ಬಿಜೆಪಿಗೆ 20, ಜೆಡಿಯುಗೆ 12! ಲೋಕಸಭಾ ಚುನಾವಣೆಗೆ ಬಿಹಾರ ಸಿದ್ಧ!
ಪಾಟ್ನಾ, ಆಗಸ್ಟ್ 30: ಮುಂಬರುವ ಲೋಕಸಭಾ ಚುನಾವಣೆಗೆ ಬಿಹಾರದ 40 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದಿದ್ದ ಬಿಜೆಪಿ ಕೊನೆಗೂ ತನ್ನ ನಿಲುವು ಬದಲಿಸಿದೆ. ಜೆಡಿಯು ಮತ್ತು ಬಿಜೆಪಿ ಬಿಹಾರದಲ್ಲಿ ಒಂದಾಗಿಯೇ ಲೋಕಸಭಾ ಚುನಾವಣೆ ಎದುರಿಸಲಿವೆ.
ಬಿಹಾರದ ಒಟ್ಟು 40 ಲೋಕಸಭಾ ಕ್ಷೇತ್ರಗಳಲ್ಲಿ 20 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು, 12 ಕ್ಷೇತ್ರಗಳನ್ನು ಜೆಡಿಯುಗೆ ಬಿಟ್ಟುಕೊಟ್ಟಿದೆ.
ಅಂತೆಯೇ 5 ಕ್ಷೇತ್ರಗಳಲ್ಲಿ ಲೋಕ ಜನಶಕ್ತಿ ಪಕ್ಷ ಸ್ಪರ್ಧಿಸಲಿದ್ದು, ರಾಷ್ಟ್ರೀಯ ಲೋಕ ಸಮತಾ ಪಕ್ಷ ಎನ್ ಡಿಎ ಜೊತೆ ಮೈತ್ರಿ ಮಾಡಿಕೊಂಡರೆ ಅದಕ್ಕೆ ಎರಡು ಸೀಟು ನೀಡಲು ನಿರ್ಧರಿಸಲಾಗಿದೆ.

40 ಲೋಕಸಭಾ ಕ್ಷೇತ್ರಗಳನ್ನೊಳಗೊಂಡ ಬಿಹಾರ, ಕೇಂದ್ರ ಎನ್ ಡಿಎ ಸರ್ಕಾರಕ್ಕೆ ಅತ್ಯಂತ ಮಹತ್ವದ್ದು. ರಾಜ್ಯದಲ್ಲೂ ಬಿಜೆಪಿ-ಜೆಡಿಯು ಸರ್ಕಾರ ಅಸ್ತಿತ್ವದಲ್ಲಿದೆ. ಆದರೆ ಮೊದಲು ಬಿಜೆಪಿ ಈ ರಾಜ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿತ್ತಾದರೂ, ಅದರಿಂದಾಗಿ ಮತ ವಿಭಜನೆಯಾಗಿ ವಿಪಕ್ಷಗಳು ಲಾಭ ಪಡೆಯುವ ಸಾಧ್ಯತೆ ಇದ್ದಿದ್ದರಿಂದ ಜೆಡಿಯು ಜೊತೆ ಮೈತ್ರಿ ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ.
20-12 ಸೂತ್ರದೊಂದಿಗೆ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಿದ್ಧವಾಗಿರುವ ಬಿಹಾರದಲ್ಲಿ ಈಗಾಗಲೇ ಕಾರ್ಯತಂತ್ರಗಳು ಆರಂಭವಾಗಿವೆ.












Click it and Unblock the Notifications