ರಾಜ್ಯಪಾಲ ಹುದ್ದೆ ಬಿಟ್ಟು ಲೋಕಸಭೆಗೆ ಸ್ಪರ್ಧೆ, ಬಿಜೆಪಿ ಅಭ್ಯರ್ಥಿಗೆ ಸೋಲು!
ಚೆನ್ನೈ, ಜೂನ್ 05: ಲೋಕಸಭೆ ಚುನಾವಣೆ 2024ರ ಫಲಿತಾಂಶ ಪ್ರಕಟವಾಗಿದೆ. ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ, ತಮಿಳುನಾಡಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಬಿಜೆಪಿ ಅಭ್ಯರ್ಥಿ ಸೋಲು ಕಂಡಿದ್ದಾರೆ.
ತಮಿಳ್ ಇಸೈ ಸೌಂದರರಾಜನ್ ಚೆನ್ನೈ ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರು. ತೆಲಂಗಾಣ ರಾಜ್ಯಪಾಲರಾಗಿದ್ದ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಬಿಜೆಪಿ ತಮಿಳುನಾಡು ರಾಜ್ಯದ 9 ಕ್ಷೇತ್ರಗಳಿಗೆ ಮೊದಲು ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಆಗಲೇ ಚೆನ್ನೈ ದಕ್ಷಿಣಕ್ಕೆ ತಮಿಳ್ ಇಸೈ ಸೌಂದರರಾಜನ್‌ಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಈಗ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು, ಅವರು ಸೋತಿದ್ದಾರೆ.
ಕ್ಷೇತ್ರದ ಚುನಾವಣಾ ಫಲಿತಾಂಶ: ಚೆನ್ನೈ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಡಿಎಂಕೆಯ ಟಿ. ಸುಮತಿ 516628 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ತಮಿಳ್ ಇಸೈ ಸೌಂದರರಾಜನ್ 290683 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದಾರೆ. ಎಐಎಡಿಎಂಕೆಯ ಡಾ. ಜಯವರ್ಧನ್ 172491 ಮತಗಳನ್ನು ಪಡೆದು ಮೂರನೇ ಸ್ಥಾನವನ್ನು ಪಡೆದಿದ್ದಾರೆ.
ಡಾ. ತಮಿಳ್ ಇಸೈ ಸೌಂದರರಾಜನ್ ಮಾರ್ಚ್ 18ರ ಸೋಮವಾರ ರಾಜೀನಾಮೆ ನೀಡಿದ್ದಾರೆ ಎಂದು ತೆಲಂಗಾಣ ರಾಜ್ಯಪಾರ ಕಛೇರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿತ್ತು. ತೆಲಂಗಾಣ ಮತ್ತು ಪುದುಚೇರಿಯ ರಾಜ್ಯಪಾಲೆಯಾಗಿದ್ದ ತಮಿಳ್ ಇಸೈ ಸೌಂದರರಾಜನ್ ಬಳಿಕ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು.
ತಮಿಳ್ ಇಸೈ ಸೌಂದರರಾಜನ್ ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಸಲ್ಲಿಕೆ ಮಾಡಿದಾಗಲೇ, ಅವರು 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.
ರಾಜ್ಯಪಾಲರಾಗಿದ್ದ ತಮಿಳ್ ಇಸೈ ಸೌಂದರರಾಜನ್ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದು ಇದೇ ಮೊದಲ ಬಾರಿಯಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಅವರು ತಮಿಳುನಾಡಿನ ತೂತುಕುಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು.
ಚುನಾವಣೆಯಲ್ಲಿ ಅವರು 215,934 ಮತಗಳನ್ನು ಪಡೆದು 563,143 ಮತಗಳನ್ನು ಪಡೆದ ಡಿಎಂಕೆ ಅಭ್ಯರ್ಥಿ ಕನಿಮೋಳಿ ವಿರುದ್ಧ ಸೋಲು ಕಂಡಿದ್ದರು. ಬಳಿಕ ಅವರನ್ನು ಕೇಂದ್ರ ಸರ್ಕಾರ ರಾಜ್ಯಪಾಲರಾಗಿ ನೇಮಕ ಮಾಡಿತ್ತು. ಈ ಬಾರಿ ಲೋಕಸಭೆ ಚುನಾವಣೆ ಎದುರಾದಾಗ ಅವರು ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿ ಪುನಃ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರು.
ಜೂನ್ 2, 1961ರಂದು ತಮಿಳ್ ಇಸೈ ಸೌಂದರರಾಜನ್ ಜನಿಸಿದರು. ಮದ್ರಾಸ್ ಕಾಲೇಜಿನಿಂದ ಅವರು ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಕೆನಡಾದಲ್ಲಿ ಸೋನೋಲಜಿ ಹಾಗೂ ಎಫ್‌ಇಟಿ ತರಬೇತಿಯನ್ನು ಪಡೆದಿದ್ದಾರೆ. ರಾಜಕೀಯಕ್ಕೆ ಬರುವ ಮೊದಲು ಅವರು ಚೆನ್ನೈನ ರಾಮಚಂದ್ರ ಮೆಡಿಕಲ್ ಕಾಲೇಜಿನಲ್ಲಿ ಐದು ವರ್ಷಗಳ ಕಾಲ ಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು.
ತಮಿಳ್ ಇಸೈ ಸೌಂದರರಾಜನ್ ತಂದೆ ಕುಮಾರಿ ಅನಂತನ್ ಸಂಸದರಾಗಿದ್ದರು. ಅವರು ಕಾಂಗ್ರೆಸ್ ನಾಯಕರಾಗಿದ್ದರು. ಆದರೆ ರಾಜಕೀಯಕ್ಕಾಗಿ ತಮಿಳ್ ಇಸೈ ಸೌಂದರರಾಜನ್ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡರು. 1999ರಲ್ಲಿ ಅವರು ಸಕ್ರಿಯ ರಾಜಕೀಯ ಪ್ರಾರಂಭಿಸಿದರು.
ಮದ್ರಾಸ್ ಮೆಡಿಕಲ್ ಕಾಲೇಜಿನಲ್ಲಿ ಓದುವಾಗಲೇ ವಿದ್ಯಾರ್ಥಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದ ತಮಿಳ್ ಇಸೈ ಸೌಂದರರಾಜನ್ ವಿದ್ಯಾರ್ಥಿ ಸಂಘದ ನಾಯಕಿಯೂ ಆಗಿದ್ದರು. ಬಿಜೆಪಿ ದಕ್ಷಿಣ ಚೆನ್ನೈ ಜಿಲ್ಲಾ ವೈದ್ಯಕೀಯ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿದ್ದರು.
2006ರಲ್ಲಿ ಮೊದಲ ಸಲ ರಾಧಾಪುರಂ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ತಮಿಳ್ ಇಸೈ ಸೌಂದರರಾಜನ್ ಸ್ಪರ್ಧಿಸಿದ್ದರು, ಆದರೆ ಸೋಲು ಕಂಡರು. 2011ರಲ್ಲಿ ವೆಲಚೇರಿ, 2106ರಲ್ಲಿ ವಿರುಗಂಬಾಕ್ಕಂ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗ ಸ್ಪರ್ಧಿಸಿ ಸೋತರು.
2009ರಲ್ಲಿ ತಮಿಳ್ ಇಸೈ ಸೌಂದರರಾಜನ್ ಚೆನ್ನೈ ಉತ್ತರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿಯೂ ಅವರು ಕಾರ್ಯ ನಿರ್ವಹಣೆ ಮಾಡಿದ್ದರು.












Click it and Unblock the Notifications