರು. ಪ್ರಧಾನ ಮಂತ್ರಿ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಭಾರತದ ಯುವಕರಿಗೆ ಏನನ್ನೂ ನೀಡಿಲ್ಲ. 10 ವರ್ಷಗಳಲ್ಲಿ ನಿಮ್ಮ ಸಮೃದ್ಧಿಯನ್ನು ಮರಳಿ ತರಲು ಸಾಧ್ಯವಾಗದ ವ್ಯಕ್ತಿಯನ್ನು ನೀವು ನಂಬಬಹುದೇ? ಯಾವುದೇ ಬಿಜೆಪಿ ನಾಯಕರು ನಿಮ್ಮ ಮುಂದೆ ಬಂದರೆ, ಅವರು ಪ್ರಗತಿ ತಂದಿದ್ದಾರೋ ಇಲ್ಲವೋ ಕೇಳಿ ಎಂದು ಹೇಳಿದರು.
ಭಾರೀ ಬಿಗಿ ಭದ್ರತೆ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಗೆ ಕ್ಟೋಬರ್ 1ರಂದು ಮೂರನೇ ಹಂತದ ಮತದಾನ ನಡೆಯಲಿದೆ. ಈ ಕೊನೆ ಹಂತದ ಮತದಾನ 40 ಕ್ಷೇತ್ರದಲ್ಲಿ ನಡೆಯಲಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ನಡೆಯುತ್ತಿದ್ದು, ಮೂರನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆಬಿದ್ದಿದೆ. ನಾಳೆಯಿಂದ ಅಂದರೆ ಸೋಮವಾರದಿಂದ ಪಕ್ಷಗಳು ಮನೆ ಮನೆ ಪ್ರಚಾರ ನಡೆಸಲಿವೆ.
ಈಗಾಗಲೇ ಒಂದು & ಎರಡನೇ ಹಂತದದಲ್ಲಿ ಮತದಾನ ಯಾವುದೇ ಗಲಭೆಗಳಿಲ್ಲದೆ, ಶಾಂತಿಯುತವಾಗಿ ನಡೆದಿವೆ. ಆದ್ದರಿಂದ ಕೊನೆಯ ಹಂತದ ಮತದಾನ ಕೂಡ ಶಾಂತಿಯುತವಾಗಿ ನಡೆಸಲು ಪೊಲೀಸರು, ಚುನಾವಣಾ ಆಯೋಗದಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.












Click it and Unblock the Notifications