Maharashtra Assembly Election 2024: ಚುನಾವಣಾ ಚಿತ್ರಣ ಅಂತಿಮ, ಕಣದಲ್ಲಿ 4,140 ಅಭ್ಯರ್ಥಿಗಳು
ಮುಂಬೈ, ನವೆಂಬರ್ 05: ದೇಶಾದ್ಯಂತ ಕುತೂಹಲ ಮೂಡಿಸಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಚುನಾವಣಾ ಕಣ ಅಂತಿಮವಾಗಿದೆ. ನವೆಂಬರ್ 20ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ನವೆಂಬರ್ 4ರ ಸೋಮವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿತ್ತು. ಚುನಾವಣಾ ಫಲಿತಾಂಶ ನವೆಂಬರ್ 23ರಂದು ಘೋಷಣೆಯಾಗಲಿದ್ದು, ಚುನಾವಣಾ ಪಚಾರ ಬಿರುಸುಗೊಂಡಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಕಣದಲ್ಲಿ ವಿವಿಧ ಪಕ್ಷಗಳ 4,140 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವುಗಳಲ್ಲಿ ಬಿಜೆಪಿ, ಶಿವಸೇನೆ, ಕಾಂಗ್ರೆಸ್, ಎನ್‌ಸಿಪಿ ಪ್ರಮುಖ ಪಕ್ಷಗಳು. ಮುಂಬೈ ನಗರದಲ್ಲಿರುವ 36 ಸೀಟುಗಳಿಗೆ 420 ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ.

ಚುನಾವಣಾ ಆಯೋಗದ ಅಧಿಕಾರಿಗಳ ಮಾಹಿತಿ ಪ್ರಕಾರ, "ನಾವು 288 ಕ್ಷೇತ್ರಗಳಿಗೆ 7078 ಕ್ರಮಬದ್ಧವಾದ ನಾಮಪತ್ರಗಳನ್ನು ಸ್ವೀಕರಿಸಿದ್ದೆವು. 2,938 ಅಭ್ಯರ್ಥಿಗಳು ನಾಮಪತ್ರಗಳನ್ನು ವಾಪಸ್ ಪಡೆದಿದ್ದು, 4,140 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ" ಎಂದು ಹೇಳಿದ್ದಾರೆ.
ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ: 2019ರ ಚುನಾವಣೆಗೆ ಹೋಲಿಕೆ ಮಾಡಿದರೆ 2024ರ ವಿಧಾನಸಭೆ ಚುನಾವಣೆಗೆ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಳೆದ ಚುನಾವಣೆಗೆ 3,239 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 288 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 146.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿ 'ಮಹಾಯುತಿ' ಮೈತ್ರಿಕೂಟ ಮತ್ತು ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ನಡುವೆ ನೇರ ಪೈಪೋಟಿ ಇದೆ. ಎಂವಿಎ ಮೈತ್ರಿಕೂಟದಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಪಕ್ಷಗಳಿವೆ.
ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿಲ್ಲ. ಬಿಜೆಪಿ 180 ಸೀಟು, ಮಹಾಯತಿ ಮೈತ್ರಿಕೂಟದ ಮಿತ್ರಪಕ್ಷ ಎನ್‌ಸಿಪಿ 52, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 80 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಕಾಂಗ್ರೆಸ್ 102, ಶರದ್ ಪವಾರ್ ನೇತೃತ್ವದ ಎನ್‌ಸಿಪಿ 87, ಉದ್ಧವ್ ಠಾಕ್ರೆ ಬಣದ ಶಿವಸೇನೆ ಎಷ್ಟು ಸೀಟುಗಳಲ್ಲಿ ಕಣಕ್ಕಿಳಿಸಿದೆ ಎಂಬ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ. ಎಂವಿಎ ಮೈತ್ರಿಕೂಟ ಎರಡು ಸೀಟುಗಳನ್ನು ಸಿಪಿಐಗೆ ಬಿಟ್ಟುಕೊಟ್ಟಿದೆ.
ಮುಂಬೈ ನಗರದಲ್ಲಿ 36 ಕ್ಷೇತ್ರಗಳಿಗೆ 420 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪುಣೆ ಜಿಲ್ಲೆಯಲ್ಲಿ 21 ಸೀಟುಗಳಿಗೆ 303 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟದ ಸೀಟು ಹಂಚಿಕೆಯಲ್ಲಿ ಗೊಂದಲವಿಲ್ಲ. ಆದರೆ ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ನೇತೃತ್ವದ ಮಹಾವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟದ ಸೀಟು ಹಂಚಿಕೆಯಲ್ಲಿ ಹಲವು ಗೊಂದಲವಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರವಲ್ಲ ಶಿವಸೇನೆ ಮತ್ತು ಎನ್‌ಸಿಪಿ ಪಕ್ಷಗಳಿಗೂ ಸಹ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಶಿವಸೇನೆಯ ಒಂದು ಬಣ ಬಿಜೆಪಿ ಜೊತೆಗಿದ್ದು,'ಮಹಾಯುತಿ' ಮೈತ್ರಿಕೂಟದಲ್ಲಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಮೈತ್ರಿಕೂಟವಿದು.
ಉದ್ಧವ್ ಠಾಕ್ರೆ ಬಣದ ಶಿವಸೇನೆ ವಿರೋಧ ಪಕ್ಷಗಳ ಮಹಾವಿಕಾಸ್ ಅಘಾಡಿ ಮೈತ್ರಿಕೂಟ (ಎಂವಿಎ) ಮೈತ್ರಿಕೂಟದ ಜೊತೆಗಿದೆ. 2019ರ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಗ್ಗಟ್ಟಾಗಿದ್ದವು. ಆದರೆ ಈಗ ಬೇರೆ ಬೇರೆಯಾಗಿ ಚುನಾವಣೆ ಎದುರಿಸಲಿದ್ದು, ಯಾವ ಬಣಕ್ಕೆ ಮೇಲುಗೈ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications