Maharashtra Election: ಬಿಜೆಪಿ ಉಗ್ರ ಹಿಂದುತ್ವ; ಮಿತ್ರ ಪಕ್ಷಗಳಿಗೇ ನುಂಗಲಾಗದ ಬಿಸಿ ತುಪ್ಪ, ಯಾಕೆ ನೋಡಿ
Extreme Hindutva: ಮಹಾರಾಷ್ಟ್ರ ಚುನಾವಣೆಗೆ ಇನ್ನು ಸರಿಯಾಗಿ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಇದೇ 20ರಂದು ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇಲ್ಲಿ ಬಿಜೆಪಿ ಉಗ್ರ ಹಿಂದುತ್ವ ಅಸ್ತ್ರವನ್ನು ಪ್ರಯೋಗಿಸುವುದಕ್ಕೆ ಮುಂದಾಗಿದೆ. ಬಿಜೆಪಿಯ ಈ ನಡೆ ವಿರೋಧ ಪಕ್ಷಗಳಿಗಿಂತ ಬಿಜೆಪಿಯ ಮಿತ್ರಪಕ್ಷಗಳಲ್ಲೇ ಇನ್ನಿಲ್ಲದ ಆತಂಕವನ್ನು ಮೂಡಿಸಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಏನಾಗಬಹುದು ಎನ್ನುವ ಕುತೂಹಲ ಮೂಡಿದೆ. ಮಹಾರಾಷ್ಟ್ರ ಚುನಾವಣೆ ಈ ಬಾರಿ ಹಲವು ಕಾರಣಕ್ಕೆ ವಿಶೇಷವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದರೆ, ಈ ಬಾರಿ ಇಲ್ಲಿ ಇರುವುದೆಲ್ಲ ಸಣ್ಣ ಸಣ್ಣ ಪಕ್ಷಗಳೇ..
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿ ಸರ್ಕಾರಕ್ಕೆ ಈ ಬಾರಿ ಆಡಳಿತ ವಿರೋಧಿ ಅಲೆ ಇದೆ. ಹೀಗಾಗಿ, ಈ ರಾಜ್ಯದಲ್ಲಿ ಗೆಲುವು ಸಾಧಿಸುವುದಕ್ಕೆ ಬಿಜೆಪಿ ಹಾಗೂ ಮಿತ್ರಪಕ್ಷಗಳು ತಿಣುಕಾಡುತ್ತಿವೆ. ಈ ನಡುವೆ ಕಾಂಗ್ರೆಸ್ ನೇತೃತ್ವದ ಮಹಾವಿಕಾಸ್ ಅಘಾಡಿ ಮೈತ್ರಿ ಪಕ್ಷಗಳು ಸಹ ಮಹಾಯುತಿಗೆ ಟಫ್ ಫೈಟ್ ಕೊಡ್ತಿವೆ. ಈ ಎಲ್ಲಾ ಗೊಂದಲಗಳ ನಡುವೆಯೇ ಬಿಜೆಪಿ ಇಲ್ಲ ತನ್ನ ಉಗ್ರ ಹಿಂದುತ್ವಕ್ಕೆ ಮಣೆಯಾಕಿದೆ.

ಬಿಜೆಪಿಯಿಂದ ಉಗ್ರ ಹಿಂದುತ್ವ: ಬಿಜೆಪಿ ಉಗ್ರ ಹಿಂದುತ್ವದ ಮೊರೆ ಹೋಗಿದೆ. ಇಲ್ಲಿ ಬಟೇಂಗೆ ತೊ ಕಟೇಂಗೆ ಎನ್ನುವ ಘೋಷಣೆಯನ್ನು ಬಿಜೆಪಿ ಪ್ರಚಾರ ಮಾಡುತ್ತಿದೆ. ಇದರ ಅರ್ಥ ನಾವು ಒಟ್ಟಾಗಿ ಇಲ್ಲದಿದ್ದರೆ ನಮ್ಮನ್ನು ಮುಗಿಸುತ್ತಾರೆ ಎನ್ನುವುದೇ ಆಗಿದೆ. ಮಹಾರಾಷ್ಟ್ರದ ಬಿಜೆಪಿ ಮೈತ್ರಿಕೂಟದ ಚುನಾವಣೆ ಪ್ರಚಾರದಲ್ಲಿ ಈಚೆಗೆ ಭಾಗಿಯಾಗಿದ್ದ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಈ ಹೇಳಿಕೆ ಕೊಟ್ಟಿದ್ದು, ಇದನ್ನೇ ಬಿಜೆಪಿ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿದೆ.
ಸಂವಿಧಾನ ಉಳಿಸಿ ಅಭಿಯಾನ: ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆಯ ಸಂದರ್ಭದಿಂದಲೂ ಸಂವಿಧಾನ ಉಳಿಸಿ ಅಭಿಯಾನವನ್ನು ಮುಂದುವರಿಸಿಕೊಂಡು ಬಂದಿದೆ. ಈ ಅಭಿಯಾನವು ಕಾಂಗ್ರೆಸ್‌ಗೆ ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಸ್ಥಾನಗಳನ್ನು ಗೆಲ್ಲುವುದಕ್ಕೆ ನೆರವಾಗಿದೆ. ಆದರೆ, ಈ ಅಭಿಯಾನ ಈಗ ಕಾಂಗ್ರೆಸ್‌ಗೆ ಅಲ್ಪ ಪ್ರಮಾಣದಲ್ಲಿ ತಿರುಗುಬಾಣವಾಗಿದೆ. ಇದಕ್ಕೆ ಬಿಜೆಪಿ ಮಾಡಿರುವ ಅಪಪ್ರಚಾರವೂ ಕಾರಣವಾಗಿದೆ.
ಮಹಾರಾಷ್ಟ್ರದ ಚುನಾವಣೆ ಪ್ರಚಾರ ರ್ಯಾಲಿಯಲ್ಲಿ ಜನರಿಗೆ ನೀಡಲಾಗಿದ್ದ ಸಂವಿಧಾನ ಪ್ರತಿಯಲ್ಲಿ ಹಾಳೆಗಳು ಖಾಲಿಯಾಗಿದ್ದವು ಎಂದು ವಿಡಿಯೋ ಮಾಡಿ ಬಿಜೆಪಿ ಹಂಚಿಕೊಂಡಿತ್ತು. ಇದು ಕಾಂಗ್ರೆಸ್‌ಗೆ ಅಲ್ಪ ಪ್ರಮಾಣದಲ್ಲಿ ಹಿನ್ನಡೆಯಾಗಿದೆ.
ಮಿತ್ರ ಪಕ್ಷಗಳಿಗೆ ಸಂಕಷ್ಟ: ಬಿಜೆಪಿಯ ಉಗ್ರ ಹಿಂದುತ್ವ ಬಿಜೆಪಿಯ ಮಿತ್ರ ಪಕ್ಷಗಳಿಗೆ ಸಂಕಷ್ಟ ತಂದೊಡ್ಡಿದೆ. ಯಾಕೆಂದರೆ ಶಿವಸೇನಾದ (ಏಕನಾಥ ಶಿಂಧೆ ಬಣವು) ಮೊದಲಿನಿಂದಲೂ ಉಗ್ರ ಹಿಂದುತ್ವದ ಬುನಾದಿಯ ಮೇಲೆ ಬೆಳೆದು ಬಂದಿದೆ. ಈಗ ಆ ಪಕ್ಷಕ್ಕೆ ತಲೆನೋವಾಗಿರುವುದು ಮಹಾರಾಷ್ಟ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಎಲ್ಲಿ ಈ ಅಭಿಯಾನದಿಂದ ಹಿನ್ನೆಲೆಗೆ ಸರಿಯುತ್ತದೆಯೋ ಎನ್ನುವುದು.
ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರ ಅಧಿಕಾರದಲ್ಲಿ ಇದೆ. ಶಿವಸೇನಾದ ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿಯಾಗಿದ್ದಾರೆ. ಕಳೆದ 2.5 ವರ್ಷದಲ್ಲಿ ಅವರ ಅವಧಿಯಲ್ಲಿ ಸಾಕಷ್ಟು ಕೆಲಸಗಳು ಸಹ ಆಗಿವೆ. ಆದರೆ, ಚುನಾವಣೆ ಸಮಯದಲ್ಲಿ ಅದು ಚರ್ಚೆಯಾಗದೆ ಇದ್ದರೆ, ಪಕ್ಷದ ಅಭ್ಯರ್ಥಿ ಹಾಗೂ ತನಗೂ ಹಿನ್ನಡೆ ಆಗಲಿದೆ ಎನ್ನುವ ಆತಂಕ ಶಿಂಧೆ ಅವರದ್ದು.
ಇನ್ನು ಮಹಾಯುತಿಯ (ಬಿಜೆಪಿ) ಮತ್ತೊಂದು ಮೈತ್ರಿ ಪಕ್ಷವಾದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಅಜಿತ್ ಪವಾರ್ ಬಣ)ಯದ್ದು ಇನ್ನೊಂದು ರೀತಿಯ ತಲೆನೋವು. ಈ ಪಕ್ಷವು ಅತಿ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳನ್ನು ಈ ಬಾರಿ ಕಣಕ್ಕೆ ಇಳಿಸಿದೆ. ಈ ಪಕ್ಷವು ಟಿಕೆಟ್ ನೀಡಿರುವ ಅಭ್ಯರ್ಥಿಗಳಲ್ಲಿ ಶೇ 10ರಷ್ಟು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ, ಬಿಜೆಪಿಯು ಉಗ್ರ ಹಿಂದುತ್ವ ಅಸ್ತ್ರ ಮಿತ್ರ ಪಕ್ಷಗಳಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ.












Click it and Unblock the Notifications