Lok Sabha Elections: ಮೂರನೇ ಹಂತದ ಚುನಾವಣೆ: ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
2024 ರ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮೇ 7 ರಂದು ನಡೆಯಲಿದೆ. ಈ ಹಂತದಲ್ಲಿ 12 ರಾಜ್ಯಗಳ 93 ಸ್ಥಾನಗಳ ಅಭ್ಯರ್ಥಿಗಳ ಭವಿಷ್ಯವನ್ನು ಇವಿಎಂಗಳಲ್ಲಿ ಭದ್ರವಾಗುತ್ತದೆ. ಬಿಸಿಲಿನ ತಾಪದ ನಡುವೆ ಮತದಾರರನ್ನು ಮನೆಯಿಂದ ಹೊರತರುವುದು ಚುನಾವಣಾ ಆಯೋಗಕ್ಕೆ ಸವಾಲಾಗಿಯೇ ಉಳಿದಿದೆ. ಇನ್ನು ಕಣದಲ್ಲಿ ಒಟ್ಟು 1300ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಈಗಾಗಲೇ ಭಾರತದಲ್ಲಿ ಎರಡು ಹಂತದ ಚುನಾವಣೆಗಳು ನಡೆದಿವೆ. ಒಟ್ಟು ಏಳು ಹಂತದಲ್ಲಿ ಮತದಾನ ನಡೆಯಲಿದೆ. ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ. ಈ ಬಾರಿಯೂ ಬಿಜೆಪಿ ಅಧಿಕ ಸ್ಥಾನವನ್ನು ಗೆದ್ದು ಮತ್ತೊಮ್ಮೆ ಅಧಿಕಾರ ಹಿಡಿಯುವ ಕನಸಿನಲ್ಲಿದೆ. ಮೂರನೇ ಹಂತದ ಚುನಾವಣೆಯಲ್ಲಿ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ.

ಎರಡನೇ ಗೆಲುವಿನ ಕನಸಿನಲ್ಲಿ ಅಮಿತ್ ಶಾ
ಗುಜರಾತ್‌ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ, 1989 ರಿಂದ ಬಿಜೆಪಿ ಭದ್ರಕೋಟೆಯಾಗಿರುವ ಗುಜರಾತ್‌ನ ಗಾಂಧಿನಗರದಿಂದ ಎರಡನೇ ಗೆಲುವು ಸಾಧಿಸುವ ಕನಸಿನಲ್ಲಿದ್ದಾರೆ. ಈ ಬಾರಿ ಅವರು ಕಾಂಗ್ರೆಸ್‌ನ ಸೋನಾಲ್ ಪಟೇಲ್ ಅವರನ್ನು ಎದುರಿಸುತ್ತಿದ್ದಾರೆ, 2019 ರಲ್ಲಿ ಸಿಜೆ ಚಾವ್ಡಾ ವಿರುದ್ಧ ಅಮಿತ್ ಶಾ, 5.55 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಪ್ರಲ್ಹಾದ ಜೋಶಿ ಭವಿಷ್ಯ ನಿರ್ಧರಿಸಲಿರುವ ಮತದಾರ
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಧಾರವಾಡ ಲೋಕಸಭಾ ಕ್ಷೇತ್ರದ ಪ್ರಹ್ಲಾದ್ ಜೋಶಿ ಮತ್ತೊಂದು ಗೆಲುವಿನ ಕನಸಿನಲ್ಲಿದ್ದಾರೆ. 2004 ರಿಂದ ಜೋಶಿ ಅವರು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಲ್ಹಾದ್ ಜೋಶಿ ಅವರು ವಿನೋದ ಅಸೂಟಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಇವರು 2 ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದ್ದರು.

ಜ್ಯೋತಿರಾದಿತ್ಯ ಸಿಂಧಿಯಾ ಕಣದಲ್ಲಿ
ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು 2020ರಿಂದ ಮಧ್ಯಪ್ರದೇಶದ ಗುನಾದಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಯಾದವೇಂದ್ರ ರಾವ್ ದೇಶರಾಜ್ ಸಿಂಗ್ ಅವರಿಂದ ಪೈಪೋಟಿ ಎದುರಿಸುತ್ತಿದ್ದಾರೆ.
ಮಾವನ ಕ್ಷೇತ್ರದಲ್ಲಿ ಸೊಸೆ
ಮುಲಾಯಂ ಸಿಂಗ್ ಯಾದವ್ ಸ್ಪರ್ಧಿಸುತ್ತಿದ್ದ ಉತ್ತರ ಪ್ರದೇಶದ ಮೈನ್‌ಪುರಿ ಕ್ಷೇತ್ರದಿಂದ ಈ ಬಾರಿ ಅವರ ಸೊಸೆ ಡಿಂಪಲ್ ಯಾದವ್ ಸ್ಪರ್ಧಿಸುತ್ತಿದ್ದಾರೆ. ಡಿಸೆಂಬರ್ 2022 ರಲ್ಲಿ ನಡೆದ ಉಪಚುನಾವಣೆಯಲ್ಲಿ, ಡಿಂಪಲ್ ಯಾದವ್ ಬಿಜೆಪಿಯ ರಘುರಾಜ್ ಸಿಂಗ್ ಶಾಕ್ಯಾ ಅವರನ್ನು ಸೋಲಿಸಿದ್ದರು. ಈ ಬಾರಿ ಅವರು ಬಿಜೆಪಿಯ ಜೈವೀರ್ ಸಿಂಗ್ ಠಾಕೂರ್ ವಿರುದ್ಧ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಸಂಬಂಧಿಕರ ಫೈಟ್
ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಬಾರಾಮತಿ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ. ಇವರಿಗೆ ಈ ಕ್ಷೇತ್ರದಲ್ಲಿ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಸವಾಲು ಎಸೆಯಲಿದ್ದಾರೆ. ಸಾಮಾಜಿಕ ಕಾರ್ಯಗಳಿಗೆ ಹೆಸರಾಗಿರುವ ಸುನೇತ್ರಾ ಅವರು ಈ ಚುನಾವಣೆಯಲ್ಲಿ ಪವಾರ್ ಅವರ ಪರಂಪರೆಗೆ ಸವಾಲು ಹಾಕಲಿದ್ದಾರೆ. ಬಾರಾಮತಿ ಕ್ಷೇತ್ರವು 1984 ರಿಂದ ಪವಾರ್ ಕುಟುಂಬದ ಭದ್ರಕೋಟೆಯಾಗಿದೆ.
ಮಧ್ಯಪ್ರದೇಶದಲ್ಲಿ ಘಟಾನುಘಟಿಗಳ ಸ್ಪರ್ಧೆ
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ರಾಜ್‌ಗಢದಿಂದ ಚುನಾವಣಾ ಕಣಕ್ಕೆ ಮರಳಿದ್ದಾರೆ. ಇದನ್ನು ತನ್ನ "ಅಂತಿಮ ಚುನಾವಣೆ" ಎಂದು ಹೇಳಿಕೊಂಡಿರುವ ದಿಗ್ವಿಜಯ್ ಸಿಂಗ್, ಬಿಜೆಪಿ ಸಂಸದ ರೋಡ್ಮಲ್ ನಗರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು ವಿದಿಶಾದಿಂದ ಕಾಂಗ್ರೆಸ್‌ನ ಪ್ರತಾಪ್ ಭಾನು ಶರ್ಮಾ ಅವರ ವಿರುದ್ಧ ಕಣದಲ್ಲಿದ್ದಾರೆ.












Click it and Unblock the Notifications