ತಿರುಪತಿ ತಿಮ್ಮಪ್ಪ.. ದುಡ್ಡಿಗೆ ದೊಡ್ಡಪ್ಪ.. 6 ತಿಂಗಳಲ್ಲೇ ಹುಂಡಿಗೆ 700 ಕೋಟಿ ಬಿತ್ತಪ್ಪಾ!
ತಿರುಮಲ, ಸೆಪ್ಟೆಂಬರ್ 27: ತಿರುಪತಿ ತಿಮ್ಮಪ್ಪ ಅಂದ್ರೆ ದುಡ್ಡು. ದುಡ್ಡು ಅಂದ್ರೆ ತಿರುಪತಿ ತಿಮ್ಮಪ್ಪ. ಈ ತಿರುಪತಿ ತಿಮ್ಮಪ್ಪ ದುಡ್ಡಿಗೆ ದೊಡ್ಡಪ್ಪ ಅನ್ನುವುದಕ್ಕೂ ಸಾಕಷ್ಟು ಕಾರಣಗಳಿವೆ. ಜಗತ್ತಿನಲ್ಲೇ ಅತಿಹೆಚ್ಚು ಚಿನ್ನ, ಭೂಮಿ, ಆಸ್ತಿಯನ್ನು ಹೊಂದಿರುವ ಹಿಂದೂ ದೇವಸ್ಥಾನಗಳ ಪಟ್ಟಿಯಲ್ಲಿ ಈ ದೇವಾಲಯವೂ ಸೇರಿಕೊಂಡಿದೆ.
ಆಂಧ್ರಪ್ರದೇಶದ ತಿರುಮಲದಲ್ಲಿ ಇರುವ ತಿರುಪತಿ ತಿಮ್ಮಪ್ಪ ಜಗತ್ತಿನ ಶ್ರೀಮಂತ ದೇವರು ಎಂಬುದನ್ನು ಸಾಕ್ಷೀಕರಿಸುವ ಅಂಕಿ-ಅಂಶವನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಬಹಿರಂಗಪಡಿಸಿದೆ. ದೇಶಾದ್ಯಂತ 85,705 ಕೋಟಿ ರೂಪಾಯಿ ಮೌಲ್ಯದ 960ಕ್ಕೂ ಹೆಚ್ಚು ಸ್ವತ್ತುಗಳನ್ನು ಟಿಟಿಡಿ ಹೊಂದಿರುವುದಾಗಿ ತಿಳಿಸಿದೆ.
ಸರ್ಕಾರಿ ಅಂಕಿ-ಅಂಶಗಳ ಪ್ರಕಾರ, ಟಿಟಿಡಿ ತಿಳಿಸಿರುವ ಆಸ್ತಿ ಮೌಲ್ಯವು 85,705 ಕೋಟಿ ರೂಪಾಯಿ ಆಗಿದೆ. ಆದರೆ ಇದರ ಒಟ್ಟು ಮೌಲ್ಯವು 2 ಲಕ್ಷ ಕೋಟಿಗೂ ಹೆಚ್ಚಾಗಿದೆ ಎಂದು ಅಂದಾಜಿಸಲಾಗುತ್ತಿದೆ. ಟಿಟಿಡಿ ನೀಡಿದ ಮಾಹಿತಿ ಏನಿದೆ? ತಿರುಪತಿ ತಿಮ್ಮಪ್ಪನ ಆಸ್ತಿ ಎಷ್ಟಿದೆ?, ಟಿಟಿಡಿ ಮೊದಲ ಮತ್ತು ಎರಡನೇ ಶ್ವೇತಪತ್ರವನ್ನು ಹೊರಡಿಸಿದ್ದು ಯಾವಾಗ ಮತ್ತು ಅದರಲ್ಲಿ ಏನೆಲ್ಲಾ ಅಂಶಗಳಿವೆ?, ಆರು ತಿಂಗಳಿನಲ್ಲಿ ಕೋಟಿ ಕೋಟಿ ಕಲೆಕ್ಟ್ ಮಾಡಿದ್ದು ಹೇಗೆ ತಿಮ್ಮಪ್ಪ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.

ಟಿಟಿಡಿಯಿಂದ ಮೊದಲ ಬಾರಿಗೆ ಆಸ್ತಿ ಮಾಹಿತಿ ಹಂಚಿಕೆ
ಕಳೆದ ಕೆಲವು ವರ್ಷಗಳಿಗೆ ಹೋಲಿಸಿಕೊಂಡರೆ ಇದೇ ಮೊದಲ ಬಾರಿಗೆ ಟಿಟಿಡಿ ಅಧಿಕೃತವಾಗಿ ತನ್ನ ಆಸ್ತಿ ಮೌಲ್ಯವನ್ನು ಹಂಚಿಕೊಂಡಿದೆ. ಟಿಟಿಡಿ ಖಜಾನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಮೆರಿಕಾ ಸೇರಿದಂತೆ ಇತರೆ ಹಲವು ರಾಷ್ಟ್ರಗಳಲ್ಲಿ ದೇವಸ್ಥಾನಗಳನ್ನು ತೆರೆಯುವುದಕ್ಕೆ ಯೋಜನೆ ಹಾಕಿಕೊಂಡಿದೆ. ಈ ಕುರಿತು ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.

6 ತಿಂಗಳಿನಲ್ಲಿ 700 ಕೋಟಿ ಸಂಗ್ರಹ
ತಿರುಪತಿ ತಿಮ್ಮಪ್ಪನ ಹುಂಡಿಗೆ ಕೋಟಿ ಕೋಟಿ ಕಾಸು ಬಂದು ಬೀಳುತ್ತಿದೆ. ಐದು ತಿಂಗಳಿನಿಂದ ಹುಂಡಿ ಹಣದಲ್ಲಿ ಸ್ಥಿರವಾಗಿ ಏರಿಕೆ ಕಂಡು ಬಂದಿದೆ. 2022ರ ಏಪ್ರಿಲ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೂ ಆದಾಯದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಇದರಿಂದ ಆರು ತಿಂಗಳಿನಲ್ಲಿ ಬರೋಬ್ಬರಿ 700 ಕೋಟಿ ರೂಪಾಯಿ ಕಾಣಿಕೆಯು ತಿರುಪತಿ ತಿಮ್ಮಪ್ಪನ ಹುಂಡಿಗೆ ಬಿದ್ದಿರುವುದಾಗಿ ಟಿಟಿಡಿ ಮಾಹಿತಿ ನೀಡಿದೆ.

ದೇವಸ್ಥಾನದ ನಿಯಂತ್ರಣದಲ್ಲಿ 7123 ಎಕರೆ ಭೂಮಿ
ಭಾರತದಾದ್ಯಂತ 7123 ಎಕರೆ ಭೂಮಿಯನ್ನು ದೇವಸ್ಥಾನದ ಟ್ರಸ್ಟ್ ನಿಯಂತ್ರಿಸುತ್ತಿದೆ. 1974 ರಿಂದ 2014ರ ನಡುವೆ ಅಂದರೆ ವೈಎಸ್ಆರ್ ಸಿಪಿ ಸರ್ಕಾರವು ಅಸ್ತಿತ್ವಕ್ಕೆ ಬರುವುದಕ್ಕೂ ಪೂರ್ವದಲ್ಲಿ ಟಿಟಿಡಿಯ ಕೆಲವು ಆಸ್ತಿಗಳನ್ನು ವಿವಿಧ ಕಾರಣಕ್ಕಾಗಿ ಸರ್ಕಾರಕ್ಕೆ ವಿಲೇವಾರಿ ಮಾಡಲಾಗಿದೆ. ಹೀಗೆ ಆಸ್ತಿ ಮಾರಾಟಕ್ಕೆ ಕಾರಣವೇನು ಎಂಬುದನ್ನು ಮಂಡಳಿಯು ಸ್ಪಷ್ಟಪಡಿಸಿಲ್ಲ. ಅದೇ ರೀತಿ 2014ರ ನಂತರದಲ್ಲಿ ಯಾವುದೇ ಆಸ್ತಿಯನ್ನು ಟಿಟಿಡಿ ವಿಲೇವಾರಿ ಮಾಡಿಲ್ಲ, ಭವಿಷ್ಯದಲ್ಲಿ ಯಾವುದೇ ಸ್ಥಿರ ಆಸ್ತಿಯನ್ನು ಮಾರಾಟ ಮಾಡುವ ಉದ್ದೇಶವನ್ನೂ ಹೊಂದಿಲ್ಲ.

ಟಿಟಿಡಿ ಖಜಾನೆಯಲ್ಲಿ ಇರುವ ಚಿನ್ನವೆಷ್ಟು?
ರಾಜ್ಯ ಸರ್ಕಾರದ ಸೂಚನೆಯಂತೆ ಹಿಂದಿನ ಟ್ರಸ್ಟ್ ಮಂಡಳಿಯು ಟಿಟಿಡಿ ಆಸ್ತಿಗಳ ಕುರಿತು ಪ್ರತಿವರ್ಷ ಶ್ವೇತಪತ್ರ ಹೊರಡಿಸಲು ತೀರ್ಮಾನಿಸಿತ್ತು. ಕಳೆದ ವರ್ಷ ಮೊದಲ ಶ್ವೇತಪತ್ರವನ್ನು ಬಿಡುಗಡೆ ಮಾಡಲಾಗಿದ್ದು, ಇದೀಗ ಟಿಟಿಡಿ ಎಲ್ಲಾ ಆಸ್ತಿಗಳ ವಿವರ ಹಾಗೂ ಮೌಲ್ಯಮಾಪನದೊಂದಿಗೆ ಎರಡನೇ ಶ್ವೇತಪತ್ರವನ್ನು ಟಿಟಿಡಿ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ವಿವಿಧ ಬ್ಯಾಂಕುಗಳಲ್ಲಿ ಟಿಟಿಡಿಯು 14000 ಕೋಟಿಗೂ ಹೆಚ್ಚು ಸ್ಥಿರ ಠೇವಣಿಯನ್ನು ಹೊಂದಿದ್ದು, 14 ಟನ್ ಚಿನ್ನವನ್ನು ಹೊಂದಿದೆ ಎಂದು ಸುಬ್ಬಾರೆಡ್ಡಿ ಹೇಳಿದ್ದಾರೆ.












Click it and Unblock the Notifications