Tomato Price Hike: ಟೊಮ್ಯಾಟೋ ಬೆಳೆದು 2.8 ಕೋಟಿ ರೂಪಾಯಿ ಗಳಿಸಿದ ರೈತ : 3.5 ಕೋಟಿ ರೂಪಾಯಿ ಆದಾಯ ನಿರೀಕ್ಷೆ
ದೇಶಾದ್ಯಂತ ಟೊಮ್ಯಾಟೋ ದರ ಗಗನಕ್ಕೇರಿದ್ದು, ಹಿಂದೆಂದೂ ಕಾಣದಂತ ಬೆಲೆಗೆ ಮಾರಾಟವಾಗುತ್ತಿದೆ. ಹಲವು ವರ್ಷಗಳಿಂದ ಟೊಮ್ಯಾಟೋ ಬೆಳೆದು ಕೈಸುಟ್ಟುಕೊಂಡಿದ್ದ ರೈತರು ಈ ಬಾರಿ ಲಾಭದ ಮುಖ ನೋಡುತ್ತಿದ್ದಾರೆ. ಕೆಲವು ರೈತರಿಗೆ ಬಂಪರ್ ಲಾಟರಿ ಹೊಡೆದಿದ್ದು, ಲಕ್ಷಗಟ್ಟಲೆ ಆದಾಯ ಗಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತರೊಬ್ಬರು ಟೊಮ್ಯಾಟೊ ಮಾರಾಟ ಮಾಡಿ ₹2.8 ಕೋಟಿಗೂ ಹೆಚ್ಚು ಆದಾಯ ಗಳಿಸಿರುವುದಾಗಿ ಹೇಳಿಕೊಂಡಿದ್ದಾರೆ. ಪುಣೆಯ ಜುನ್ನಾರ್ ತಾಲೂಕಿನವರಾದ ಈಶ್ವರ ಗಾಯಕರ್ (36) ಮತ್ತು ಅವರ ಪತ್ನಿ ಕೋಟಿ ದುಡಿದ ರೈತರಾಗಿದ್ದಾರೆ. ಇನ್ನೂ ಟೊಮ್ಯಾಟೋ ಬೆಳೆ ಇದ್ದು, ಮುಗಿಯುವ ವೇಳೆಗೆ ₹ 3.5 ಕೋಟಿ ಗಳಿಸುವ ಗುರಿಯನ್ನು ಹೊಂದಿದ್ದಾರೆ.

ಇವರೇನು ಏಕಾಏಕಿ ಟೊಮ್ಯಾಟೋ ಬೆಳೆದು ಕೋಟ್ಯಧಿಪತಿಯಾಗಿದ್ದಲ್ಲ, ಹಲವು ವರ್ಷಗಳಿಂದ ಟೊಮ್ಯಾಟೋ ಬೆಳೆಯುತ್ತಿದ್ದು ಕೈಸುಟ್ಟುಕೊಂಡರೂ ಛಲಬಿಡದೆ ಬೆಳೆಯುತ್ತಿದ್ದು, ಈ ಬಾರಿ ಅದೃಷ್ಟ ಕೈಹಿಡಿದಿದೆ.
20 ಲಕ್ಷ ನಷ್ಟ ಮಾಡಿಕೊಂಡಿದ್ದ ರೈತ
ಕಳೆದ ಆರೇಳು ವರ್ಷಗಳಿಂದ ತಮ್ಮ 12 ಎಕರೆ ಜಮೀನಿನಲ್ಲಿ ಟೊಮ್ಯಾಟೊ ಕೃಷಿ ಮಾಡುತ್ತಿದ್ದು, ನಾನೂ ಕೂಡ ನಷ್ಟ ಅನುಭವಿಸಿದ್ದೇನೆ ಎಂದು ಈಶ್ವರ ಗಾಯಕರ ಹೇಳಿದ್ದಾರೆ, 'ಇದು ಒಂದೇ ದಿನದಲ್ಲಿ ಗಳಿಸಿದ ಕೆಲಸವಲ್ಲ. ಹಲವಾರು ಬಾರಿ ನಾನು ನಷ್ಟ ಅನುಭವಿಸಿದ್ದೇನೆ 2021 ರಲ್ಲಿ ನಾನು 18-20 ಲಕ್ಷ ರೂಪಾಯಿ ನಷ್ಟವನ್ನು ಮಾಡಿದೆ ಆದರೆ ನಾನು ಕೃಷಿ ನಿಲ್ಲಿಸಲಿಲ್ಲ. ಭರವಸೆಯನ್ನು ಎಂದಿಗೂ ಬಿಟ್ಟಿಲ್ಲ ಈಗ ಕೈಹಿಡಿದಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಈ ವರ್ಷ 12 ಎಕರೆಯಲ್ಲಿ ಟೊಮೇಟೊ ಬೆಳೆದು ಬಂದಿರುವ ಲಾಭದ ಬಗ್ಗೆ ಮಾತನಾಡಿದ ಗಾಯಕರ್, "ಈ ವರ್ಷ 12 ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದು, ಇಲ್ಲಿಯವರೆಗೆ ₹770 ರಿಂದ ₹2311 ಬೆಲೆಯ ಸುಮಾರು 17000 ಕ್ರೇಟ್‌ಗಳನ್ನು ಮಾರಾಟ ಮಾಡಿದ್ದೇನೆ. ಹೀಗಾಗಿ ಇದುವರೆಗೂ ಒಟ್ಟು ₹ 2.8 ಕೋಟಿ ರೂ. ಬಂದಂತಾಗಿದೆ ಎಂದು ಹೇಳಿದರು.
"ನನ್ನ ಜಮೀನಿನಲ್ಲಿ ಇನ್ನೂ ಸುಮಾರು 3000 ರಿಂದ 4000 ಕ್ರೇಟ್ ಟೊಮೆಟೊಗಳ ದಾಸ್ತಾನು ಇದೆ. ಅದನ್ನು ಲೆಕ್ಕ ಹಾಕಿದರೆ ಈ ವರ್ಷ ನನ್ನ ಒಟ್ಟು ಗಳಿಕೆಯು ಸುಮಾರು ₹ 3.5 ಕೋಟಿಗೆ ಏರುತ್ತದೆ" ಎಂದು ಅವರು ಹೇಳಿದರು.
ಸಂತಸಗೊಂಡ ರೈತನ ಕುಟುಂಬ
ತಮ್ಮ ಯಶಸ್ಸಿನಿಂದ ಕುಟುಂಬ ಸಂತಸಗೊಂಡಿದೆ ಎಂದು ಗಾಯಕರ್ ಹೇಳಿದ್ದಾರೆ. ತಮ್ಮೊಂದಿಗೆ ಜಮೀನಿನಲ್ಲಿ ಕೆಲಸ ಮಾಡುವ ಪತ್ನಿ ಹಾಗೂ ತಂದೆ-ತಾಯಿ, ಅಜ್ಜಿಯರ ಬೆಂಬಲಕ್ಕೆ ಧನ್ಯವಾದ ಹೇಳಿದರು. ನನ್ನ ತಂದೆ-ತಾಯಿ, ಅಜ್ಜ ಅಜ್ಜಿಯರ ಆಶೀರ್ವಾದ ಹಾಗೂ ಜೊತೆಯಲ್ಲಿ ಕೆಲಸ ಮಾಡುವ ಪತ್ನಿಯ ಪರಿಶ್ರಮದಿಂದ ಈ ಯಶಸ್ಸು ಸಿಕ್ಕಿದೆ ಎಂದು ಭಾವಿಸುತ್ತೇನೆ. ನಮ್ಮ ಟೊಮ್ಯಾಟೊಗೆ ಸಿಕ್ಕಿದ ಬೆಲೆಯಿಂದ ನನ್ನ ಕುಟುಂಬದ ಎಲ್ಲರೂ ಸಂತೋಷವಾಗಿದ್ದಾರೆ ಎಂದು ಹೇಳಿದರು.
ಈಗ ಲಕ್ಷ, ಕೋಟಿಯಲ್ಲಿ ಹಲವ ರೈತರು ಲಾಭ ಮಾಡಿದ್ದಾರೆ ಎಂದು ಎಲ್ಲರೂ ಟೊಮ್ಯಾಟೋ ಬೆಳೆದು ಲಕ್ಷ ಲಕ್ಷ ದುಡಿಯಲು ಸಾಧ್ಯವಿಲ್ಲ. ಟೊಮ್ಯಾಟೋ ಮತ್ತು ಈರುಳ್ಳಿ ಎನ್ನುವುದು ಲಾಟರಿ ಬೆಳೆಗಳು ಇದ್ದಂತೆ, ಬಂದರೆ ಹೆಚ್ಚು ಲಾಭ, ಹೋದರೂ ಹೆಚ್ಚು ನಷ್ಟ.












Click it and Unblock the Notifications