Mahakumbh: ಮಹಾಶಿವರಾತ್ರಿ ದಿನ ಮಹಾಕುಂಭಮೇಳಕ್ಕೆ ತೆರೆ; 63 ಕೋಟಿ ಭಕ್ತರು ಭೇಟಿ
ಹಿಂದೂ ಧರ್ಮದ ದೊಡ್ಡ ಉತ್ಸವ ಎಂದೇ ಕರೆಯಲಾಗುವ ಮಹಾಕುಂಭಮೇಳದ ವೈಭವಕ್ಕೆ ತೆರೆ ಬೀಳುವ ಸಮಯ ಹತ್ತಿರವಾಗಿದೆ. ಬುಧವಾರ ಮಹಾಶಿವರಾತ್ರಿಯಂದು 45 ದಿನಗಳ ಮಹಾಕುಂಭಮೇಳಕ್ಕೆ ತೆರೆ ಬೀಳಲಿದ್ದು, ಲಕ್ಷಾಂತರ ಮಂದಿ ಶಿವರಾತ್ರಿಯಂದು ಪುಣ್ಯಸ್ನಾನ ಮಾಡಲಿದ್ದಾರೆ. ಮಹಾಶಿವರಾತ್ರಿಯಂದು ಪುಣ್ಯಸ್ನಾನ ಮಾಡಲು ಈಗಾಗಲೇ ಲಕ್ಷಾಂತರ ಮಂದಿ ಪ್ರಯಾಗ್‌ರಾಜ್ ಕಡೆ ಪ್ರಯಾಣ ಬೆಳೆಸಿದ್ದು ಯಾವುದೇ ಅವಘಡ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಜನವರಿ 13, ಮಕರ ಸಂಕ್ರಾಂತಿಯ ಹಿಂದಿನ ದಿನ ಆರಂಭವಾದ ಮಹಾಕುಂಭಮೇಳಕ್ಕೆ ದೇಶದ ಮೂಲೆ ಮೂಲೆಯಿಂದ ಮಾತ್ರವಲ್ಲದೆ ವಿವಿಧ ದೇಶಗಳಿಂದ ಕೂಡ ಭಕ್ತರು ಆಗಮಿಸಿ ಪುಣ್ಯಸ್ನಾನ ಮಾಡಿದ್ದಾರೆ. ಮಹಾಕುಂಭಮೇಳದಲ್ಲಿ 40 ಕೋಟಿ ಭಕ್ತರು ಭಾಗವಹಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ದೇಶ, ವಿದೇಶಗಳಿಂದ ಜನಸಾಗರವೇ ಮಹಾಕುಂಭಮೇಳಕ್ಕೆ ಹರಿದುಬಂದಿದೆ.

ಉತ್ತರ ಪ್ರದೇಶ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಫೆಬ್ರವರಿ 24ರವರೆಗೆ 63 ಕೋಟಿಗೂ ಅಧಿಕ ಮಂದಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು ತ್ರಿವೇಣಿ ಸಂಗಮದಲ್ಲಿ 63.36 ಕೋಟಿ ಭಕ್ತರು ಸ್ನಾನ ಮಾಡಿದ್ದಾರೆ. ಸೋಮವಾರ ಒಂದೇ ದಿನ 1.3 ಕೋಟಿಗೂ ಹೆಚ್ಚು ಜನ ಸ್ನಾನ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕುಂಭಮೇಳದ ಬಗ್ಗೆ ಮಾಹಿತಿ
ಕುಂಭಮೇಳದಲ್ಲಿ ವಿವಿಧ ರೀತಿಗಳಿವೆ. ಪ್ರಯಾಗ್‌ರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಕುಂಭಮೇಳಗಳು ನಡೆಯುತ್ತವೆ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯನ್ನು ಕುಂಭಮೇಳ ಎಂದು ಕರೆಯಲಾಗುತ್ತದೆ, ಆರು ವರ್ಷಗಳಿಗೆ ಒಮ್ಮೆ ಅರ್ಧ ಕುಂಭಮೇಳ ನಡೆದರೆ, ಪ್ರತಿ 12 ವರ್ಷಕ್ಕೊಮ್ಮೆ ಪೂರ್ಣಕುಂಭ ಮೇಳ ನಡೆಯುತ್ತದೆ. 144 ವರ್ಷಗಳಿಗೆ ಒಮ್ಮೆ ನಡೆಯುವುದನ್ನು ಮಹಾಕುಂಭಮೇಳ ಎಂದು ಕರೆಯಲಾಗುತ್ತದೆ. ಈ ಬಾರಿ ನಡೆಯುತ್ತಿರುವುದು ಮಹಾಕುಂಭಮೇಳವಾಗಿದ್ದು, 144 ವರ್ಷಗಳ ಬಳಿಕ ಮುಂದಿನ ಮಹಾಕುಂಭಮೇಳ ನಡೆಯಲಿದೆ.
ಕೊನೆಯ ದಿನಕ್ಕೆ ಸಿದ್ದತೆ
ಮಹಾಕುಂಭಮೇಳದ ಕೊನೆಯ ದಿನದಂದು ಲಕ್ಷಾಂತರ ಭಕ್ತರು ಪ್ರಯಾಗ್‌ರಾಜ್‌ನಲ್ಲಿ ಪುಣ್ಯಸ್ನಾನ ಮಾಡಲಿದ್ದಾರೆ. ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಲಿದ್ದು, ಅದಕ್ಕಾಗಿ ಅಧಿಕಾರಿಗಳು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ. ಮಹಾಶಿವರಾತ್ರಿಯ ಪ್ರಯುಕ್ತ ಭಾರತೀಯ ರೈಲ್ವೆ ದೇಶದ ವಿವಿಧ ಭಾಗಗಳಿಂದ ವಿಶೇಷ ರೈಲುಗಳನ್ನು ಓಡಿಸಿದೆ. ಮಹಾಕುಂಭದ ಅಂತಿಮ ಅಮೃತ ಸ್ನಾನದ ಬಳಿಕ ಯಾತ್ರಿಕರು ವಾಪಸ್ ಹೋಗಲು ಅನುಕೂಲವಾಗುವಂತೆ ಪ್ರಯಾಗ್ ರಾಜ್‌ನಿಂದ 350ಕ್ಕೂ ಹೆಚ್ಚುವರಿ ರೈಲುಗಳಲ್ಲಿ ಓಡಿಸಲು ಸಿದ್ದತೆ ಮಾಡಿಕೊಂಡಿದೆ.
ಹೆಚ್ಚಿನ ಸೇರುವ ಕಾರಣ ಭದ್ರತೆಯನ್ನು ಕೂಡ ಹೆಚ್ಚಿಸಲಾಗಿದೆ. ಪ್ರಯಾಗ್‌ರಾಜ್‌ನ ಎಲ್ಲಾ ಶಿವನ ದೇವಸ್ಥಾನಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಕುಂಭಮೇಳ ನಡೆಯುವ ಇಡೀ ಪ್ರದೇಶವನ್ನು ವಾಹನ ರಹಿತ ಪ್ರದೇಶ ಎಂದು ಘೋಷಿಸಲಾಗಿದೆ. ಕಾಲ್ತುಳಿತ ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು, ಕೊನೆಯ ದಿನ ಕಾರ್ಯವನ್ನು ಯಶಸ್ವಿಯಾಗಿಸಲು ಪೊಲೀಸರು ಸಜ್ಜಾಗಿದ್ದಾರೆ.












Click it and Unblock the Notifications