Big Offer for Voters: ವೋಟು ಹಾಕಿ ಊಟ ಮಾಡಿ: ಮತದಾನದ ಹಕ್ಕು ಚಲಾಯಿಸುವ ಮತದಾರರಿಗೆ ಬಿಗ್ ಆಫರ್!
ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ಆರಂಭವಾಗಲಿದೆ. ಇದಕ್ಕಾಗಿ ಪ್ರಬಲ ಪಕ್ಷಗಳು ಪ್ರಚಾರದ ಮೂಲಕ ಮತಭೇಟೆಯನ್ನು ಶುರುಮಾಡಿದ್ದಾರೆ. ತಪ್ಪದೇ ಮತದಾರರು ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ. ಇದೇ ವೇಳೆ ರೆಸ್ಟೋರೆಂಟ್‌ವೊಂದು ಮತದಾರರಿಗೆ ಬಿಗ್ ಆಫರ್ ನೀಡಿದೆ.
ಲೋಕಸಭೆ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸುವ ಮತದಾರರಿಗೆ ಈ ರೆಸ್ಟೋರೆಂಟ್‌ಗಳಲ್ಲಿ 20% ರಿಯಾಯಿತಿ ಸಿಗಲಿದೆ. ಹೌದು... ಮುಂಬರುವ ಲೋಕಸಭಾ ಚುನಾವಣೆ 2024 ರಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸುವ ಮತದಾರರು ಉತ್ತರಾಖಂಡ್ ದ ರೆಸ್ಟೋರೆಂಟ್‌ಗಳಲ್ಲಿ 20% ರಿಯಾಯಿತಿ ಪಡೆಯಬಹುದು.

ಆಹಾರ ಬಿಲ್‌ನಲ್ಲಿ 20% ರಿಯಾಯಿತಿ
ಹೋಟೆಲ್ ರೆಸ್ಟೋರೆಂಟ್ ಅಸೋಸಿಯೇಶನ್‌ನ ಭಾಗವಾಗಿರುವ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಬಿಲ್‌ಗಳಲ್ಲಿ ಶೇಕಡಾ 20ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ. ಇದನ್ನು ಪಡೆಯಲು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರು ತಮ್ಮ ಹಕ್ಕು ಚಲಾಯಿಸಬೇಕಾಗುತ್ತದೆ.
ಈ ಆಫರ್ ಏಪ್ರಿಲ್ 19 ರ ಸಂಜೆಯಿಂದ ಏಪ್ರಿಲ್ 20 ರವರೆಗೆ ಮಾನ್ಯವಾಗಿರುತ್ತದೆ. ಇದಕ್ಕೆ ಚುನಾವಣಾ ಆಯೋಗವೂ ಒಪ್ಪಿಗೆ ಸೂಚಿಸಿದೆ. ಈ ನಿಟ್ಟಿನಲ್ಲಿ ಹೋಟೆಲ್ ರೆಸ್ಟೋರೆಂಟ್ ಅಸೋಸಿಯೇಶನ್ ಸಂಘ ಮತ್ತು ಚುನಾವಣಾ ಆಯೋಗ ತಿಳುವಳಿಕೆ ಪತ್ರಕ್ಕೆ (ಎಂಒಯು) ಪರಸ್ಪರ ಸಹಿ ಮಾಡಿಕೊಂಡಿವೆ. ರಾಜ್ಯದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಏನಿದರ ಉದ್ದೇಶ?
"ಉತ್ತರಾಖಂಡ್‌ದಲ್ಲಿ 19 ರಂದು ಮತದಾನ ಪೂರ್ಣಗೊಂಡ ನಂತರ, ನಮ್ಮ ಹೋಟೆಲ್‌ಗಳಿಗೆ ಬರುವವರು ತಮ್ಮ ಆಹಾರದ ಬಿಲ್‌ಗಳಲ್ಲಿ ಏಪ್ರಿಲ್ 20 ರವರೆಗೆ ಶೇಕಡಾ 20 ರಷ್ಟು ರಿಯಾಯಿತಿಯನ್ನು ಪಡೆಯುತ್ತಾರೆ. ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಮತ್ತು ಜನರು ಮತದಾನ ಮಾಡಲು ಪ್ರೋತ್ಸಾಹಿಸಲು ನಾವು ಇದನ್ನು ಮಾಡಲು ನಿರ್ಧರಿಸಿದ್ದೇವೆ. ರಿಯಾಯಿತಿಯನ್ನು ಪಡೆಯಲು, ಅವರು ತಮ್ಮ ಬೆರಳಿಗೆ ಅನ್ವಯಿಸಲಾದ ಚುನಾವಣಾ ಶಾಯಿಯನ್ನು ತೋರಿಸಬೇಕು "ಎಂದು ಉತ್ತರಾಖಂಡ ಹೋಟೆಲ್ ರೆಸ್ಟೋರೆಂಟ್ ಅಸೋಸಿಯೇಶನ್ ಅಧ್ಯಕ್ಷ ಸಂದೀಪ್ ಸಾಹ್ನಿ ಎಎನ್‌ಐಗೆ ತಿಳಿಸಿದರು.

ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ವಿಜಯ್ ಕುಮಾರ್ ಜೋಗದಂಡೆ ಮಾತನಾಡಿ, ರಾಜ್ಯದಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವ ಪ್ರಯತ್ನಕ್ಕೆ ಅನೇಕ ಸಂಘ ಸಂಸ್ಥೆಗಳು ಸಹಾಯ ಮಾಡಲು ಮುಂದೆ ಬರುತ್ತಿವೆ. ಉತ್ತರಾಖಂಡ ಹೋಟೆಲ್ ರೆಸ್ಟೋರೆಂಟ್ ಅಸೋಸಿಯೇಷನ್ ಈ ಯೋಜನೆಯನ್ನು ಮಾಡಿದೆ. ಇದಕ್ಕೆ ಚುನಾವಣಾ ಆಯೋಗವು ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಉತ್ತರಖಂಡ ಲೋಕ ಚುನಾವಣೆ ಯಾವಾಗ?
ಉತ್ತರಾಖಂಡ ಐದು ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು 2014 ಮತ್ತು 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

ರಾಜ್ಯದ ಲೋಕಸಭಾ ಕ್ಷೇತ್ರಗಳೆಂದರೆ ತೆಹ್ರಿ ಗರ್ವಾಲ್, ಗರ್ವಾಲ್, ಅಲ್ಮೋರಾ, ನೈನಿತಾಲ್-ಉದಮ್ಸಿಂಗ್ ನಗರ, ಮತ್ತು ಹರ್ದ್ವಾರ್. ಭಾರತದಲ್ಲಿ 2024ರ ಲೋಕಸಭಾ ಚುನಾವಣೆಯು ಏಪ್ರಿಲ್ 19 ರಿಂದ ಆರಂಭವಾಗಿ ಜೂನ್ 1 ರವರೆಗೆ ಒಟ್ಟು 7 ಹಂತಗಳಲ್ಲಿ ನಡೆಯಲಿದೆ.












Click it and Unblock the Notifications