Mahakumbh Mela 2025: ಮಹಾಕುಂಭ ಮೇಳಕ್ಕೆ ವಿಶೇಷ ವಂದೇ ಭಾರತ್ ರೈಲು, ವೇಳಾಪಟ್ಟಿ
ನವದೆಹಲಿ, ಫೆಬ್ರವರಿ 16: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಅಂತ್ಯವಾಗಲು ದಿನಗಣನೆ ಆರಂಭವಾಗಿದೆ. ಈಗಲೂ ಪ್ರತಿನಿತ್ಯ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಮಹಾಕುಂಭ ಮೇಳವು ಜನವರಿ 13ರಂದು ಆರಂಭವಾಗಿದ್ದು, ಫೆಬ್ರುವರಿ 26ರವರೆಗೆ ನಡೆಯಲಿದೆ. ಈಗಲೂ ಭಕ್ತರ ಸಂಖ್ಯೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗುತ್ತಿದೆ.
ಭಾರತೀಯ ರೈಲ್ವೆ ಮಹಾಕುಂಭ ಮೇಳಕ್ಕೆ ತೆರಳುವ ಭಕ್ತರ ಅನುಕೂಲಕ್ಕಾಗಿ ನವದೆಹಲಿ-ವಾರಣಾಸಿ ವಯಾ ಪ್ರಯಾಗ್‌ರಾಜ್ ವಿಶೇಷ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸುತ್ತಿದೆ. ಫೆಬ್ರವರಿ 16, 17ರಂದು ಈ ರೈಲುಗಳು ಉಭಯ ನಗರದ ನಡುವೆ ಸಂಚಾರವನ್ನು ನಡೆಸಲಿವೆ. ಹಲವಾರು ಜನರು ದೆಹಲಿಗೆ ಆಗಮಿಸುತ್ತಿದ್ದಾರೆ. ಆದ್ದರಿಂದ ದೆಹಲಿಯಿಂದ ವಾರಣಾಸಿಗೆ ಹೋಗಲು ಅನುಕೂಲವಾಗುವಂತೆ ವಂದೇ ಭಾರತ್ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ದೆಹಲಿ ವಾರಣಾಸಿ ನಡುವೆ ರೈಲು ಸಂಖ್ಯೆ 02252/ 02251 ವಂದೇ ಭಾರತ್ ರೈಲುಗಳು ಸಂಚಾರ ನಡೆಸಲಿವೆ ಎಂದು ಭಾರತೀಯ ರೈಲ್ವೆ ಘೋಷಣೆ ಮಾಡಿದೆ. ರೈಲುಗಳ ವೇಳಾಪಟ್ಟಿಯನ್ನು ಸಹ ಪ್ರಕಟಿಸಿದೆ. ದೇಶದ ವಿವಿಧ ಭಾಗಗಳಿಂದ ಬಸ್, ರೈಲು, ವಿಮಾನದ ಮೂಲಕ ದೆಹಲಿಗೆ ಬರುವ ಭಕ್ತರು ವಂದೇ ಭಾರತ್ ರೈಲಿನ ಮೂಲಕ ವಾರಣಾಸಿ ತಲುಪಿ ಅಲ್ಲಿಂದ ಪ್ರಯಾಗ್‌ರಾಜ್‌ಗೆ ಸಂಚಾರ ನಡೆಸಬಹುದು.
ವಂದೇ ಭಾರತ್ ರೈಲು ವೇಳಾಪಟ್ಟಿ: ರೈಲು ನಂಬರ್ 02252 ನವದೆಹಲಿ-ವಾರಣಾಸಿ ನಡುವೆ ಸಂಚಾರ ನಡೆಸಲಿದೆ. ಈ ರೈಲು ನವದೆಹಲಿಯಿಂದ ಬೆಳಗ್ಗೆ 5.30ಕ್ಕೆ ಹೊರಡಲಿದೆ. ಪ್ರಯಾಗ್‌ರಾಜ್‌ಗೆ 12 ಗಂಟೆಗೆ ತಲುಪಲಿದೆ. ವಾರಣಾಸಿಗೆ 2.20ಕ್ಕೆ ತಲುಪಲಿದೆ ಎಂದು ಎಂದು ಪ್ರಕಟಣೆ ಹೇಳಿದೆ.
ರೈಲು ಸಂಖ್ಯೆ 02251 ವಾರಣಾಸಿ-ನವದೆಹಲಿ ನಡುವೆ ಸಂಚಾರ ನಡೆಸಲಿದೆ. ರೈಲು ವಾರಣಾಸಿಯಿಂದ ಮಧ್ಯಾಹ್ನ 3.15ಕ್ಕೆ ಹೊರಡಲಿದೆ. ಪ್ರಯಾಗ್‌ರಾಜ್‌ಗೆ 5.20ಕ್ಕೆ ಆಗಮಿಸಲಿದೆ. ಅಲ್ಲಿಂದ ಹೊರಡುವ ರೈಲು ನವದೆಹಲಿಗೆ ರಾತ್ರಿ 11.50ಕ್ಕೆ ತಲುಪುತ್ತದೆ.
ಈ ಕುರಿತು ಮಾತನಾಡಿರುವ ಉತ್ತರ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಿಮಾಂಶು ಶೇಖರ್ ಉಪಾಧ್ಯಾಯ, "ಮಹಾಕುಂಭ ಮೇಳಕ್ಕೆ ಹೋಗಿ ಪವಿತ್ರ ಸ್ನಾನ ಮಾಡುವ ಜನರಿಗೆ ವಾರಾಂತ್ಯದಲ್ಲಿ ವಿಶೇಷ ಸೌಲಭ್ಯಗಳನ್ನು ಒದಗಿಸಲು, ಭಾರತೀಯ ರೈಲ್ವೆ ವಿಶೇಷ ವಂದೇ ಭಾರತ್ ರೈಲನ್ನು ಓಡಿಸುತ್ತಿದೆ" ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಮಹಾಕುಂಭ ಮೇಳಕ್ಕೆ ಆಗಮಿಸುವ ಭಕ್ತರಿಗಾಗಿ ಅನೇಕ ವ್ಯವಸ್ಥೆಗಳನ್ನು ಮಾಡಿದೆ. ದೇಶದ ವಿವಿಧ ರಾಜ್ಯಗಳು ಮಾತ್ರವಲ್ಲ ರಷ್ಯಾ, ಬ್ರೆಜಿಲ್ ಮತ್ತು ಅಮೆರಿಕದಿಂದಲೂ ನೂರಾರು ಜನರು ಆಗಮಿಸಿದ್ದಾರೆ. ಮಹಾಕುಂಭ ಮೇಳದಲ್ಲಿ ಸುಮಾರು 45 ಕೋಟಿ ಯಾತ್ರಿಕರು ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ಈಗ ಅದರ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಇದುವರೆಗೂ 400,000 ಪ್ರಯಾಣಿಕರು 140 ರೈಲುಗಳಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಆಗಮಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ದೇಶದ ವಿವಿಧ ರಾಜ್ಯಗಳಿಂದ ಈ ವಾರ ಪ್ರಯಾಗ್‌ರಾಜ್‌ಗೆ ಹಲವು ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಆದ್ದರಿಂದ ಇನ್ನಷ್ಟು ಯಾತ್ರಿಕರು ಆಗಮಿಸುವ ನಿರೀಕ್ಷೆ ಇದೆ.












Click it and Unblock the Notifications