Lok Sabha Election: ಕರ್ನಾಟಕದ 14 ಕ್ಷೇತ್ರ ಸೇರಿ 93 ಕ್ಷೇತ್ರಗಳಲ್ಲಿ ಮತದಾನ
ಲೋಕಸಭಾ ಚುನಾವಣೆ 2024ರ ಮೂರನೇ ಹಂತದ ಚುನಾವಣೆಯ ಮತದಾನ ಇಂದು ನಡೆಯಲಿದೆ. ಒಟ್ಟು ಏಳು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೂರನೇ ಹಂತದಲ್ಲಿ 93 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 93 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರದ ಚುನಾವಣೆಯನ್ನು ಮೇ 25 ಕ್ಕೆ ಮುಂದೂಡಲಾಗಿದೆ.

ಇಂದು ಮತದಾನದ ಬಳಿಕ 543 ಲೋಕಸಭಾ ಕ್ಷೇತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ಕ್ಷೇತ್ರಗಳಿಗೆ ಚುನಾವಣೆ ಮುಗಿದಂತಾಗುತ್ತದೆ. ಅಂದರೆ ಈಗಾಗಲೇ ಮುಂದಿನ ಸರ್ಕಾರದ ಭವಿಷ್ಯವನ್ನು ಜನ ಬರೆದಾಗಿದೆ ಎನ್ನಬಹುದು.
ಚುನಾವಣಾ ಆಯೋಗವು ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಿದ್ದರಿಂದ ಮತ್ತು ಇತರ ಸ್ಪರ್ಧಿಗಳು ಕೆಳಗಿಳಿದ ಕಾರಣ ಬಿಜೆಪಿ ಸೂರತ್ ಕ್ಷೇತ್ರದಲ್ಲಿ ಅವಿರೋಧವಾಗಿ ಗೆಲುವು ಸಾಧಿಸಿದೆ.
3ನೇ ಹಂತದ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯಾಗಿರುವ ಕ್ಷೇತ್ರಗಳೇ ಹೆಚ್ಚಿವೆ. 2019 ರಲ್ಲಿ, ಇಂದು ಮತದಾನ ನಡೆಯಲಿರುವ 93 ಸ್ಥಾನಗಳಲ್ಲಿ ಬಿಜೆಪಿ 72 ಸ್ಥಾನಗಳನ್ನು ಗೆದ್ದಿತ್ತು. 26 ಸ್ಥಾನಗಳು ಗುಜರಾತ್ ಮತ್ತು 25 ಕ್ಷೇತ್ರಗಳು ಕರ್ನಾಟಕದಲ್ಲಿ.
ಯಾವ ರಾಜ್ಯಗಳಲ್ಲಿ ಎಷ್ಟು ಕ್ಷೇತ್ರ?
ಮೂರನೇ ಹಂತದಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಕರ್ನಾಟಕ (14), ಗುಜರಾತ್ (26), ಮಹಾರಾಷ್ಟ್ರ (11), ಉತ್ತರ ಪ್ರದೇಶ (10), ಮಧ್ಯಪ್ರದೇಶ (8), ಛತ್ತೀಸ್‌ಗಢ (7), ಬಿಹಾರ (5), ಅಸ್ಸಾಂ (4 ಸ್ಥಾನಗಳು), ಗೋವಾ (2), ಪಶ್ಚಿಮ ಬಂಗಾಳ (4), ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು (2) ಸೇರಿವೆ.
ಮಾಯಾವತಿಯವರ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯ ಸಾವಿನ ನಂತರ 2 ನೇ ಹಂತದಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿದ್ದ ಮಧ್ಯಪ್ರದೇಶದ ಬೆತುಲ್‌ನಲ್ಲಿಯೂ ಇಂದು ಮತದಾನ ನಡೆಯಲಿದೆ.
ಗುಜರಾತ್‌ನ ಗಾಂಧಿನಗರದಿಂದ ಕೇಂದ್ರ ಸಚಿವ ಅಮಿತ್ ಶಾ, ಮಧ್ಯಪ್ರದೇಶದ ಗುನಾದಿಂದ ಜ್ಯೋತಿರಾದಿತ್ಯ ಸಿಂಧಿಯಾ, ಕರ್ನಾಟಕದ ಧಾರವಾಡದಿಂದ ಪ್ರಲ್ಹಾದ್ ಜೋಶಿ ಮತ್ತು ಮಧ್ಯಪ್ರದೇಶದ ವಿದಿಶಾದಿಂದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಪ್ರಮುಖ ಬಿಜೆಪಿ ನಾಯಕರು.
ಮುಂದಿನ ಹಂತದ ಚುನಾವಣೆ ಮೇ 13 ರಂದು ನಡೆಯಲಿದೆ. ಜೂನ್ 1 ರಂದು ಕೊನೆಯ ಹಂತದ ಚುನಾವಣೆ ಮುಗಿದ ನಂತರ ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications