16ರ ಲೋಕಸಭೆಯಲ್ಲಿ ಅತ್ಯಂತ ಕಿರಿಯ ಸಂಸದ ಯಾರು?
ನವದೆಹಲಿ, ಮೇ 17: ಭಾರತದ ಲೋಕಸಭೆಗೆ ಈಗ ಹದಿನಾರರ ಹರಯ. ಹಾಗಾದರೆ 16ರ ಲೋಕಸಭೆಗೆ ನಿನ್ನೆ ಆಯ್ಕೆಯಾದ ಅತಿ ಕಿರಿಯ ವಯಸ್ಸಿನ ಜನನಾಯಕ ಯಾರು ಎಂಬ ಕುತೂಹಲದ ಪ್ರಶ್ನೆಗೆ ಉತ್ತರ ಇಲ್ಲಿದೆ. ಈ ಮಧ್ಯೆ ಅತಿ ಹಿರಿಯ ನಾಯಕರು 82 ವರ್ಷದ ನಮ್ಮ ಎಚ್ ಡಿ ದೇವೇಗೌಡರು ಇರಬಹುದಾ?
ಅದಿರಲಿ ಹರಿಯಾಣಾದ ದುಷ್ಯಂತ್ ಚೌತಾಲಾ ಎಂಬ ಯುವಕ ಅತ್ಯಂತ ಕಿರಿಯ ಸಂಸದರಾಗಿ ಹೊರಹೊಮ್ಮಿದ್ದಾರೆ. ಈತನ ವಯಸ್ಸು ಕೇವಲ 26 ವರ್ಷ 1 ತಿಂಗಳು. ಅತ್ಯಂತ ಕಿರಿಯ ಸಂಸದ ದುಷ್ಯಂತ್ ಚೌತಾಲಾ ಅವರು ಪ್ರತಿನಿಧಿಸುತ್ತಿರುವ ಪಕ್ಷ ಇಂಡಿಯನ್ ನ್ಯಾಷನಲ್ ಲೋಕದಳ. ಕ್ಯಾಲಿಫೋರ್ನಿಯಾದ ಬೇಕರ್ಸ್ ಫೀಲ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.
ದುಷ್ಯಂತ್ ಚೌತಾಲಾ ಅವರ ತಾತ ಓಂ ಪ್ರಕಾಶ್ ಚೌತಾಲಾ ಮತ್ತು ತಂದೆ ಅಯಜ್ ಚೌತಾಲಾ. ಮಾಜಿ ಉಪ ಪ್ರಧಾನಿ ದೇವಿ ಲಾಲರ ಮರಿಮೊಮ್ಮಗ. ಶಿಕ್ಷಕರ ನೇಮಕಾತಿ ಭ್ರಷ್ಟಾಚಾರ ಪ್ರಕರಣದಲ್ಲಿ ದುಷ್ಯಂತರ ತಾತ ಮತ್ತು ಅಪ್ಪ ಇಬ್ಬರಿಗೂ ಸಿಬಿಐ ಕೋರ್ಟ್ ಕಳೆದ ವರ್ಷ ಜೈಲು ಶಿಕ್ಷೆ ವಿಧಿಸಿದೆ. (ಲಂಚ: ಮಾಜಿ ಸಿಎಂ ಚೌತಾಲಾಗೆ 10 ವರ್ಷ ಜೈಲು)

ದುಷ್ಯಂತ್, ಹಿಸ್ಸಾರ್ ಲೋಕಸಭಾ ಕ್ಷೇತ್ರದಿಂದ ಆರಿಸಿಬಂದಿದ್ದಾರೆ. ಇಡೀ ದೇಶದಲ್ಲಿ ಮೋದಿ ಹವಾ ಬೀಸುತ್ತಿರುವಾಗ ಅದರ ವಿರುದ್ಧ ಈಜಿ ದುಷ್ಯಂತ್ ಚೌತಾಲಾ ಯಶಸ್ವಿಯಾಗಿ ಆಯ್ಕೆಯಾಗಿದ್ದಾರೆ. ಇವರು ಹರಿಯಾಣಾದ ಜನಹಿತ ಕಾಂಗ್ರೆಸ್ ಪಕ್ಷದ ಹಾಲಿ ಸಂಸದ ಕುಲದೀಪ್ ಸಿಂಗ್ ಬಿಶ್ನೋಯಿ ಅವರನ್ನು 31,847 ಮತಗಳಿಂದ ಮಣಿಸಿದ್ದಾರೆ.
ಅಂದಹಾಗೆ ಹಿಂದಿನ ಲೋಕಸಭೆಯಲ್ಲಿ ಲಕ್ಷದ್ವೀಪದ ಮೊಹಮದ್ ಹಮದುಲ್ಲಾ ಸಯೀದ್ ಅವರು ಅತ್ಯಂತ ಕಿರಿಯ ವಯಸ್ಸಿನ ಸಂಸದರಾಗಿದ್ದರು. ಕಾಂಗ್ರೆಸ್ಸಿನ ಮೊಹಮದ್ ಹಮದುಲ್ಲಾ ಸಯೀದ್ ಅವರಿಗೆ ಆಗ 27 ವರ್ಷ 1 ತಿಂಗಳಾಗಿತ್ತು.












Click it and Unblock the Notifications