ಅಸೆಂಬ್ಲಿ ಟಿಕೆಟ್ ಸಿಗದೆ ಕಾಂಗ್ರೆಸ್ ಮುಖಂಡ ಸೂಸೈಡ್

ನವೆಂಬರ್ 25ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸೂಕ್ತ ಅಭ್ಯರ್ಥಿಗಳನ್ನು ಹೆಸರಿಸಲು ಕಾಂಗ್ರೆಸ್ ವಿಫಲವಾಗಿದೆ. ಟಿಕೆಟ್ ನಿರಾಕರಣೆ ಹಿನ್ನೆಲೆಯಲ್ಲಿ ಅಗರ್ ಪ್ರಾಂತ್ಯದ ನಾಯಕ ನರಸಿಂಗ್ ಮಾಳ್ವಿಯ ಅವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಅವರನ್ನು ತಕ್ಷಣವೇ ಉಜ್ಜಯಿನಿಯ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾಳ್ವಿಯ ಅವರು ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಕಟ್ಟಾ ಕಾಂಗ್ರೆಸ್ ಅನುಯಾಯಿಯಾಗಿ ರಾಜಕೀಯದಲ್ಲಿ ಬೆಳೆದಿದ್ದ ಮಾಳ್ವಿಯ ಅವರು ಅಗರ್ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಮಾಳ್ವಿಯ ಬದಲಿಗೆ ಮಧು ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದರಿಂದ ಬೇಸರಗೊಂಡ ಮಾಳ್ವಿಯ ಆತ್ಮಹತ್ಯೆಗೆ ಯತ್ನಿಸಿದ್ದರು. ಕಳೆದ ರಾತ್ರಿ 82 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿತ್ತು.
ಮಾಳ್ವಿಯಾ ನಿಧನಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಕಾಂಗ್ರೆಸ್ ಘಟಕದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ ಮನಾಕ್ ಅಗರವಾಲ್ ಅವರು ತನ್ನ ಸ್ಥಾನದಿಂದ ಕೆಳಗಿಳಿದಿದ್ದಾರೆ. ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿಗೆ ಟಿಕೆಟ್ ನೀಡಿದ್ದಕ್ಕೆ ಅಗರವಾಲ್ ಗರಂ ಆಗಿದ್ದಾರೆ.
ಭೋಜ್ ಪುರ್ ಕ್ಷೇತ್ರದಲಿ ಬಿಜೆಪಿ ಹಾಲಿ ಶಾಸಕ ಸುರೇಂದ್ರ ಪಟ್ವಾ ವಿರುದ್ಧ ಸುರೇಶ್ ಸ್ಪರ್ಧಿಸುತ್ತಿದ್ದಾರೆ. ಒಟ್ಟಾರೆ 414 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಪ್ರಕಟಿಸಿದ್ದಾರೆ.












Click it and Unblock the Notifications