Maharashtra Assembly Election 2024: ನಾಗ್ಪುರದಲ್ಲಿ 14 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ
ಮುಂಬೈ, ನವೆಂಬರ್ 17: ಮಹಾರಾಷ್ಟ್ರ ರಾಜ್ಯದ 288 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರ ಶನಿವಾರ ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಇಂತಹ ಸಂದರ್ಭದಲ್ಲಿಯೇ ರಾಜ್ಯದಲ್ಲಿ ಚುನಾವಣಾಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 14.5 ಕೋಟಿ ರೂ. ಮೊತ್ತದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಧಾನಸಭೆ ಚುನಾವಣೆ-2024ಕ್ಕೆ ನವೆಂಬರ್ 18ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.
ಮಹಾರಾಷ್ಟ್ರ ರಾಜ್ಯದ ನಾಗ್ಪುರದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು 14.5 ಕೋಟಿ ರೂ. ಮೊತ್ತದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಿನ್ನ ಆಭರಣಗಳು, ಬಿಸ್ಕತ್ ರೂಪದಲ್ಲಿ ಇತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುಜರಾತ್ ಮೂಲದ ಸಿಕ್ವೆಲ್ ಲಾಜಿಸ್ಟಿಕ್ ಮೂಲಕ ಈ ಚಿನ್ನವನ್ನು ಸಾಗಣೆ ಮಾಡಲಾಗುತ್ತಿತ್ತು. ಚುನಾವಣಾ ಕಾರ್ಯದಲ್ಲಿ ತೊಡಗಿರುವ ವಿಚಕ್ಷಣ ತಂಡ ವಾಹನವನ್ನು ಪರಿಶೀಲನೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ. ಪ್ರಾಥಮಿಕ ಮಾಹಿತಿಯಂತೆ ಚಿನ್ನವನ್ನು ಅಮರಾವತಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು.
ವಿಮಾನದಲ್ಲಿ ಬಂದಿದ್ದ ಚಿನ್ನ: ಅಧಿಕಾರಿಗಳ ಮಾಹಿತಿ ಪ್ರಕಾರ ಗುರುವಾರ ಈ 14.5 ಕೋಟಿ ರೂ. ಮೌಲ್ಯದ ಚಿನ್ನ ವಿಮಾನದ ಮೂಲಕ ನಾಗ್ಪುರಕ್ಕೆ ಬಂದಿತ್ತು. ವಾಡಿ ಬಳಿಕ ಅಂಬಾಝಾರಿ ಕೆರೆ ಸಮೀಪ ವಾಹನ ಸಾಗುವಾಗ ಅಧಿಕಾರಿಗಳು ವಾಹನವನ್ನು ತಡೆದು, ಪರಿಶೀಲನೆ ನಡೆಸಿದ್ದಾರೆ.
ಸದ್ಯ ಚಿನ್ನ ಮತ್ತು ವಾಹನವನ್ನು ಅಂಬಾಝಾರಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಗಿದೆ. ಇಷ್ಟು ಮೊತ್ತದ ಚಿನ್ನವನ್ನು ಸಾಗಣೆ ಮಾಡಲು ಸಿಕ್ವೆಲ್ ಲಾಜಿಸ್ಟಿಕ್ ಚುನಾವಣಾ ಆಯೋಗದಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಆದ್ದರಿಂದ ಚಿನ್ನವನ್ನು ವಶಕ್ಕೆ ಪಡೆದುಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಅಕ್ಟೋಬರ್ 15ರಿಂದಲೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ರಾಜ್ಯದ 288 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನೀತಿ ಸಂಹಿತೆ ಜಾರಿಯಲ್ಲಿರುವಾಗ ಇಷ್ಟು ಮೊತ್ತದ ಚಿನ್ನವನ್ನು ಸಾಗಣೆ ಮಾಡಲು ಅನುಮತಿ ಪಡೆಯುವುದು ಕಡ್ಡಾಯವಾಗಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರ ಅಂತಿಮ ಹಂತಕ್ಕೆ ಬಂದು ನಿಂತಿದೆ. ಸೋಮವಾರ ಸಂಜೆ 6 ಗಂಟೆಯ ತನಕ ಬಹಿರಂಗ ಪ್ರಚಾರ ನಡಸಲು ಅವಕಾಶವಿದ್ದು, ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷಗಳು ಅಂತಿಮ ಹಂತದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿವೆ.
ಚುನಾವಣೆಯಲ್ಲಿ ರಾಜ್ಯದ ಆಡಳಿತ ಮೈತ್ರಿಕೂಟವಾದ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಮತ್ತು ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟ ಎದುರಾಳಿಗಳು.
ಮೈತ್ರಿಕೂಟದ ಜೊತೆ ಇತರ ಪಕ್ಷಗಳು ಸಹ ಚುನಾವಣಾ ಕಣದಲ್ಲಿದ್ದು, ರಾಜ್ಯದ ವಿಧಾನಸಭೆ ಚುನಾವಣೆಯ ಅಂತಿಮ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. ದೇಶಾದ್ಯಂತ ಈ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಎರಡು ಮೈತ್ರಿಕೂಟದ ಮೂಲಕ ಚುನಾವಣೆ ಎದುರಿಸುತ್ತಿವೆ. 2019ರ ಚುನಾವಣೆಯಲ್ಲಿ ಒಂದಾಗಿದ್ದ ಎನ್‌ಸಿಪಿ, ಶಿವಸೇನೆ ಈ ಬಾರಿಯ ಚುನಾವಣೆ ಸಮಯದಲ್ಲಿ ಎರಡು ಬಣಗಳಾಗಿವೆ. ಒಂದು ಬಣ ಆಡಳಿತ ಪಕ್ಷದ ಜೊತೆಗೆ ಮತ್ತೊಂದು ಬಣ ವಿರೋಧ ಪಕ್ಷದ ಜೊತೆ ಇದೆ. ರಾಷ್ಟ್ರೀಯ ಪಕ್ಷಗಳ ಜೊತೆಗೆ ಈ ಪಕ್ಷಗಳಿಗೆ ಎಷ್ಟು ಸೀಟು ಸಿಗಲಿದೆ? ಎಂಬ ಲೆಕ್ಕಾಚಾರ ನಡೆಯುತ್ತಿದೆ.












Click it and Unblock the Notifications