LPG: ಎಲ್‌ಪಿಜಿ ಗ್ರಾಹಕರಿಗೆ ಸಬ್ಸಿಡಿ ಸ್ಥಗಿತದ ಆತಂಕ ತುಸು ದೂರ.. ಇ-ಕೆವೈಸಿ ಪ್ರಕ್ರಿಯೆ ಗಡುವು ವಿಸ್ತರಣೆ
LPG: ಗೃಹಬಳಕೆ ಎಲ್‌ಪಿಜಿ ಗ್ಯಾಸ್ ಸಿಲಿಡಂರ್ ಹೊಂದಿರುವವರಿಗೆ ಗುಡ್ ನ್ಯೂಸ್ ಇದೆ. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವ ಗಡುವನ್ನು ಇದೀಗ ಮತ್ತೆ ಮುಂದೂಡಿಕೆ ಮಾಡಲಾಗಿದೆ. ಹಾಗಾದ್ರೆ ಎಲ್ಲಿಯವರೆಗೆ ಹಾಗೂ ಇದಕ್ಕೆ ಬೇಕಾಗುವ ದಾಖಲೆಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗೃಹಬಳಕೆಯ ಅಡುಗೆ ಎಲ್‌ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಹಾಗೂ ತೈಲ ಮಾರಾಟ ಕಂಪನಿಗಳು ಮತ್ತೊಮ್ಮೆ ಕಾಲಾವಕಾಶ ನೀಡಿದ್ದು, ಗಡುವನ್ನು ಸೆಪ್ಟೆಂಬರ್ 14ರವರೆಗೆ ವಿಸ್ತರಣೆ ಮಾಡಲಾಗಿದೆ.

ದಿನಾಂಕ ವಿಸ್ತರಣೆಗೆ ಕಾರಣವೇನು?
ಸಾರ್ವಜನಿಕ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಭಾರತ್ ಪೆಟ್ರೋಲಿಯಂ (BPCL) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ (HPCL) ಏಜೆನ್ಸಿಗಳ ಮುಂದೆ ಸಾರ್ವಜನಿಕರ ದಟ್ಟಣೆ ಹೆಚ್ಚಾಗಿದ್ದನ್ನು ಗಮನಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೊದಲು ಸೆಪ್ಟೆಂಬರ್ 7 ಕೊನೆಯ ದಿನಂಕಾವಾಗಿದ್ದು, ಇದೀಗ ಸೆಪ್ಟೆಂಬರ್ 14ರ ವರೆಗೂ ವಿಸ್ತರಣೆ ಮಾಡಲಾಗಿದೆ.
ಇ-ಕೆವೈಸಿ ಮಾಡಲು ಕೊನೆಯ ಕ್ಷಣದಲ್ಲಿ ಗ್ಯಾಸ್ ಏಜೆನ್ಸಿಗಳ ಮುಂದೆ ಗ್ರಾಹಕರ ದಂಡೇ ನೆರೆಯುತ್ತಿದೆ. ತಾಂತ್ರಿಕ ಸಮಸ್ಯೆಗಳ ಹಿನ್ನೆಲೆ ಈ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಇದನ್ನ ಗಮನಿಸಿ ತೈಲ ಕಂಪನಿಗಳು ಗ್ರಾಹಕರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ಗಡುವನ್ನು ವಿಸ್ತರಣೆ ಮಾಡಿವೆ ಎನ್ನಲಾಗುತ್ತಿದೆ.
ಇ-ಕೆವೈಸಿ ಪ್ರಕ್ರಿಯೆ ಏಕೆ ಕಡ್ಡಾಯ?
ಅಡುಗೆ ಅನಿಲ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹಾಗೂ ನಕಲಿ ಅಥವಾ ಅನಧಿಕೃತ ಸಂಪರ್ಕಗಳನ್ನು ತಡೆಯಲು ಈ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಒಂದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕಗಳನ್ನು ಹೊಂದಿರುವವರನ್ನು ಗುರುತಿಸುವುದು, ನಿಜವಾದ ಫಲಾನುಭವಿಗಳಿಗೆ ಸಬ್ಸಿಡಿ ತಲುಪಿಸುವುದು ಮತ್ತು ಸಿಲಿಂಡರ್ ಕಪ್ಪುಮಾರುಕಟ್ಟೆಗೆ ರವಾನೆ ಆಗುವುದನ್ನು ತಡೆಗಟ್ಟುವುದು ಈ ಪ್ರಕ್ರಿಯೆಯ ಮುಖ್ಯ ಉದ್ದೇಶವಾಗಿದೆ.
ಇ-ಕೆವೈಸಿ ಪೂರ್ಣಗೊಳಿಸುವ ವಿಧಾನಗಳು
* ಗ್ರಾಹಕರು ತಮ್ಮ ಗ್ಯಾಸ್ ಪಾಸ್‌ಬುಕ್ ಮತ್ತು ಆಧಾರ್ ಕಾರ್ಡ್‌ನೊಂದಿಗೆ ಸಂಬಂಧಪಟ್ಟ ವಿತರಕರ ಏಜೆನ್ಸಿಗೆ ತೆರಳಿ ಬಯೋಮೆಟ್ರಿಕ್ (ಬೆರಳಚ್ಚು ಅಥವಾ ಕಣ್ಣಿನ ಸ್ಕ್ಯಾನ್) ಮೂಲಕ ಪರಿಶೀಲನೆ ಮಾಡಿಸಬಹುದು.
* ಗ್ರಾಹಕರು ತೈಲ ಕಂಪನಿಗಳ ಅಧಿಕೃತ ಆ್ಯಪ್‌ಗಳ (ಉದಾಹರಣೆಗೆ IndianOil One, BPCL, ಅಥವಾ HPCL ಆ್ಯಪ್‌ಗಳ) ಜೊತೆಗೆ 'Aadhaar FaceRD' ಆ್ಯಪ್ ಬಳಸಿಕೊಂಡು ಮನೆಯಲ್ಲೇ ಕುಳಿತು ಮುಖ ಗುರುತಿಸುವಿಕೆ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು.
ಇ-ಕೆವೈಸಿ ಮಾಡದಿದ್ದರೆ ಏನಾಗುತ್ತದೆ?
ನಿಗದಿತ ಗಡುವಿನೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ಅಂತಹವರಿಗೆ ನೀಡಲಾಗುವ ಸರ್ಕಾರದ ಸಬ್ಸಿಡಿ ತಡೆಹಿಡಿಯಲ್ಪಡುವ ಸಾಧ್ಯತೆಯಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ಸಿಲಿಂಡರ್ ಬುಕಿಂಗ್ ಪ್ರಕ್ರಿಯೆಯಲ್ಲೂ ವ್ಯತ್ಯಯ ಉಂಟಾಗಬಹುದು ಎಂದು ತೈಲ ಸಂಸ್ಥೆಗಳು ಎಚ್ಚರಿಕೆ ನೀಡಿವೆ.
ಆದ್ದರಿಂದ ಗೃಹಬಳಕೆ ಅಡುಗೆ ಅನಿಲ ಗ್ರಾಹಕರು ಸೆಪ್ಟೆಂಬರ್ 14ರ ಗಡುವಿನ ಒಳಗೆ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಬ್ಸಿಡಿ ಹಾಗೂ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ಆನ್‌ಲೈನ್‌ನಲ್ಲಿ ಇ-ಕೆವೈಸಿ ಮಾಡುವ ವಿಧಾನ
* ಇಂಡೇನ್ ಗ್ರಾಹಕರು IndianOil ONE ಆ್ಯಪ್ ಬಳಸಬಹುದು.
* ಭಾರತ್ ಗ್ಯಾಸ್ ಗ್ರಾಹಕರು Hello BPCL ಆ್ಯಪ್ ಬಳಸಬಹುದು.
* ಹೆಚ್‌ಪಿ ಗ್ಯಾಸ್ ಗ್ರಾಹಕರು HP Pay ಆ್ಯಪ್ ಬಳಸಬಹುದು.
* ಆ್ಯಪ್ ತೆರೆಯಿರಿ ಮತ್ತು e-KYC ಆಯ್ಕೆ ಮಾಡಿ.
* ಆಧಾರ್ ಸಂಖ್ಯೆ ಹಾಗೂ ಗ್ಯಾಸ್ ಸಂಪರ್ಕದ ವಿವರಗಳನ್ನು ನಮೂದಿಸಿ.
* ಅಗತ್ಯವಿದ್ದರೆ Aadhaar Face RD ಆ್ಯಪ್ ಡೌನ್‌ಲೋಡ್ ಮಾಡಿ.
* ನಂತರ ಮುಖದ ಸ್ಕ್ಯಾನ್ ಪೂರ್ಣಗೊಳಿಸಿದ ಬಳಿಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಆಫ್‌ಲೈನ್‌ನಲ್ಲಿ ಇ-ಕೆವೈಸಿ ಮಾಡುವ ವಿಧಾನ
* ಆನ್‌ಲೈನ್‌ನಲ್ಲಿ ಇ-ಕೆವೈಸಿ ಮಾಡಲು ಸಾಧ್ಯವಾಗದವರು ತಮ್ಮ ಗ್ಯಾಸ್ ಏಜೆನ್ಸಿ ಕಚೇರಿಗೆ ತೆರಳಿ ಆಧಾರ್ ಹಾಗೂ ಗ್ಯಾಸ್ ಪಾಸ್‌ಬುಕ್ ನೀಡಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನೀಡಿದ ಬಳಿಕ ಅಗತ್ಯವಿರುವ ಬಯೋಮೆಟ್ರಿಕ್ ಅಥವಾ ಮುಖದ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಬಹುದು.
* ಗ್ಯಾಸ್ ಸಿಲಿಂಡರ್ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿಯ ಬಳಿ ಇರುವ ಬಯೋಮೆಟ್ರಿಕ್ ಯಂತ್ರದ ಮೂಲಕವೂ ಇ-ಕೆವೈಸಿ ಪೂರ್ಣಗೊಳಿಸುವ ಅವಕಾಶವಿದೆ. ಆದ್ದರಿಂದ ಸಬ್ಸಿಡಿ ಸೇರಿದಂತೆ ಗ್ಯಾಸ್ ಸೇವೆಗಳಲ್ಲಿ ಯಾವುದೇ ತೊಂದರೆ ಎದುರಾಗದಂತೆ, ಇನ್ನೂ ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರು ಇಂದೇ ಪ್ರಕ್ರಿಯೆ ಮುಗಿಸಿಕೊಳ್ಳುವುದು ಉತ್ತಮ.


Click it and Unblock the Notifications
