LPG: ಅಕ್ಟೋಬರ್ 1ರಿಂದ ಎಲ್‌ಪಿಜಿ ಬುಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ
LPG: ದೇಶದ ಪ್ರತಿಯೊಬ್ಬ ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರದ ಸಬ್ಸಿಡಿ ಹಣ ತಡೆರಹಿತವಾಗಿ ತಲುಪಲು ಅಕ್ಟೋಬರ್ 1ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಇದುವರೆಗೆ ಬಯೋಮೆಟ್ರಿಕ್ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಗ್ರಾಹಕರು ನಿಗದಿತ ಸಮಯದೊಳಗೆ ಈ ಪರಿಶೀಲನೆಯನ್ನು ಮುಗಿಸುವುದು ಕಡ್ಡಾಯವಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಬಯೋಮೆಟ್ರಿಕ್ ಪರಿಶೀಲನೆಯನ್ನು ಪೂರ್ಣಗೊಳಿಸದಿದ್ದರೆ ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ಅಥವಾ ಗ್ಯಾಸ್ ವಿತರಣೆ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗುವುದಿಲ್ಲ. ಆದರೆ, ಸರ್ಕಾರದಿಂದ ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುವ ಸಬ್ಸಿಡಿ ಹಣ ಸ್ಥಗಿತಗೊಳ್ಳಲಿದೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ಪ್ರಸ್ತುತ ಮಾರುಕಟ್ಟೆಯ ಪೂರ್ಣ ಬೆಲೆಯನ್ನು ನೀಡಿ ಸಿಲಿಂಡರ್ ಖರೀದಿಸಬೇಕಾಗುತ್ತದೆ.

ಬಯೋಮೆಟ್ರಿಕ್ ಪರಿಶೀಲನೆ ಯಶಸ್ವಿ ವಿವರ
ಅನರ್ಹ ಹಾಗೂ ನಕಲಿ ಗ್ಯಾಸ್ ಸಂಪರ್ಕಗಳನ್ನು ಸಂಪೂರ್ಣವಾಗಿ ತಡೆದು, ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸಬ್ಸಿಡಿ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಚಿವಾಲಯದ ಮಾಹಿತಿ ಪ್ರಕಾರ, ಈಗಾಗಲೇ ದೇಶಾದ್ಯಂತ 27.43 ಕೋಟಿಗೂ ಅಧಿಕ ಸಕ್ರಿಯ ಗ್ರಾಹಕರು ತಮ್ಮ ಬಯೋಮೆಟ್ರಿಕ್ ಪರಿಶೀಲನೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ.
ಬುಕಿಂಗ್, ವಿತರಣಾ ವ್ಯವಸ್ಥೆಯಲ್ಲಿನ ಹೊಸ ಬದಲಾವಣೆಗಳು
ಬಯೋಮೆಟ್ರಿಕ್ ಜೊತೆಗೆ ಗ್ಯಾಸ್ ಸಿಲಿಂಡರ್ ದುರ್ಬಳಕೆ ತಡೆಯಲು ಬುಕಿಂಗ್ ಸಂಖ್ಯೆಗಳನ್ನು ಸಹ ಸರ್ಕಾರ ಅಪ್ಡೇಟ್ ಮಾಡಿದೆ. ಇನ್ಮುಂದೆ ಸಂಪರ್ಕದೊಂದಿಗೆ ನೋಂದಣಿ ಆಗಿರುವ ಅಧಿಕೃತ ಮೊಬೈಲ್ ಸಂಖ್ಯೆಯಿಂದ ಮಾತ್ರ ಸಿಲಿಂಡರ್ ಕಾಯ್ದಿರಿಸಲು ಅವಕಾಶವಿರುತ್ತದೆ. ಅಲ್ಲದೆ, ಸಿಲಿಂಡರ್ ತಲುಪಿಸುವಾಗ ಗ್ರಾಹಕರ ಮೊಬೈಲ್‌ಗೆ ಬರುವ ಡೆಲಿವರಿ ಆರ್ಥಂಟಿಕೇಷನ್ ಕೋಡ್ (DAC) ಅನ್ನು ವಿತರಣಾ ಸಿಬ್ಬಂದಿಗೆ ನೀಡಿದರೆ ಮಾತ್ರ ಸಿಲಿಂಡರ್ ವಿತರಿಸುವ ಹೊಸ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ.
ಈ ಕ್ರಮದ ಉದ್ದೇಶ ಏನು?
ಸಬ್ಸಿಡಿ ಸೋರಿಕೆಯನ್ನು ತಡೆಯುವುದು, ಅರ್ಹ ಫಲಾನುಭವಿಗಳಿಗೆ ಮಾತ್ರ ಆರ್ಥಿಕ ನೆರವು ತಲುಪಿಸುವುದು ಹಾಗೂ ವಾಣಿಜ್ಯ ದುರ್ಬಳಕೆಗೆ ಸಿಲಿಂಡರ್‌ಗಳು ಅಕ್ರಮವಾಗಿ ವರ್ಗಾವಣೆ ಆಗುವುದನ್ನು ತಡೆಯುವ ಉದ್ದೇಶದಿಂದ ಈ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತರಲಾಗುತ್ತಿದೆ.
ದೃಢೀಕರಣ ಮಾಡಿಸುವ ಸುಲಭ ವಿಧಾನಗಳು
* ಸಿಲಿಂಡರ್ ವಿತರಣೆ ಮಾಡುವ ಡೆಲಿವರಿ ಸಿಬ್ಬಂದಿ ತೈಲ ಕಂಪನಿಗಳ ಮೊಬೈಲ್ ಆ್ಯಪ್ ಬಳಸಿ ಸ್ಥಳದಲ್ಲೇ ಬಯೋಮೆಟ್ರಿಕ್ ವಿವರಗಳನ್ನು ಪರಿಶೀಲಿಸಬಹುದು.
* ಗ್ರಾಹಕರು ತಮ್ಮ ಸಮೀಪದ ಎಲ್‌ಪಿಜಿ ಗ್ಯಾಸ್ ಏಜೆನ್ಸಿಗೆ ಖುದ್ದಾಗಿ ಭೇಟಿ ನೀಡಿ ಬಯೋಮೆಟ್ರಿಕ್ ಇ-ಕೆವೈಸಿ ಪ್ರಕ್ರಿಯೆ ಪೂರೈಸಬಹುದು.
* ಗ್ರಾಹಕರು ಮನೆಯಲ್ಲೇ ಕುಳಿತು ಕಂಪನಿಗಳ ಅಧಿಕೃತ ಆ್ಯಪ್‌ಗಳ ಮೂಲಕ ಸ್ವತಂತ್ರವಾಗಿ ಸೆಲ್ಫ್ ಇ-ಕೆವೈಸಿ ಮಾಡಿಕೊಳ್ಳಬಹುದು. ಇಂಡೇನ್ ಗ್ರಾಹಕರು 'IndianOil ONE', ಭಾರತ್ ಗ್ಯಾಸ್ ಗ್ರಾಹಕರು 'HelloBPCL' ಮತ್ತು ಎಚ್‌ಪಿ ಗ್ಯಾಸ್ ಗ್ರಾಹಕರು 'HP PAY' ಆ್ಯಪ್‌ಗಳನ್ನು ಬಳಸಬಹುದು.
* ಗ್ರಾಹಕರಿಗೆ ಡಿಜಿಟಲ್ ಪರಿಶೀಲನೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಧಿಕೃತ ಪೋರ್ಟಲ್‌ನಲ್ಲಿ ವೀಡಿಯೊ ಟ್ಯುಟೋರಿಯಲ್‌ಗಳನ್ನು ಕೂಡ ಲಭ್ಯವಾಗಿಸಲಾಗಿದೆ.
ಇ-ಕೆವೈಸಿ ಗಡುವು ಹಲವು ಬಾರಿ ವಿಸ್ತರಣೆ ನಗರ ಮತ್ತು ಗ್ರಾಮೀಣ ಭಾಗಗಳ ಎಲ್ಲಾ ಗ್ರಾಹಕರನ್ನು ಒಳಗೊಳ್ಳುವ ಸಲುವಾಗಿ ಈ ನಿಯಮವನ್ನು ಹಲವು ಬಾರಿ ವಿಸ್ತರಿಸಲಾಗಿತ್ತು. ಆರಂಭದಲ್ಲಿ 2026ರ ಜೂನ್ 30 ಅನ್ನು ಅಂತಿಮ ಗಡುವನ್ನಾಗಿ ನಿಗದಿ ಮಾಡಲಾಗಿತ್ತು. ನಂತರ ಅದನ್ನು ಜುಲೈ 31, ಆಗಸ್ಟ್ 7, ಆಗಸ್ಟ್ 15, ಆಗಸ್ಟ್ 23, ಆಗಸ್ಟ್ 31, ಸೆಪ್ಟೆಂಬರ್ 7 ಮತ್ತು ಸೆಪ್ಟೆಂಬರ್ 14 ರವರೆಗೆ ಹಂತ-ಹಂತವಾಗಿ ವಿಸ್ತರಣೆ ಮಾಡಲಾಗಿತ್ತು.


Click it and Unblock the Notifications
