ಮಂಗಗಳೊಂದಿಗೆ ಸೆಲ್ಫಿ ತೆಗೆಯಲು ಹೋಗಿ 500 ಅಡಿ ಕಮರಿಗೆ ಬಿದ್ದ ವ್ಯಕ್ತಿ- ಮುಂದೇನಾಯ್ತು ಓದಿ
ಪುಣೆ, ಡಿಸೆಂಬರ್ 5: ಇಲ್ಲಿಗೆ ಸಮೀಪದ ವರಂಧ ಘಾಟ್ ರಸ್ತೆಯಲ್ಲಿ ಕೋತಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ 39 ವರ್ಷದ ವ್ಯಕ್ತಿಯೊಬ್ಬರು 500 ಅಡಿ ಆಳದ ಕಮರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಮೃತ ಅಬ್ದುಲ್ ಶೇಖ್ ಅವರ ದೇಹವನ್ನು ಬುಧವಾರ ಮುಂಜಾನೆ ಪಡೆಯಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತನ್ನ ಕಾರಿನಲ್ಲಿ ಕೊಂಕಣ ಕಡೆಗೆ ಹೋಗುತ್ತಿದ್ದ ಅಬ್ದುಲ್ ಶೇಖ್, ವರಂಧ ಘಾಟ್ ರಸ್ತೆಯ ವಾಘಜೈ ದೇವಸ್ಥಾನದ ಬಳಿ ತಮ್ಮ ಕಾರನ್ನು ನಿಲ್ಲಿಸಿದ್ದರು ಎಂದು ಅವರು ಹೇಳಿದ್ದಾರೆ.

'ಸುತ್ತಲೂ ಕೆಲವು ಕೋತಿಗಳು ಇದ್ದವು. ಅವುಗಳೊಂದಿಗೆ ವ್ಯಕ್ತಿಯು ಸೆಲ್ಫಿ ಕ್ಲಿಕ್ಕಿಸಲು ಹೋಗಿದ್ದರು' ಎಂದು ಭೋರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿಠ್ಠಲ್ ದಬಾಡೆ ತಿಳಿಸಿದ್ದಾರೆ.
ಸ್ಥಳೀಯ ಸಹ್ಯಾದ್ರಿ ರಕ್ಷಣಾ ಗುಂಪಿನ ಸಹಾಯದಿಂದ ಪೊಲೀಸರು ಮೃತದೇಹವನ್ನು ಕಮರಿಯಿಂದ ಹೊರತೆಗೆದಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸೆಲ್ಫಿ ಹುಚ್ಚಿಗೆ ನಾಲ್ವರ ಬಲಿ
ಇದೇ ರೀತಿಯ ಘಟನೆಯೊಂದು ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದಲ್ಲಿ ನಡೆದಿತ್ತು. ಕಿತ್ವಾಡ ಪಾಲ್ಸ್‌ನಲ್ಲಿ ಸೆಲ್ಫಿ ತೆಗೆಯಲು ಹೋದಾಗ ನಾಲ್ವರು ಯುವತಿಯರು ಕಳೆದ ವರ್ಷದ ನವೆಂಬರ್‌ನಲ್ಲಿ ಮೃತಪಟ್ಟಿದ್ದರು. ಮೃತ ಯುವತಿಯರನ್ನು ಬೆಳಗಾವಿಯ ಉಜ್ವಲ ನಗರದ ಆಸಿಯಾ ಮುಜಾವರ್, ಅನಗೋಳದ ಕುದ್‌ಸಿಯ ಅಸ್ಮಾ ಪಟೇಲ್, ಜಟ್‌ಪಟ್ ಕಾಲನಿಯ ರುಕ್‌ಶಾರ್ ಬಿಸ್ತಿ ಹಾಗೂ ತಸ್ಮಿಯಾ ಎಂದು ಗುರುತಿಸಲಾಗಿತ್ತು. ಈ ನಾಲ್ವರ ಜೊತೆ ಇನ್ನೊಬ್ಬ ಯುವತಿ ತೀವ್ರವಾಗಿ ಗಾಯಗೊಂಡಿದ್ದರು. ಇವರ ದೇಹವನ್ನು ಪೊಲೀಸರು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದರು. ಈ ದುರಂತ ಭಾರೀ ಸದ್ದು ಮಾಡಿತ್ತು. ಪ್ರವಾಸಿ ಸ್ಥಳಗಳಲ್ಲಿ ಸೆಲ್ಫಿಗೆ ಅವಕಾಶ ನೀಡಬಾರದೆಂಬ ಮಾತೂಗಳೂ ಕೇಳಿಬಂದಿದ್ದವು.

ಹನೂರು ತಾಲ್ಲೂಕಿನಲ್ಲೂ ಘಟನೆ
ಹನೂರು ತಾಲ್ಲೂಕಿನ ಹೊಗೆನಕಲ್ ಪಾಲ್ಸ್‌ನಲ್ಲೂ ಇಂತದೇ ಘಟನೆ ನಡೆದಿತ್ತು. ವಿದ್ಯಾರ್ಥಿಯೊಬ್ಬ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜಲಪಾತಕ್ಕೆ ಬಿದ್ದು, ನೀರುಪಾಲಾಗಿದ್ದ. ಮೈಸೂರು ಮೂಲಕ ಸಂಗಮೇಶ್ ಎಂಬುವವರ ಪುತ್ರ ಉಮಾಶಂಕರ್ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದ. ಈತ ನರ್ಸಿಂಗ್ ಓದುತ್ತಿದ್ದ. ಈತನಿಗೆ 19 ವರ್ಷ ವಯಸ್ಸಾಗಿತ್ತು.
ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಈತ ಆರಂಭದಿಂದಲೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಲೇ ಇದ್ದ. ಸ್ನೇಹಿತರ ಬೇಡವೆಂದರೂ ಜಲಪಾತದ ಬಳಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಆ ಸಮಯದಲ್ಲಿ ಜಲಪಾತಕ್ಕೆ ಬಿದ್ದನೆಂದು ಗೆಳೆಯರು ಮಾಹಿತಿ ನೀಡಿದ್ದರು. 80 ಅಡಿ ಆಳವಾದ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದ. ಮಲೇಮಹದೇಶ್ವರ ಬೆಟ್ಟದ ಪೊಲೀಸರು ಈತನ ಮೃತದೇಹವನ್ನು ಹೊರತೆಗೆದಿದ್ದರು.












Click it and Unblock the Notifications