ಲೋಕಸಭೆ ಚುನಾವಣೆ ಸೋಲು: ರಾಜೀನಾಮೆಗೆ ಮುಂದಾದ ಡಿಸಿಎಂ
ಮುಂಬೈ, ಜೂನ್ 05: ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆ ಬಳಿಕ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆಗೆ ಮುಂದಾಗಿದ್ದಾರೆ. ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 9 ಸ್ಥಾನಗಳಲ್ಲಿ ಮಾತ್ರ ಜಯಗಳಿಸಿದೆ.
ಬುಧವಾರ ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವೇಂದ್ರ ಫಡ್ನವಿಸ್, "ನಾನು ಪಕ್ಷವನ್ನು ಮುನ್ನಡೆಸುತ್ತಿದ್ದೇನೆ. ಇಂತಹ ಫಲಿತಾಂಶದ ಸಂಪೂರ್ಣ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ" ಎಂದು ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿದರು.

"ನಾನು ಪಕ್ಷದ ಹೈಕಮಾಂಡ್‌ಗೆ ನನ್ನ ಎಲ್ಲಾ ಸರ್ಕಾರದ ಜವಾಬ್ದಾರಿಯಿಂದ ಮುಕ್ತಗೊಳಿಸಿ ಎಂದು ಮನವಿ ಮಾಡುತ್ತೇನೆ. ಆಗ ನಾನು ಪಕ್ಷದ ಕೆಲಸಗಳನ್ನು ಮುಂದಿನ ಚುನಾವಣೆಗಾಗಿ ಪರಿಶ್ರಮದಿಂದ ಮಾಡಲು ಅನುಕೂಲವಾಗಲಿದೆ" ಎಂದರು.
ದೇವೇಂದ್ರ ಫಡ್ನವಿಸ್ ಮಾತನಾಡಿ, "ಮಹಾರಾಷ್ಟ್ರದಲ್ಲಿ ಬಿಜೆಪಿ ಸೀಟುಗಳ ಸಂಖ್ಯೆ ಕಡಿಮೆಯಾಗಿದೆ. ಇದರ ಜವಾಬ್ದಾರಿಯನ್ನು ನಾನು ಹೊರುತ್ತೇನೆ. ನಾನು ಈ ಫಲಿತಾಂಶವನ್ನು ಒಪ್ಪಿಕೊಂಡು ಮುಂದಿನ ದಿನಗಳಲ್ಲಿ ಎಲ್ಲಿ ಹಿನ್ನಡೆಯಾಗಿದೆ ಎಂದು ತಿಳಿದುಕೊಂಡು ಮುಂದೆ ಸಾಗುತ್ತೇನೆ" ಎಂದು ಹೇಳಿದರು.
"ನಾನು ಓಡಿಹೋಗುವಂತಹ ವ್ಯಕ್ತಿಯಲ್ಲ. ನಾವು ಪಕ್ಷ ಸಂಘಟನೆಗಾಗಿ ಹೊಸ ತಂತ್ರವನ್ನು ರೂಪಿಸುತ್ತೇವೆ. ಹೊಸ ಕಾರ್ಯತಂತ್ರ ರಚನೆಯಾದ ಬಳಿಕ ಅದನ್ನು ಜನರ ಮುಂದಿಡುತ್ತಿದ್ದೇವೆ" ಎಂದರು. ಈ ಮೂಲಕ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಕೆ ಮಾಡುವ ಇಂಗಿತ ವ್ಯಕ್ತಪಡಿಸಿದರು.
ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು.
ಮಹಾರಾಷ್ಟ್ರದಲ್ಲಿ ಶಿವಸೇನೆ ನಾಯಕ ಏಕನಾಥ್ ಶಿಂಧೆ ಬಿಜೆಪಿ ಜೊತೆ ಸೇರಿದರು. ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 2 ಜುಲೈ 2023ರಂದು ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಮಹಾರಾಷ್ಟ್ರದಲ್ಲಿ 48 ಲೋಕಸಭಾ ಕ್ಷೇತ್ರಗಳಿವೆ. 2024ರ ಚುನಾವಣೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 9, ಶಿವಸೇನೆ (ಠಾಕ್ರೆ ಬಣ) 9 ಸ್ಥಾನಗಳಲ್ಲಿ ಜಯಗಳಿಸಿವೆ. ಬಿಜೆಪಿಯ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಶೇಖರ ಬಾವಾಂಕುಲೆ. ಆದರೆ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾದ ಕಾರಣ ಅವರು ಚುನಾವಣೆ ಸೋಲಿನ ಜವಾಬ್ದಾರಿ ಹೊತ್ತಿದ್ದಾರೆ.
ದೇವೇಂದ್ರ ಫಡ್ನವಿಸ್ ಸರ್ಕಾರದ ಎಲ್ಲಾ ಜವಾಬ್ದಾರಿಯಿಂದ ಮುಕ್ತಗೊಳಿಸಿ ಎಂದು ಹೈಕಮಾಂಡ್‌ಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದರೆ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಯಿಂದ ಮುಕ್ತಗೊಳಿಸುವ ಕುರಿತು ಯಾವುದೇ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications