Madhya Pradesh; ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಎಡವಿದ್ದು ಎಲ್ಲಿ?
ಭೋಪಾಲ್, ಡಿಸೆಂಬರ್ 03; ಮಧ್ಯಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭಾರೀ ನಿರಾಸೆಯಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳು ಅಂದಾಜಿಸಿದಂತೆ ಪಕ್ಷಕ್ಕೆ ಅಧಿಕಾರ ಸಿಕ್ಕಿಲ್ಲ. 230 ಸದಸ್ಯ ಬಲದ ವಿಧಾನಸಭೆಯಲ್ಲಿ ಸಂಜೆ 7 ಗಂಟೆಯ ಮಾಹಿತಿಯಂತೆ ಬಿಜೆಪಿ 164 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ.
ಬಿಜೆಪಿ ಸರ್ಕಾರ ರಚನೆ ಮಾಡುವತ್ತ ಹೆಜ್ಜೆ ಹಾಕಿದೆ. ಆದರೆ ಮುಖ್ಯಮಂತ್ರಿ ಯಾರು? ಎಂಬ ಚರ್ಚೆಗಳು ಜೋರಾಗಿವೆ. ಇನ್ನೂ 130 ಕ್ಷೇತ್ರಗಳ ಚುನಾವಣಾ ಫಲಿತಾಂಶ ಅಧಿಕೃತವಾಗಿ ಚುನಾವಣಾ ಆಯೋಗದಿಂದ ಘೋಷಣೆಯಾಗಬೇಕಿದೆ.

ಮಧ್ಯಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆ ಮತ ಎಣಿಕೆ ಭಾನುವಾರ ನಡೆಯುತ್ತಿದೆ. ಸಂಜೆ 7 ಗಂಟೆಯ ಮಾಹಿತಿಯಂತೆ ಕಾಂಗ್ರೆಸ್ 65 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಭಾರತೀಯ ಆದಿವಾಸಿ ಪಕ್ಷ 1 ಸ್ಥಾನದಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಗೆಲುವಿನ ಖಾತೆ ತೆರೆದಿದೆ.
ಕಾಂಗ್ರೆಸ್ ಎಡವಿದ್ದು ಎಲ್ಲಿ?; ಚುನಾವಣಾ ಪೂರ್ವ ಸಮೀಕ್ಷೆಗಳು ಆಡಳಿತ ವಿರೋಧಿ ಅಲೆ ಇದೆ, ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರ, ಸಂಸದರು, ಕೇಂದ್ರ ಸಚಿವರನ್ನು ಕಣಕ್ಕಿಳಿಸಿದ ಬಿಜೆಪಿ ತಂತ್ರದಿಂದಾಗಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ.
2018ರ ಚುನಾವಣೆಯಲ್ಲಿ 114 ಕ್ಷೇತ್ರಗಳಲ್ಲಿ ಗೆದ್ದು, ಬಳಿಕ ಎಸ್‌ಪಿ, ಬಿಎಸ್‌ಪಿ ಬೆಂಬಲದಿಂದ ಸ ಸರ್ಕಾರ ರಚನೆ ಮಾಡಿದ್ದ ಕಾಂಗ್ರೆಸ್ 2020ರಲ್ಲಿ ಬಹುಮತ ಕಳೆದುಕೊಂಡಿತ್ತು. 2003 ರಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ 2018ರ ಮಾರ್ಚ್‌ನಿಂದ 2020ರ ತನಕ ಮಾತ್ರ ರಾಜ್ಯದಲ್ಲಿ ಅಧಿಕಾರ ನಡೆಸಲಿಲ್ಲ.
ಬಿಜೆಪಿ ನಾಯಕರೊಬ್ಬರು ಕಾಂಗ್ರೆಸ್‌ನ ಸೋಲಿನ ಬಗ್ಗೆ ಮಾತನಾಡಿದ್ದಾರೆ. "ಪಕ್ಷ ಸಂಘಟನೆಯಲ್ಲಿನ ವಿಫಲೆಯೇ ಸೋಲಿಗೆ ಕಾರಣ" ಎಂದು ಹೇಳಿದ್ದಾರೆ.
"ನೋಡಿ ಮತದಾನ ದಿನವಾದ ನವೆಂಬರ್ 17ರಂದು ಬಿಜೆಪಿಯ ಶೇ 90ರಷ್ಟು ಬೂತ್ ಕಮಿಟಿಗಳು ಬೆಳಗ್ಗೆ 8.30ರಕ್ಕೆ ಕಾರ್ಯ ನಿರ್ವಹಣೆ ಆರಂಭಿಸಿದ್ದವು. ಆದರೆ ಕಾಂಗ್ರೆಸ್‌ನ ಬೂತ್ ಕಮಿಟಿಗಳು 9.30 ಆದರೂ ಮತ ಕೇಂದ್ರದ ಬಳಿ ಬಂದಿರಲಿಲ್ಲ" ಎಂದರು.
"ರಾಜ್ಯದಲ್ಲಿ ನಡೆದ ಮತದಾನದ ಪ್ರಮಾಣವೂ ಸಹ ಬಿಜೆಪಿಗೆ ನೆರವಾಗಿದೆ. ಈ ಬಾರಿ ರಾಜ್ಯದಲ್ಲಿ ಶೇ 76ರಷ್ಟು ಮತದಾನವಾಗಿದೆ. ಕಳೆದ ಬಾರಿ 74ರಷ್ಟು ಮತದಾನವಾಗಿತ್ತು" ಎಂದು ತಿಳಿಸಿದರು.
ಮಧ್ಯಪ್ರದೇಶದ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸುವುದು ಮಾತ್ರವಲ್ಲ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವ್ಹಾಣ್ ಬುಧ್ನಿ ಕ್ಷೇತ್ರದಲ್ಲಿ 1,64,951 ಮತಗಳನ್ನು ಪಡೆದು 104974 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅವರ ಎದುರಾಳಿಯಾದ ಕಾಂಗ್ರೆಸ್‌ನ ವಿಕ್ರಂ ಮಸ್ತಲ್ ಶರ್ಮಾ 59,997 ಮತಗಳನ್ನು ಪಡೆದರು.
ರಾಜ್ಯದಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಆದರೆ ಪಕ್ಷದ ರಾಜ್ಯಾಧ್ಯಕ್ಷ ಕಮಲ್ ನಾಥ್ ಚಿಂದ್ವಾರಾ ಕ್ಷೇತ್ರದಲ್ಲಿ 1,29,829 ಮತಗಳನ್ನು ಪಡೆದು 35009 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎದುರಾಳಿ ಬಿಜೆಪಿಯ ವಿವೇಕ್ ಬಂಟಿ ಶಾಹೂ 94,820 ಮತಗಳನ್ನು ಪಡೆದಿದ್ದಾರೆ. ಅಧಿಕೃತ ಚುನಾವಣಾ ಫಲಿತಾಂಶ ಇನ್ನೂ ಘೋಷಣೆಯಾಗಬೇಕಿದೆ.












Click it and Unblock the Notifications