LPG: ಎಲ್‌ಪಿಜಿ ಗ್ರಾಹಕರಿಗೆ ಸಬ್ಸಿಡಿ ಕುರಿತು ಮತ್ತೊಂದು ಹೊಸ ಅಪ್ಡೇಟ್
LPG: ಕೇಂದ್ರ ಸರ್ಕಾರವು ದೇಶದ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಗ್ರಾಹಕರಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ತಂದಿದ್ದು, ಇವು ಅಕ್ಟೋಬರ್ 1ರಿಂದಲೇ ಜಾರಿಯಾಗಿವೆ. ಗ್ಯಾಸ್ ಸಬ್ಸಿಡಿಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಹಾಗೂ ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸೌಲಭ್ಯ ತಲುಪಿಸಲು 'ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ' (ಇ-ಕೆವೈಸಿ) ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಇದರ ದಿನಾಂಕ ಸಹಿತ ಮುಗಿದ್ದು, ಪಾಲಿಸದವರಿಗೆ ತೊಂದರೆಯಾಗಲಿದ್ಯಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಎಲ್‌ಪಿಜಿ ಸಂಪರ್ಕ ಹೊಂದಿರುವ ಪ್ರತಿಯೊಬ್ಬ ಗ್ರಾಹಕರು ನಿಗದಿತ ಸಮಯದೊಳಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಯಾರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಿಲ್ಲವೋ ಅವರ ಬ್ಯಾಂಕ್ ಖಾತೆಗೆ ಜಮೆಯಾಗುವ ಸಬ್ಸಿಡಿ ಹಣವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗುತ್ತದೆ. ಇ-ಕೆವೈಸಿ ಮುಗಿಸಿದ ನಂತರವೇ ಸಬ್ಸಿಡಿ ಹಣ ಮತ್ತೆ ಜಮೆಯಾಗಲು ಆರಂಭವಾಗುತ್ತದೆ. ಕೆವೈಸಿ ಮಾಡಿಸದಿದ್ದರೆ ಸಿಲಿಂಡರ್ ಕಾಯ್ದಿರಿಸುವಿಕೆ ಹಾಗೂ ವಿತರಣೆಯ ಸಮಯದಲ್ಲಿಯೂ ತಾಂತ್ರಿಕ ಅಡಚಣೆಗಳು ಎದುರಾಗುವ ಸಾಧ್ಯತೆಯಿದೆ.

ಸಿಲಿಂಡರ್ ಸರಬರಾಜು ಬಂದ್ ಆಗುವುದಿಲ್ಲ: ಕೇಂದ್ರ ಸ್ಪಷ್ಟನೆ
ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ಗ್ಯಾಸ್ ಸಂಪರ್ಕ ಸಂಪೂರ್ಣವಾಗಿ ರದ್ದಾಗುತ್ತದೆ ಅಥವಾ ಸಿಲಿಂಡರ್ ನೀಡುವುದನ್ನೇ ನಿಲ್ಲಿಸಲಾಗುತ್ತದೆ ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇದನ್ನು ಪೂರ್ಣಗೊಳಿಸದಿದ್ದರೂ ಮನೆಗೆ ಸಿಲಿಂಡರ್ ವಿತರಣೆ ಎಂದಿನಂತೆ ಮುಂದುವರೆಯಲಿದೆ. ಆದರೆ, ಸಬ್ಸಿಡಿ ರಹಿತ ಮಾರುಕಟ್ಟೆ ದರವನ್ನು ನೀಡಿ ಸಿಲಿಂಡರ್ ಪಡೆಯಬೇಕಾಗುತ್ತದೆ ಎಂದು ತಿಳಿಸಿದೆ.
ಈಗಾಗಲೇ ಇ-ಕೆವೈಸಿ ಪ್ರಕ್ರಿಯೆ ಮುಗಿಸಿರುವ ಗ್ರಾಹಕರು ಮತ್ತೆ ಇದನ್ನು ಮಾಡಿಸುವ ಅಗತ್ಯವಿಲ್ಲ. ಪ್ರಸ್ತುತ ದೇಶಾದ್ಯಂತ ಸುಮಾರು 24.73 ಕೋಟಿ (ಶೇಕಡ 89.9) ಗ್ರಾಹಕರು ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ ತಿಳಿಯಿರಿ.
ಇ-ಕೆವೈಸಿ ಪೂರ್ಣಗೊಳಿಸಲು ಸುಲಭ ಮಾರ್ಗಗಳು
* ಡೆಲಿವರಿ ಬಾಯ್ ಮೂಲಕ: ಮನೆಗೆ ಸಿಲಿಂಡರ್ ತರುವ ವಿತರಣಾ ಸಿಬ್ಬಂದಿ ಬಳಿ ಇರುವ ಅಧಿಕೃತ ಒಎಮ್‌ಸಿ (OMC) ಆ್ಯಪ್ ಮೂಲಕ ಹೆಬ್ಬೆರಳಿನ ಗುರುತು (ಬಯೋಮೆಟ್ರಿಕ್) ನೀಡಿ ಕೆವೈಸಿ ಮಾಡಿಸಬಹುದು.
* ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ: ಸ್ಥಳೀಯ ಎಲ್‌ಪಿಜಿ ವಿತರಣಾ ಕಚೇರಿಗೆ ಆಧಾರ್ ಕಾರ್ಡ್ ಹಾಗೂ ಗ್ಯಾಸ್ ಪಾಸ್‌ಬುಕ್ ತೆಗೆದುಕೊಂಡು ಹೋಗಿ ನೇರವಾಗಿ ಬಯೋಮೆಟ್ರಿಕ್ ನೀಡಬಹುದು.
* ಮೊಬೈಲ್ ಆಪ್/ಪೋರ್ಟಲ್ ಮೂಲಕ: ಇಂಡೇನ್, ಹೆಚ್‌ಪಿ ಅಥವಾ ಭಾರತ್ ಗ್ಯಾಸ್ ಕಂಪನಿಗಳ ಅಧಿಕೃತ ಮೊಬೈಲ್ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು, ಆಧಾರ್ ಫೇಸ್ ಆರ್‌ಡಿ ತಂತ್ರಜ್ಞಾನ ಬಳಸಿ ಮನೆಯಲ್ಲೇ ಕುಳಿತು ಮುಖದ ಗುರುತಿನ ಮೂಲಕ ಆನ್‌ಲೈನ್‌ನಲ್ಲೇ ಇ-ಕೆವೈಸಿ ಮುಗಿಸಬಹುದು. ಅರ್ಹ ಗ್ರಾಹಕರು ಸರ್ಕಾರದ ಸಬ್ಸಿಡಿ ಸೌಲಭ್ಯವನ್ನು ಸತತವಾಗಿ ಪಡೆಯಲು ತಕ್ಷಣವೇ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳುವುದು ಸೂಕ್ತ.


Click it and Unblock the Notifications
