ಲೆಫ್ಟಿನೆಂಟ್ ಗವರ್ನರ್ vs ದೆಹಲಿ ಸರ್ಕಾರ: ಸುಪ್ರೀಂ ಕೋರ್ಟ್‌ನಿಂದ ಮಹತ್ವದ ತೀರ್ಪು
ರಾಷ್ಟ್ರ ರಾಜಧಾನಿ ಹಾಗೂ ಕೇಂದ್ರಾಡಳಿತ ಪ್ರದೇಶ ದೆಹಲಿಯಲ್ಲಿ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಿನ ತಿಕ್ಕಾಟದ ಕುರಿತು ಸುಪ್ರೀಂ ಕೋರ್ಟ್ ಗುರುವಾರ ತನ್ನ ತೀರ್ಪು ಪ್ರಕಟಿಸಿದೆ.
ದೆಹಲಿ ಸರ್ಕಾರವು ಭೂಮಿ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೊಲೀಸ್ ಹೊರತುಪಡಿಸಿ ಎಲ್ಲಾ ವಿಷಯಗಳಲ್ಲಿ ಆಡಳಿತಾತ್ಮಕ ಸೇವೆಗಳನ್ನು ನಿಯಂತ್ರಿಸುತ್ತದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಡಿವೈ ಚಂದ್ರಚೂಡ ನೇತೃತ್ವದ ಸುಪ್ರೀಂ ಕೋರ್ಟ್‌ನ 5 ನ್ಯಾಯಾಧೀಶರ ಪೀಠ ಗುರುವಾರ ತೀರ್ಪು ಪ್ರಕಟಿಸಿದ್ದು, ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ವಿಧಾನಸಭೆ ಮತ್ತು ಚುನಾಯಿತ ಸರ್ಕಾರದ ಶಾಸಕಾಂಗದ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲು ಅರ್ಹತೆ ಹೊಂದಿಲ್ಲ ಎಂದು ಹೇಳಿದೆ.
ದೆಹಲಿಯಲ್ಲಿ ಸಿಬ್ಬಂದಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಹಕ್ಕಿನಲ್ಲಿ ಚುನಾಯಿತ ಸರ್ಕಾರ ನಿರ್ಧಾರ ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಸುಪ್ರೀಂ ಕೋರ್ಟ್ ಪೀಠದಲ್ಲಿದ್ದ ಉಳಿದ ನ್ಯಾಯಾಧೀಶರು ಕೂಡ ದೆಹಲಿಯಲ್ಲಿ ಉಂಟಾದ ಪರಿಸ್ಥಿತಿ ಮತ್ತೆ ಬೇರೆ ಯಾವ ರಾಜ್ಯದಲ್ಲೂ ಆಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಂಟಿ ಕಾರ್ಯದರ್ಶಿ ಮಟ್ಟಕ್ಕಿಂತ ಹೆಚ್ಚಿನ ಅಧಿಕಾರಿಗಳ ಮೇಲೆ ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂಬ ನ್ಯಾಯಮೂರ್ತಿ ಭೂಷಣ್ ಅವರ 2019ರ ತೀರ್ಪನ್ನು ನಾವು ಒಪ್ಪುವುದಿಲ್ಲ ಎಂದು ಹಾಲಿ ಪಂಚ ನ್ಯಾಯಾಧೀಶರ ಪೀಠ ಹೇಳಿದೆ.

ರಾಷ್ಟ್ರ ರಾಜಧಾನಿ ದೆಹಲಿ ಒಂದು ಪೂರ್ಣ ರಾಜ್ಯವಲ್ಲದಿದ್ದರೂ, ಅದು ಕಾನೂನು ಮಾಡುವ ಅಧಿಕಾರವನ್ನು ಹೊಂದಿದೆ. ದೆಹಲಿ ಆಡಳಿತವು ಇತರ ರಾಜ್ಯಗಳಂತೆ ಮತ್ತು ದೆಹಲಿ ಸರ್ಕಾರದ ಸಲಹೆಗೆ ಲೆಫ್ಟಿನೆಂಟ್ ಗವರ್ನರ್ ಬದ್ಧವಾಗಿರಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಪ್ರಕರಣವು ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಿನ ಅಧಿಕಾರದ ಸ್ಪರ್ಧೆಯೊಂದಿಗೆ ಭಾರತ ಸರ್ಕಾರದ ಅಸಮರ್ಪಕ ಫೆಡರಲ್ ಮಾದರಿಯೊಂದಿಗೆ ವ್ಯವಹರಿಸುತ್ತದೆ. ದೆಹಲಿಯ ಕೇಂದ್ರಾಡಳಿತ ಸೇವೆಗಳ ಮೇಲೆ ಯಾರು ನಿಯಂತ್ರಣವನ್ನು ಹೊಂದಿರುತ್ತಾರೆ ಎಂಬುದು ಸಮಸ್ಯೆಯಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಆದರೆ, ದೆಹಲಿ ಸರ್ಕಾರಕ್ಕೆ ಎಲ್ಲಾ ಸೇವೆಗಳಲ್ಲಿ ಅಧಿಕಾರವಿಲ್ಲ ಎಂಬ ನ್ಯಾಯಮೂರ್ತಿ ಭೂಷಣ್ ಅವರ ತೀರ್ಪನ್ನು ಒಪ್ಪುವುದಿಲ್ಲ ಎಂದು ಇದೀಗ ಸುಪ್ರೀಂ ಕೋರ್ಟ್ ಪಂಚಪೀಠ ಹೇಳಿದೆ.
"ಸಂಸತ್ತಿನ ಕಾನೂನಿನ ಅನುಪಸ್ಥಿತಿಯಲ್ಲಿ ದೆಹಲಿ ಶಾಸಕಾಂಗ ಮತ್ತು ಕಾರ್ಯಾಂಗವು ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದ್ದು, ದೆಹಲಿ ಮತ್ತು ಕೇಂದ್ರ ಎರಡಕ್ಕೂ ಅಧಿಕಾರವಿದೆ ಮತ್ತು ಚುನಾಯಿತ ಸರ್ಕಾರವು ಜನರ ಇಚ್ಛೆಯ ಅಭಿವ್ಯಕ್ತಿಯಾಗಿದೆ," ಎಂದು ತಿಳಿಸಿದೆ.
ದೆಹಲಿಯಲ್ಲಿ ಪ್ರತ್ಯೇಕ ಚುನಾಯಿತ ಸಂಸ್ಥೆಯನ್ನು ಹೊಂದುವ ಉದ್ದೇಶವು ನಿರರ್ಥಕವಾಗುತ್ತದೆ ಎಂದಿರುವ ನ್ಯಾಯಾಲಯ, ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವು ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣವನ್ನು ಹೊಂದಿರಬೇಕು ಎಂದು ತೀರ್ಪು ನೀಡಿದೆ.
ಸಿಜೆಐ ಡಿವೈ ಚಂದ್ರಚೂಡ, ನ್ಯಾಯಮೂರ್ತಿ ಎಂ.ಆರ್. ಶಾ, ನ್ಯಾಯಮೂರ್ತಿ ಕೃಷ್ಣ ಮುರಾರಿ, ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಇದ್ದ ಸುಪ್ರೀಂ ಕೋರ್ಟ್‌ನ 5 ನ್ಯಾಯಾಧೀಶರ ಸಾಂವಿಧಾನಿಕ ಪೀಠ ಈ ಕುರಿತಾಗಿ ತೀರ್ಪು ನೀಡಿದೆ. ಇದಕ್ಕೂ ಮೊದಲು, ಸುಪ್ರೀಂ ಕೋರ್ಟ್ ಜನವರಿ 18ರಂದು ತೀರ್ಪನ್ನು ಕಾಯ್ದಿರಿಸಿತ್ತು.












Click it and Unblock the Notifications