Madhya Pradesh; 'ರಾಮಾಯಣ' ನಟನ ಮುಂದೆ ಚೌವ್ಹಾಣ್ ಭಾರೀ ಮುನ್ನಡೆ!
ಭೋಪಾಲ್, ಡಿಸೆಂಬರ್ 03; ಮಧ್ಯಪ್ರದೇಶ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುನ್ನಡೆಯೊಂದಿಗೆ ಸರ್ಕಾರ ರಚನೆ ಮಾಡುವತ್ತ ಹೆಜ್ಜೆ ಹಾಕಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಬಿಜೆಪಿ 155 ಕ್ಷೇತ್ರಗಳಲ್ಲಿ ಮುನ್ನಡೆಯಲಿದ್ದು, ಕಾಂಗ್ರೆಸ್ 68 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ರಾಜ್ಯದ ಮುಖ್ಯಮಂತ್ರಿ, ಬಿಜೆಪಿಯ ನಾಯಕ ಶಿವರಾಜ್ ಸಿಂಗ್ ಚೌವ್ಹಾಣ್ ಬುಧ್ನಿ ಕ್ಷೇತ್ರದಲ್ಲಿ 26,452 ಮತಗಳನ್ನು ಪಡೆದು ಮುನ್ನಡೆ ಪಡೆದುಕೊಂಡಿದ್ದಾರೆ. ಕಾಂಗ್ರೆಸ್‌ನ ವಿಕ್ರಂ ಮಸ್ತಲ್ 5,255 ಮತಗಳಿಂದ ಭಾರೀ ಹಿನ್ನಡೆ ಅನುಭವಿಸಿದ್ದಾರೆ.

ಭಾನುವಾರ ಮಧ್ಯಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ರಾಜ್ಯದ 230 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 17ರ ಶುಕ್ರವಾರ ಮತದಾನ ನಡೆದಿತ್ತು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 116.
2024ರ ಲೋಕಸಭಾ ಚುನಾವಣೆಗೆ ಮೊದಲು ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಮಧ್ಯಪ್ರದೇಶ ಸಹ ಒಂದು. ಬಿಜೆಪಿ ಈ ಬಾರಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಅಂದಾಜಿಸಿದ್ದವು. ಆದರೆ ಲೆಕ್ಕಾಚಾರ ಉಲ್ಟಾ ಆಗಿದೆ.
ರಾಮಾಯಣದ ನಟ; ಕಾಂಗ್ರೆಸ್‌ನ ವಿಕ್ರಂ ಮಸ್ತಲ್ 'ರಾಮಾಯಣ-2' ಧಾರವಾಹಿಯ ನಟ. 40 ವರ್ಷದ ಅವರು ಈ ಬಾರಿಯ ಜುಲೈನಲ್ಲಿ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಆಗಲೇ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಬುಧ್ನಿ ಕ್ಷೇತ್ರದಲ್ಲಿ ಬಿಜೆಪಿಯ ಶಿವರಾಜ್ ಸಿಂಗ್ ಚೌವ್ಹಾಣ್ ಎದುರು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಮಸ್ತಲ್ ಬುಧ್ನಿಗೆ ಸಮೀಪದ ಸೆಹೋರ್ ಜಿಲ್ಲೆಯ ಸಲ್ಕನ್‌ಪುರ ದೇವಸ್ಥಾನ ಪಟ್ಟಣದಲ್ಲಿ ಜನಿಸಿದವರು. 2008ರಲ್ಲಿ ಪ್ರಸಾರವಾದ 'ರಾಮಾಯಣ-2' ಧಾರವಾಹಿಯಲ್ಲಿ ಹನುಮಂತನ ಪಾತ್ರವನ್ನು ನಿರ್ವಹಣೆ ಮಾಡುವ ಮೂಲಕ ಜನಪ್ರಿಯರಾದರು.
"ಬುಧ್ನಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೊರತೆ ಇದೆ. ಇದು ನಾನು ರಾಜಕೀಯಕ್ಕೆ ಬರಲು ಪ್ರೇರೆಪಣೆ ನೀಡಿತು. ಕ್ಷೇತ್ರವನ್ನು ನೋಡಿದರೆ 4 ಬಾರಿ ಮುಖ್ಯಮಂತ್ರಿಯಾದ ಒಬ್ಬ ನಾಯಕನ ಕ್ಷೇತ್ರ ಎಂದು ಅನಿಸುತ್ತದೆಯೇ?" ಎಂದು ವಿಕ್ರಂ ಮಸ್ತಲ್ ಪ್ರಶ್ನೆ ಮಾಡಿದ್ದರು.
ಬುಧ್ನಿ ಕ್ಷೇತ್ರದಲ್ಲಿ ಶಿವರಾಜ್ ಸಿಂಗ್ ಚೌವ್ಹಾಣ್ ಮತ್ತು ವಿಕ್ರಂ ಮಸ್ತಲ್ ನಡುವೆ ಭಾರೀ ಪೈಪೋಟಿ ನಿರೀಕ್ಷೆ ಮಾಡಲಾಗಿತ್ತು. ಆದರೆ ಚೌವ್ಹಾಣ್ ಭಾರೀ ಮತಗಳ ಅಂತರದಲ್ಲಿ ಗೆಲ್ಲುವ ಸೂಚನೆ ಕೊಟ್ಟಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ವೆಬ್‌ಸೈಟ್ ಮಾಹಿತಿ ಪ್ರಕಾರ ಬಿಜೆಪಿ 157, ಕಾಂಗ್ರೆಸ್ 71, ಬಿಎಸ್‌ಪಿ 1, ಇತರರು 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.












Click it and Unblock the Notifications