ಅಶ್ಲೀಲ ವಿಡಿಯೋ ನೋಡಿ ತಂಗಿ ಮೇಲೆ ಅತ್ಯಾಚಾರ, ಕೊಲೆ: ಪ್ರಕರಣ ಮುಚ್ಚಿಡಲು ತಾಯಿ, ಹಿರಿಯ ಸಹೋದರಿಯರ ಸಾಥ್
ಭೋಪಾಲ್, ಜುಲೈ. 28: ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ನೋಡಿ ತನ್ನ ಸ್ವಂತ ತಂಗಿಯ ಮೇಲೆ 13 ವರ್ಷದ ಬಾಲಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ದಾರುಣ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿ ಇನ್ನೂ ಭಯಾನಕ ಎಂದರೆ ಬಾಲಕನನ್ನು ಉಳಿಸಲು ಇಡೀ ಮನೆ ಸದಸ್ಯರು ಒಂದಾಗಿರುವುದು.
ಹೌದು.. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕಿಯನ್ನು ಆಕೆಯ 13 ವರ್ಷದ ಸಹೋದರ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡಿದ ನಂತರ ಲೈಂಗಿಕ ಕಿರುಕುಳ ನೀಡಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ, 17 ಮತ್ತು 18 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಮತ್ತು ತಾಯಿ ಪ್ರಕರಣಣ ಮುಚ್ಚಿಡಲು ಸಹಾಯ ಮಾಡಿದ್ದಾರೆ ಎಂದು ಮಧ್ಯಪ್ರದೇಶ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

50 ಜನ ಸಾಕ್ಷಿಗಳ ವಿಚಾರಣೆ, ಆರೋಪಿಗಳ ತೀವ್ರ ವಿಚಾರಣೆ ಮತ್ತು ತಾಂತ್ರಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಂತ್ರಸ್ತೆಯ ಸಹೋದರ, ಅವರ ತಾಯಿ ಮತ್ತು ಸಹೋದರಿಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮೊಬೈಲ್ ಬಳಕೆ ಮತ್ತು ಸಂಬಂಧಗಳ ಬಗ್ಗೆ ಈಗೀನ ಜನರಲ್ಲಿರುವ ಭಾವನೆಗಳ ಬಗ್ಗೆ ಆತಂಕ ಮೂಡಿಸಿದೆ.
ಏಪ್ರಿಲ್ 24ರಂದು ಮಧ್ಯಪ್ರದೇಶದ ರೇವಾ ಜಿಲ್ಲೆಯ ಮನೆಯೊಂದರಲ್ಲಿ ಬಾಲಕಿಯ ಶವ ಬಿದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ಪುರಾವೆಗಳು ದೊರೆತಿದ್ದು, ನಂತರ ತನಿಖೆಯನ್ನು ಪ್ರಾರಂಭಿಸಲಾಗಿದೆ.
ಘಟನೆಯ ಕುರಿತು ಸುದ್ದಿ ಸಂಸ್ಥೆ ಪಿಟಿಐಗೆ ಮಾತನಾಡಿದ ರೇವಾದ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ), ವಿವೇಕ್ ಸಿಂಗ್, "ಏಪ್ರಿಲ್ 24 ರಂದು ಜಾವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನೆಯ ಸಮಯದಲ್ಲಿ ಅವರು ಮಲಗಿದ್ದ ಮನೆಯ ಅಂಗಳದಿಂದ ಸಂತ್ರಸ್ತೆಯ ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಕುಟುಂಬ ಸದಸ್ಯರ ತೀವ್ರ ವಿಚಾರಣೆಯ ನಂತರ, ಸಂತ್ರಸ್ತೆಯ 13 ವರ್ಷದ ಸಹೋದರ ರಾತ್ರಿ ಆಕೆಯ ಪಕ್ಕದಲ್ಲಿ ಮಲಗಿದ್ದನು. ಹದಿಹರೆಯದ ಹುಡುಗ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ನೋಡಿದ ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಅಪ್ರಾಪ್ತ ಬಾಲಕಿ ತನ್ನ ತಂದೆಗೆ ಈ ವಿಷಯ ತಿಳಿಸುವುದಾಗಿ ಬೆದರಿಕೆ ಹಾಕಿದಾಗ, ಬಾಲಕ ಆಕೆಯ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಾನೆ. ನಂತರ ತಾಯಿಯನ್ನು ಎಬ್ಬಿಸಿ ತಾಯಿಯ ಬಳಿ ಘಟನೆ ವಿವರಿಸಿದ್ದಾನೆ. ನಂತರ ಬಾಲಕಿ ಇನ್ನೂ ಜೀವಂತವಾಗಿರುವುದನ್ನು ನೋಡಿದ ಆರೋಪಿ ಮತ್ತೆ ಕತ್ತು ಹಿಸುಕಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಘಟನೆಯ ನಂತರ ಆರೋಪಿಯ ಇಬ್ಬರು ಅಕ್ಕಂದಿರು ಕೂಡ ಎಚ್ಚೆತ್ತು ತನಿಖೆಯನ್ನು ದಾರಿತಪ್ಪಿಸಲು ಪೊಲೀಸರಿಗೆ ತಿಳಿಸುವ ಮೊದಲು ತಮ್ಮ ಹಾಸಿಗೆಯ ಸ್ಥಳವನ್ನು ಬದಲಾಯಿಸಿದ್ದಾರೆ. ಆದರೆ, ವಿಚಾರಣೆ ವೇಳೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ವಿಷಕಾರಿ ಕೀಟ ಕಚ್ಚಿ ಸಾವನ್ನಪ್ಪಿದ್ದಾಳೆ ಎಂದು ಅಪ್ರಾಪ್ತ ಬಾಲಕಿಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ರೇವಾ ಎಸ್ಪಿ ಮಾಹಿತಿ ನೀಡಿದ್ದಾರೆ.
ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿ 50 ಜನರ ವಿಚಾರಣೆ ನಡೆಸಿದ ನಂತರ ಪೊಲೀಸರು ಕುಟುಂಬ ಸದಸ್ಯರ ಹೇಳಿಕೆಗಳಲ್ಲಿ ಪದೇ ಪದೇ ಬದಲಾವಣೆಗಳು ಕಂಡು ಬಂದಿದೆ. ಪೊಲೀಸರಿಗೆ ಅನುಮಾನ ಬಂದ ಬಳಿಕ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತು, ನಂತರ ಅವರು ತಮ್ಮ ಕೃತ್ಯವನ್ನು ಒಪ್ಪಿಕೊಂಡಿದ್ದಾರೆ" ಎಂದು ಎಸ್ಪಿ ಹೇಳಿದ್ದಾರೆ.












Click it and Unblock the Notifications