ನಟ ವಿಜಯ್ ಚುನಾವಣಾ ಅಫಿಡವಿಟ್‌ನಲ್ಲಿ 100 ಕೋಟಿ ರೂ. ಭಾರಿ ವ್ಯತ್ಯಾಸ: ಮದ್ರಾಸ್ ಹೈಕೋರ್ಟ್‌ನಿಂದ ನೋಟಿಸ್ ಜಾರಿ

ಮದ್ರಾಸ್ ಹೈಕೋರ್ಟ್ ನಟ ಹಾಗೂ ರಾಜಕಾರಣಿ ವಿಜಯ್ ಅವರಿಗೆ ಬಿಗ್ ಶಾಕ್ ನೀಡಿದೆ. 2026ರ ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಅವರು ಸಲ್ಲಿಸಿರುವ ಚುನಾವಣಾ ಅಫಿಡವಿಟ್‌ಗಳಲ್ಲಿ ಭಾರಿ ಪ್ರಮಾಣದ ಆಸ್ತಿ ಮೌಲ್ಯದ ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆಯಲ್ಲಿ, ಮದ್ರಾಸ್ ಹೈಕೋರ್ಟ್ ಸೋಮವಾರ ವಿಜಯ್, ಭಾರತೀಯ ಚುನಾವಣಾ ಆಯೋಗ (ECI) ಮತ್ತು ಆದಾಯ ತೆರಿಗೆ ಇಲಾಖೆಗೆ (IT Department) ನೋಟಿಸ್ ಜಾರಿ ಮಾಡಿದೆ. ವಿ. ವಿಘ್ನೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಧರ್ಮಾಧಿಕಾರಿ ಮತ್ತು ನ್ಯಾಯಮೂರ್ತಿ ಅರುಣ್ ಮುರುಗನ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಪ್ರತಿವಾದಿಗಳಿಂದ ಪ್ರತಿಕ್ರಿಯೆ ಕೇಳಿದೆ.

ಚುನಾವಣಾ ಅಫಿಡವಿಟ್‌ನಲ್ಲಿ ಏನಾಗಿದೆ?

ವಿಜಯ್ ಅವರು ತಮ್ಮ 'ತಮಿಳಿಗ ವೆಟ್ರಿ ಕಳಗಂ' (TVK) ಪಕ್ಷದ ಮೂಲಕ 2026ರ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. 2024ರಲ್ಲಿ ತಮ್ಮ ರಾಜಕೀಯ ಪಕ್ಷವನ್ನು ಘೋಷಿಸಿದ್ದ ವಿಜಯ್, ಇದೀಗ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದಾರೆ. ಅವರು ಚೆನ್ನೈನ ಪೆರಂಬೂರ್ ಮತ್ತು ತಿರುಚ್ಚಿ ಪೂರ್ವ ಎಂಬ ಎರಡು ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಈ ಎರಡು ಕ್ಷೇತ್ರಗಳಿಗೆ ಸಲ್ಲಿಸಿದ 'ಫಾರ್ಮ್ 26' ಅಫಿಡವಿಟ್‌ಗಳಲ್ಲಿ ನೀಡಿರುವ ಆಸ್ತಿ ವಿವರಗಳಲ್ಲಿ ಭಾರೀ ಅಸಮಾನತೆ ಇದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.

Madras

ತಿರುಚ್ಚಿ ಪೂರ್ವ ಕ್ಷೇತ್ರಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ವಿಜಯ್ ತಮ್ಮ ಚರಾಸ್ತಿಯ ಮೌಲ್ಯವನ್ನು 224 ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ. ಆದರೆ, ಅಚ್ಚರಿಯೆಂಬಂತೆ ಪೆರಂಬೂರ್ ಕ್ಷೇತ್ರದಿಂದ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಚರಾಸ್ತಿಯ ಮೌಲ್ಯ ಕೇವಲ 105 ಕೋಟಿ ರೂಪಾಯಿ ಎಂದು ತೋರಿಸಲಾಗಿದೆ. ಅಂದರೆ, ಎರಡೂ ಅಫಿಡವಿಟ್‌ಗಳ ನಡುವೆ ಬರೋಬ್ಬರಿ 100 ಕೋಟಿ ರೂಪಾಯಿಗೂ ಅಧಿಕ ವ್ಯತ್ಯಾಸವಿದ್ದು, ಪೆರಂಬೂರ್ ಅಫಿಡವಿಟ್‌ನಲ್ಲಿ ಈ ಮೊತ್ತವನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಲಾಗಿದೆ.

ನ್ಯಾಯಾಲಯದ ಪ್ರತಿಕ್ರಿಯೆ ಏನು?

ಈ ಆರೋಪದ ಗಂಭೀರತೆಯನ್ನು ಪರಿಗಣಿಸಿದ ಹೈಕೋರ್ಟ್, ಇದೊಂದು "ಅಕ್ರಮ" ಅಥವಾ "ನಿಯಮಗಳ ಉಲ್ಲಂಘನೆ" ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ. ಅದರಲ್ಲೂ ಇಷ್ಟು ದೊಡ್ಡ ಮೊತ್ತದ ವ್ಯತ್ಯಾಸವಿರುವುದು ಸಾಮಾನ್ಯ ವಿಚಾರವಲ್ಲ ಎಂದು ನ್ಯಾಯಾಲಯ ಹೇಳಿದೆ. ವಿಚಾರಣೆಯ ವೇಳೆ ನ್ಯಾಯಪೀಠವು, "ಇದೊಂದು ಅಕ್ರಮವಾಗಿದೆ. ಒಂದು ಕ್ಷೇತ್ರದಲ್ಲಿ 100 ಕೋಟಿಗೂ ಅಧಿಕ ಮೊತ್ತವನ್ನು ಬಹಿರಂಗಪಡಿಸಿಲ್ಲ. ಈ ಬಗ್ಗೆ ಸೂಚನೆಗಳನ್ನು ಪಡೆಯಲು ಒಂದು ವಾರದ ಕಾಲಾವಕಾಶ ನೀಡಲಾಗುತ್ತಿದೆ. ಖಾಸಗಿ ವ್ಯಕ್ತಿಗಳಿಗೂ ನೋಟಿಸ್ ಜಾರಿ ಪ್ರಕ್ರಿಯೆ ನಡೆಯಲಿದೆ" ಎಂದು ತಿಳಿಸಿದೆ.

ಸದ್ಯಕ್ಕೆ ನ್ಯಾಯಾಲಯವು ಈ ಆರೋಪಗಳ ಗುಣದೋಷಗಳ ಬಗ್ಗೆ ಯಾವುದೇ ಅಂತಿಮ ತೀರ್ಪನ್ನು ನೀಡಿಲ್ಲ. ಆದರೆ, ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಿದೆ. ಪ್ರತಿವಾದಿಗಳು ತಮ್ಮ ಉತ್ತರಗಳನ್ನು ಸಲ್ಲಿಸಿದ ಬಳಿಕ ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ತಮ್ಮ ಮೊದಲ ಚುನಾವಣೆಯಲ್ಲಿಯೇ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ನಟ ವಿಜಯ್ ಅವರಿಗೆ ಈ ಬೆಳವಣಿಗೆಯು ಆರಂಭಿಕ ಹಿನ್ನಡೆಯಾಗಿ ಪರಿಣಮಿಸಿದೆ. ಪಾರದರ್ಶಕತೆ ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ ರಾಜಕೀಯ ಪ್ರವೇಶಿಸಿರುವ ನಾಯಕನ ದಾಖಲೆಗಳಲ್ಲಿ ಇಂತಹ ದೋಷಗಳು ಕಂಡುಬಂದಿರುವುದು ಸಾರ್ವಜನಿಕ ವಲಯದಲ್ಲಿ ನಾನಾ ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.

ಭಾರತೀಯ ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಪ್ರತಿಯೊಬ್ಬ ಅಭ್ಯರ್ಥಿಯೂ ತಮ್ಮ ಎಲ್ಲಾ ಆಸ್ತಿ ಮತ್ತು ಹೊಣೆಗಾರಿಕೆಗಳ ನಿಖರವಾದ ಮಾಹಿತಿಯನ್ನು ಫಾರ್ಮ್ 26 ಅಫಿಡವಿಟ್‌ನಲ್ಲಿ ತಪ್ಪದೇ ನಮೂದಿಸಬೇಕಾಗುತ್ತದೆ. ತಪ್ಪು ಮಾಹಿತಿ ಅಥವಾ ಮಾಹಿತಿ ಮುಚ್ಚಿಡುವುದು ಸಾಬೀತಾದರೆ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಳ್ಳುವ ಅಥವಾ ಆಯ್ಕೆ ರದ್ದಾಗುವ ಅಪಾಯವೂ ಇರುತ್ತದೆ. ಆದಾಯ ತೆರಿಗೆ ಇಲಾಖೆಗೂ ನೋಟಿಸ್ ನೀಡಿರುವುದರಿಂದ, ಈ ಹಣಕಾಸಿನ ವ್ಯತ್ಯಾಸದ ಬಗ್ಗೆ ಐಟಿ ಅಧಿಕಾರಿಗಳು ಕೂಡ ತನಿಖೆ ನಡೆಸುವ ಸಾಧ್ಯತೆಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+