Maharashtra Election 2024: ಬಿಜೆಪಿ ಸಿಎಂ ಆಯ್ಕೆ, ಏಕನಾಥ್ ಶಿಂಧೆ ಘೋಷಣೆ ಮೇಲೆ ಎಲ್ಲರ ಕಣ್ಣು!
ಮುಂಬೈ, ಡಿಸೆಂಬರ್ 01: ಮಹಾರಾಷ್ಟ್ರ ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ಯಾವಾಗ?, ಮುಖ್ಯಮಂತ್ರಿ ಯಾರು?. ಒಂದು ವಾರದಿಂದ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿ ಒಂದು ವಾರ ಕಳೆದರೂ, ಸ್ಪಷ್ಟ ಬಹುಮತ ಇದ್ದರೂ ಸಹ 'ಮಹಾಯತಿ' ಮೈತ್ರಿಕೂಟದ ಸರ್ಕಾರ ರಚನೆಯಾಗಿಲ್ಲ. ಚುನಾವಣೆಯಲ್ಲಿ 132 ಸೀಟು ಗೆದ್ದು ದೊಡ್ಡ ಪಕ್ಷವಾಗಿರುವ ಬಿಜೆಪಿ ಮುಖ್ಯಮಂತ್ರಿ ಘೋಷಣೆ ಮಾಡಿಲ್ಲ.
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 145. 'ಮಹಾಯತಿ' ಮೈತ್ರಿಕೂಟ 230 ಶಾಸಕರ ಬಲ ಹೊಂದಿದೆ. ಆದರೆ ನೂತನ ಮುಖ್ಯಮಂತ್ರಿ ಹೆಸರು ಘೋಷಣೆ, ಖಾತೆ ಹಂಚಿಕೆ ಕಗ್ಗಂಟಾಗಿದ್ದು, ಸರ್ಕಾರ ರಚನೆ ವಿಳಂಬವಾಗುತ್ತಿದೆ. ರಾಜ್ಯದ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ಶೀತ, ಜ್ವರದಿಂದ ಬಳಲುತ್ತಿರುವ ಏಕನಾಥ್ ಶಿಂಧೆ ತವರು ಜಿಲ್ಲೆ ಸತಾರಾದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಶನಿವಾರ ಸಂಜೆ ಅವರು ಮುಂಬೈಗೆ ವಾಪಸ್ ಆಗಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದು, ಅವರ ಬಹುದೊಡ್ಡ ತೀರ್ಮಾನ ಏನು? ಎಂದು ಎಲ್ಲರೂ ಕಾದು ಕುಳಿತಿದ್ದಾರೆ.
ಚೇತರಿಸಿಕೊಳ್ಳುತ್ತಿದ್ದಾರೆ: ಏಕನಾಥ್ ಶಿಂಧೆ ಅವರು ಚೇತರಿಸಿಕೊಳ್ಳುತ್ತಿದ್ದಾರೆ. 3 ರಿಂದ 4 ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ ಎಂದು ಡಾ. ರಾಮ್ ಪಾಠ್ರೆ ಹೇಳಿಕೆ ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ. ನವೆಂಬರ್ 23ರಂದು ಚುನಾವಣೆ ಫಲಿತಾಂಶ ಘೋಷಣೆಯಾಗಿ, ಮಹಾಯತಿ ಮೈತ್ರಿಕೂಟ ಐತಿಹಾಸಿಕ ಫಲಿತಾಂಶ ಪಡೆದ ಬಳಿಕ ಏಕನಾಥ್ ಶಿಂಧೆ ಪ್ರತಿ ಹೆಜ್ಜೆಯೂ ರಾಜ್ಯ ರಾಜಕೀಯದಲ್ಲಿ ಕುತೂಹಲವನ್ನು ಮೂಡಿಸಿದೆ.
ಬಿಜೆಪಿ ಮುಖ್ಯಮಂತ್ರಿ ಹುದ್ದೆಗೆ ದೇವೇಂದ್ರ ಫಡ್ನವೀಸ್ ಆಯ್ಕೆ ಮಾಡುವ ನಿರೀಕ್ಷೆ ಇದೆ. ಮಹಾಯತಿ ಮೈತ್ರಿಕೂಟದ ಮತ್ತೊಂದು ಪಕ್ಷವಾದ ಎನ್‌ಸಿಪಿ (ಅಜಿತ್ ಪವಾರ್ ಬಣ) ಇದಕ್ಕೆ ಹಸಿರು ನಿಶಾನೆ ತೋರಿಸಿದೆ. ಸಿಎಂ ಆಯ್ಕೆ ಬಗ್ಗೆ ಶುಕ್ರವಾರ ನಡೆಯಬೇಕಿದ್ದ ಮಹತ್ವದ ಸಭೆಯನ್ನು ರದ್ದುಗೊಳಿಸಿ ಏಕನಾಥ್ ಶಿಂಧೆ ಸತಾರಾಕ್ಕೆ ಹೋಗಿದ್ದು, ಇನ್ನೂ ಮುಂಬೈಗೆ ವಾಪಸ್ ಆಗಿಲ್ಲ.
ಮುಖ್ಯಮಂತ್ರಿ ಆಯ್ಕೆ, ಖಾತೆ ಹಂಚಿಕೆ ಕಗ್ಗಂಟಿನ ನಡುವೆಯೇ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ, "ಡಿಸೆಂಬರ್ 5ರ ಸಂಜೆ 5 ಗಂಟೆಗೆ ಮುಂಬೈನ ಆಜಾದ್ ಮೈದಾನದಲ್ಲಿ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ" ಎಂದು ಹೇಳಿದ್ದಾರೆ.
ಶಿವಸೇನೆ (ಏಕನಾಥ್ ಶಿಂಧೆ ಬಣ) ಶನಿವಾರ ಸಂಜೆ ಏಕನಾಥ್ ಶಿಂಧೆ ದೊಡ್ಡ ತೀರ್ಮಾನವೊಂದನ್ನು ತೆಗೆದುಕೊಳ್ಳಲಿದ್ದಾರೆ ಎಂದು ಸುಳಿವು ನೀಡಿತ್ತು. ಈಗಾಗಲೇ ಬಿಜೆಪಿಗೆ ಮುಖ್ಯಮಂತ್ರಿ ಪಟ್ಟ ಎಂದು ಹೇಳಿರುವ ಶಿಂಧೆ, ತಾನು ಉಪ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಬಹುದೊಡ್ಡ ತೀರ್ಮಾನ ಏನು? ಎಂಬುದು ಇನ್ನೂ ಚರ್ಚೆಯಾಗುತ್ತಲೇ ಇದೆ.
2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 132 ಸೀಟುಗಳನ್ನು ಗೆದ್ದಿರುವ ಬಿಜೆಪಿ 'ಮಹಾಯತಿ' ಮೈತ್ರಿಕೂಟದ ನೆರವಿನಿಂದ ಸರ್ಕಾರ ರಚಿಸಲಿದೆ. ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟು ಹೊಂದಿದ್ದು, ಸರ್ಕಾರ ರಚನೆಗೆ ಸ್ಪಷ್ಟವಾದ ಬಹುಮತವಿದೆ. ಎನ್‌ಸಿಪಿ ಬಿಜೆಪಿಗೆ ಮುಖ್ಯಮಂತ್ರಿ ಪಟ್ಟ ಎಂದು ಬೆಂಬಲವನ್ನು ಘೋಷಣೆ ಮಾಡಿದೆ.












Click it and Unblock the Notifications