Maharashtra Assembly Elections 2024: ಮಹಾಯತಿ ಮೈತ್ರಿಕೂಟದ ಮೊದಲ ಪಟ್ಟಿ, 235 ಅಭ್ಯರ್ಥಿ ಘೋಷಣೆ
ಮುಂಬೈ, ಅಕ್ಟೋಬರ್ 13: ಮಹಾರಾಷ್ಟ್ರ ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧಗೊಳ್ಳುತ್ತಿದೆ. 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಚುನಾವಣೆ ಎದುರಿಸಲು ಬಿಜೆಪಿ ನೇತೃತ್ವದಲ್ಲಿ 'ಮಹಾಯತಿ' ಮತ್ತು ಕಾಂಗ್ರೆಸ್ ನೇತೃತ್ವದಲ್ಲಿ 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟ ರಚನೆಯಾಗಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 146.
ಮಹಾರಾಷ್ಟ್ರ ಚುನಾವಣೆಗಾಗಿ ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ. ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ಮೈತ್ರಿಕೂಟ ತಯಾರಿ ನಡೆಸಿದೆ.

ಕೇಂದ್ರ ಚುನಾವಣಾ ಆಯೋಗ ಮುಂದಿನ ವಾರದಲ್ಲಿ ಮಹಾರಾಷ್ಟ್ರ ಚುನಾವಣೆ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇದೆ. ಇದಕ್ಕೂ ಮೊದಲು 'ಮಹಾಯುತಿ' ಮೈತ್ರಿಕೂಟ ಸೀಟು ಹಂಚಿಕೆ ಅಂತಿಮಗೊಳಿಸಿ, ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಎಷ್ಟು ಅಭ್ಯರ್ಥಿಗಳು?: 'ಮಹಾಯುತಿ' ಮೈತ್ರಿಕೂಟದ ಸೀಟು ಹಂಚಿಕೆ ಪ್ರಕಾರ ಬಿಜೆಪಿ 150, ಶಿವಸೇನೆ (ಏಕನಾಥ್ ಶಿಂಧೆ) 75-80 ಮತ್ತು ಎನ್‌ಸಿಪಿ (ಅಜಿತ್ ಪವಾರ್) 60-65 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ನಿರೀಕ್ಷೆ ಇದೆ. ಆದರೆ ಎನ್‌ಸಿಪಿಗೆ ಹೆಚ್ಚಿನ ಸೀಟುಗಳನ್ನು ನೀಡುವುದಕ್ಕೆ ಆರ್‌ಎಸ್‌ಎಸ್ ವಿರೋಧ ವ್ಯಕ್ತಪಡಿಸಿದೆ. ಬಿಜೆಪಿ ಹೈಕಮಾಂಡ್ ನಾಯಕರು ಒಪ್ಪಿಗೆ ನೀಡಿದರೆ ಈ ಸೀಟು ಹಂಚಿಕೆ ಸೂತ್ರದ ಮೇಲೆಯೇ ಚುನಾವಣೆಗೆ ಮೈತ್ರಿಕೂಟ ಹೋಗಲಿದೆ.
ಮೊದಲ ಪಟ್ಟಿಯಲ್ಲಿ 288 ಕ್ಷೇತ್ರಗಳ ಪೈಕಿ 235 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಯಾವುದೇ ಸಮಸ್ಯೆ ಇರದ, ಹೆಚ್ಚು ಆಕಾಂಕ್ಷಿಗಳು ಇರದ ಮತ್ತು ಹಾಲಿ ಶಾಸಕರು ಇರುವ ಕ್ಷೇತ್ರಗಳನ್ನು ಮೂರು ಪಕ್ಷಗಳು ಅಂತಿಮಗೊಳಿಸಿವೆ. ಗೆಲ್ಲುವುದೇ ಚುನಾವಣೆ ಟಿಕೆಟ್ ನೀಡಲು ಮಾನದಂಡವಾಗಿದೆ.
ಕಳೆದ ತಿಂಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬೈನಲ್ಲಿ ಎರಡು ದಿನ ವಾಸ್ತವ್ಯ ಹೂಡಿದ್ದರು. ಆಗ ಯಾವ-ಯಾವ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆಯೋ ಆ ಕ್ಷೇತ್ರವನ್ನು ಬಿಟ್ಟುಕೊಟದೇ ಉಳಿಸಿಕೊಳ್ಳುವ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಕೆಲವು ಕ್ಷೇತ್ರದಲ್ಲಿ ಸೀಟುಗಳನ್ನು ನೀಡುವ ಕುರಿತು ಎನ್‌ಸಿಪಿ, ಶಿವಸೇನೆ ಜೊತೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಚರ್ಚೆ ನಡೆಸಿದ್ದಾರೆ.
ಮುಂಬೈ ನಗರದಲ್ಲಿ ಮತ್ತು ವಿದರ್ಭ ಪ್ರಾಂತ್ಯದಲ್ಲಿ ಬಿಜೆಪಿಯ ಪ್ರಭಾವ ಹೆಚ್ಚಿದೆ. ಆದ್ದರಿಂದ ಇಲ್ಲಿನ ಸೀಟುಗಳನ್ನು ಪಕ್ಷಕ್ಕೆ ಬಿಟ್ಟುಕೊಡಲು ಶಿವಸೇನೆ, ಎನ್‌ಸಿಪಿ ಒಪ್ಪಿಗೆ ನೀಡಿವೆ. "ನಾವು ಒಂದು ಸರಳ ಸೂತ್ರ ಮಂದಿಟ್ಟಿದ್ದೆವು. 60-65 ಸೀಟು ನಮಗೆ ಸಿಕ್ಕಿದರೆ ನಮಗೆ ಸಂತಸವಾಗುತ್ತದೆ. ಇದಕ್ಕೆ ನಾವು ಒಪ್ಪುತ್ತೇವೆ" ಎಂದು ಎನ್‌ಸಿಪಿ ನಾಯಕ, ಡಿಸಿಎಂ ಅಜಿತ್ ಪವಾರ್ ಹೇಳಿದ್ದಾರೆ.
ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚೆಯಾದ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಎನ್‌ಸಿಪಿ, ಶಿವಸೇನೆಯ ಮಾಹಿತಿ ಪ್ರಕಾರ ಬಿಜೆಪಿ ಕಣಕ್ಕಿಳಿಯುವ ಸೀಟುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಮುಂದಿನ ವಾರವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.
ಹರಿಯಾಣ ಮತ್ತು ಜಮ್ಮು & ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಹರಿಯಾಣದಲ್ಲಿ ಬಿಜೆಪಿ ಮೂರನೇ ಬಾರಿಗೆ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿಯೂ 25ಕ್ಕೂ ಅಧಿಕ ಸೀಟು ಗೆದ್ದಿದ್ದು, ಬಿಜೆಪಿಯ ವಿಶ್ವಾಸ ಇಮ್ಮಡಿಗೊಂಡಿದೆ.
ನವೆಂಬರ್ 26ರಂದು ಮಹಾರಾಷ್ಟ್ರ ವಿಧಾನಸಭೆಯ ಅವಧಿ ಪೂರ್ಣಗೊಳ್ಳಲಿದೆ. ಅಷ್ಟರೊಳಗೆ ಚುನಾವಣೆ ನಡೆದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಮಹಾರಾಷ್ಟ್ರದ ವಿರೋಧ ಪಕ್ಷಗಳು 'ಮಹಾವಿಕಾಸ್ ಅಘಾಡಿ' ಮೈತ್ರಿಕೂಟ ರಚನೆ ಮಾಡಿಕೊಂಡಿವೆ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮೈತ್ರಿಕೂಟವಿದು. ಈ ಮೈತ್ರಿಕೂಟದ ಸೀಟು ಹಂಚಿಕೆ ಚರ್ಚೆಗಳು ಸಹ ನಡೆಯುತ್ತಿವೆ.












Click it and Unblock the Notifications