ಕೇಂದ್ರ ಸರ್ಕಾರಕ್ಕೆ ಬಿಗ್ ಶಾಕ್: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳು ವಿಫಲ
ನವದೆಹಲಿ: ಕೇಂದ್ರ ಎನ್‌ಡಿಎ ಸರ್ಕಾರಕ್ಕೆ ಲೋಕಸಭೆಯಲ್ಲಿ ಭಾರೀ ಮುಖಭಂಗವಾಗಿದೆ. ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೇತ್ರ ಪುನರ್ವಿಂಗಡಣೆ (Delimitation Bill) ಮತ್ತು ಮಹಿಳಾ ಮೀಸಲಾತಿ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳು ಶುಕ್ರವಾರ ಸಂಜೆ ಲೋಕಸಭೆಯಲ್ಲಿ ನಡೆದ ಬಹುಮತ ಪರೀಕ್ಷೆಯಲ್ಲಿ ಅಂಗೀಕಾರ ಪಡೆಯುವಲ್ಲಿ ವಿಫಲವಾಗಿವೆ. ಸಾಂವಿಧಾನಿಕ ತಿದ್ದುಪಡಿಗೆ ಅತ್ಯಗತ್ಯವಾಗಿ ಬೇಕಾಗಿದ್ದ ಮೂರನೇ ಎರಡರಷ್ಟು ಬಹುಮತವನ್ನು ಕಲೆಹಾಕುವಲ್ಲಿ ಆಡಳಿತಾರೂಢ ಮೈತ್ರಿಕೂಟ ವಿಫಲವಾದ ಹಿನ್ನೆಲೆಯಲ್ಲಿ ಈ ಮಸೂದೆಗಳು ಬಿದ್ದುಹೋಗಿವೆ.
ಗುರುವಾರವಷ್ಟೇ ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಸೇರಿದಂತೆ ಒಟ್ಟು ಮೂರು ಪ್ರಮುಖ ಮಸೂದೆಗಳ ಮೇಲೆ ಶುಕ್ರವಾರ ಲೋಕಸಭೆಯಲ್ಲಿ ಸುದೀರ್ಘ ಚರ್ಚೆ ಹಾಗೂ ಮತದಾನ ನಡೆಯಿತು. ಆದರೆ, ಈ ಮಸೂದೆಗಳಿಗೆ ಅಗತ್ಯ ಬೆಂಬಲ ಸಿಗಲಿಲ್ಲ. ವರದಿಗಳ ಪ್ರಕಾರ, ಲೋಕಸಭೆಯಲ್ಲಿ ಹಾಜರಿದ್ದ 489 ಸದಸ್ಯರ ಪೈಕಿ ಕೇವಲ 278 ಸಂಸದರು ಮಾತ್ರ ಮಸೂದೆಯ ಪರವಾಗಿ ಮತ ಚಲಾಯಿಸಿದ್ದಾರೆ. ಉಳಿದಂತೆ 211 ಮತಗಳು ಮಸೂದೆಯ ವಿರುದ್ಧವಾಗಿ ಚಲಾವಣೆಯಾಗಿವೆ.

ಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಶನ್‌ನಂತಹ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ ಅಂಗೀಕರಿಸಲು ಕನಿಷ್ಠ ಮೂರನೇ ಎರಡರಷ್ಟು ವಿಶೇಷ ಬಹುಮತದ ಅಗತ್ಯವಿರುತ್ತದೆ. ಆದರೆ, ಮಸೂದೆ ಪರ ಚಲಾವಣೆಯಾದ ಮತಗಳು ಈ ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಾಗಲಿಲ್ಲ.
ಪ್ರಸ್ತುತ ಲೋಕಸಭೆಯಲ್ಲಿ 540 ಸಂಸದರಿದ್ದು (ಮೂರು ಸ್ಥಾನಗಳು ಖಾಲಿ ಇವೆ), ಮಸೂದೆ ಅನುಮೋದನೆ ಪಡೆಯಲು ಕನಿಷ್ಠ 360 ಸಂಸದರು ಅದರ ಪರವಾಗಿ ಮತ ಚಲಾಯಿಸಬೇಕಾಗಿತ್ತು. ಆದರೆ, 293 ಸಂಸದರ ಬಲವನ್ನು ಹೊಂದಿರುವ ಎನ್‌ಡಿಎ ಮೈತ್ರಿಕೂಟಕ್ಕೆ ಸ್ವಂತ ಬಲದ ಮೇಲೆ ಮಸೂದೆ ಪಾಸ್ ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಹೀಗಾಗಿ ಮಸೂದೆ ಅಂಗೀಕಾರಕ್ಕೆ ಕಾಂಗ್ರೆಸ್ ಸೇರಿದಂತೆ 'ಇಂಡಿಯಾ' (INDIA) ಬಣದ ಪಕ್ಷಗಳ ಬೆಂಬಲ ಅತ್ಯಗತ್ಯವಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ವಿಪಕ್ಷ ನಾಯಕರಲ್ಲಿ ಒಗ್ಗಟ್ಟಿನಿಂದ ಮಸೂದೆ ಬೆಂಬಲಿಸುವಂತೆ ಮನವಿ ಮಾಡಿದ್ದರೂ, ವಿಪಕ್ಷಗಳು ಮಸೂದೆಯ ವಿರುದ್ಧವೇ ಮತ ಚಲಾಯಿಸಿವೆ.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಗುರುವಾರ ಸಂಸತ್ತಿನಲ್ಲಿ ಸಂವಿಧಾನ (131ನೇ ತಿದ್ದುಪಡಿ) ಮಸೂದೆ 2026, ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ 2026 ಮತ್ತು ಡಿಲಿಮಿಟೇಶನ್ ಮಸೂದೆ 2026 ಅನ್ನು ಮಂಡಿಸಿದ್ದರು. ಈ ಮಸೂದೆಗಳು ಭವಿಷ್ಯದಲ್ಲಿ ಲೋಕಸಭೆಯ ಗಾತ್ರವನ್ನು ಹೆಚ್ಚಿಸಲು, 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಮರು ವಿಂಗಡಣೆ ಮಾಡಲು ಹಾಗೂ ಇದೇ ಆಧಾರದ ಮೇಲೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಜಾರಿಗೆ ತರುವ ಉದ್ದೇಶವನ್ನು ಹೊಂದಿದ್ದವು.













Click it and Unblock the Notifications