Modi Road Show in Ayodhya: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ
ಅಯೋಧ್ಯೆ, ಮೇ. 06 : ಲೋಕಸಭೆ ಚುನಾವಣೆಯ ಮೂರನೇ ಹಂತದ ಎರಡು ದಿನಗಳಿರುವಾಗ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರವನ್ನು ಭರ್ಜರಿಯಾಗಿ ನಡೆಸಿದ್ದಾರೆ. ಅಯೋಧ್ಯೆಗೆ ಭೇಟಿ ನೀಡಿದ ಅವರು ರಾಮಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಜಕೀಯ ಕಾರ್ಯಕ್ರಮ ಬೃಹತ್ ರೋಡ್ ಶೋಗೂ ಮುನ್ನ ರಾಮಮಂದಿರದಲ್ಲಿ ಕಾಣಿಸಿಕೊಂಡರು. ಈ ವರ್ಷದ ಜನವರಿ 22 ರ ಪ್ರಾಣ ಪ್ರತಿಷ್ಠಾ ಸಮಾರಂಭದ ಬಳಿಕ ಮೊದಲ ಬಾರಿಗೆ ಪ್ರಧಾನಿ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಉದ್ಘಾಟಿಸಿದ ದೇಗುಲದ ಮುಂಭಾಗದ ರಸ್ತೆಯಾದ ರಾಮಪಥದಲ್ಲಿ ರೋಡ್ ಶೋ ನಡೆಸಿದ್ದಾರೆ.

ರಾಮಲಲ್ಲಾನ ವಿಗ್ರಹಕ್ಕೆ ಸಾಷ್ಟಾಂಗ ನಮಸ್ಕಾರ
ಅಯೋಧ್ಯೆಯಲ್ಲಿ ಪ್ರಧಾನಿ ಮೋದಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಶಂಖಗಳ ಊದುವಿಕೆ, ಹೂವಿನ ದಳಗಳ ಸುರಿಮಳೆ ಮತ್ತು ಜೈ ಶ್ರೀ ರಾಮ್ ಘೋಷಣೆಗಳ ನಡುವೆ ಮೋದಿ ರಾಮಲಲ್ಲಾನ ವಿಗ್ರಹಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ಅವರ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
ಇನ್ನು, ರೋಡ್ ಶೋ ವೇಳೆ ಬಣ್ಣಬಣ್ಣದ ಬಟ್ಟೆಗಳನ್ನು ತೊಟ್ಟ ಸಾವಿರಾರು ಪುರುಷರು ಮತ್ತು ಮಹಿಳೆಯರು ನೆರೆಯ ಜಿಲ್ಲೆಗಳಿಂದ ತಮ್ಮ ಮಕ್ಕಳೊಂದಿಗೆ ಬಂದು ಹೂವಿನ ಸುರಿಮಳೆಗೈದರು. 1.9 ಕಿಮೀ ರೋಡ್ ಶೋ ಮಾರ್ಗದಲ್ಲಿ ಇನ್ನೂರು ಧ್ವನಿವರ್ಧಕಗಳು, 50 ಕ್ಕೂ ಹೆಚ್ಚು ಬ್ಯಾಂಡ್‌ಗಳು ಮತ್ತು 40 ಸಾಂಸ್ಕೃತಿಕ ತಂಡಗಳು ರಸ್ತೆಯ ಎರಡೂ ಬದಿಗಳಲ್ಲಿ ಜೋರಾಗಿ ಸಂಗೀತ ನುಡಿಸಿವೆ.
ಇತ್ತ, ಸಂಜೆ 5 ಗಂಟೆಯಿಂದ ಪ್ರಧಾನಿಗಾಗಿ ಕಾದು ಕುಳಿತಿದ್ದ ಕಾರ್ಯಕರ್ತರಲ್ಲಿ ಹಲವರು ಸುಸ್ತಾಗಿ ರಸ್ತೆಯಲ್ಲೇ ಕುಳಿತುಕೊಂಡಿದ್ದರು. ತೆರೆದ ವಾಹನದಲ್ಲಿ ರಾತ್ರಿ 7.45 ಕ್ಕೆ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ್ದಾರೆ. ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಫೈಜಾಬಾದ್ ಅಭ್ಯರ್ಥಿ ಲಲ್ಲು ಸಿಂಗ್ ಅವರಿಗೆ ಸಾಥ್ ನೀಡಿದ್ದಾರೆ. ರೋಡ್ ಶೋನಲ್ಲಿ ಸ್ಥಳೀಯರ ಭಾಗವಹಿಸುವಿಕೆ ಇರಲಿಲ್ಲ ಎಂಬ ವರದಿಗಳಿವೆ.

ರೋಡ್ ಶೋಗೆ ಸ್ಥಳೀಯರಿಂದ ಆಕ್ರೋಶ!
ಪ್ರಧಾನಿ ಮೋದಿ ರೋಡ್ ಶೋನಲ್ಲಿ ಸ್ಥಳೀಯರ ಭಾಗವಹಿಸುವಿಕೆ ಇರಲಿಲ್ಲ. ಸ್ಥಳೀಯರು ಇಂತಹ ವೈಭವದ ಕಾರ್ಯಕ್ರಮಗಳೀಂದ ರೋಸಿ ಹೋಗಿದ್ದಾರೆ ಎನ್ನುವುದು ಅವರ ಮಾತುಗಳಿಂದ ತಿಳಿಯುತ್ತಿದೆ. "ನೀವು ದೇವಾಲಯವನ್ನು ನಿರ್ಮಿಸಿರುವುದು ಒಳ್ಳೆಯದು. ಆದರೆ ಪ್ರತಿದಿನ ವಿಐಪಿಗಳನ್ನು ಕಳುಹಿಸುವ ಮತ್ತು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಪಟ್ಟಣದ ಜನರ ಜೀವನವನ್ನು ನರಕ ಮಾಡಬೇಡಿ" ಎಂದು ರಾಮ ಮಂದಿರದ ಎದುರಿನ ಲೇನ್‌ನಲ್ಲಿ ವಾಸಿಸುವ ಯುವಕ ಪವನ್ ಚೌಬೆ ಹೇಳಿದ್ದಾರೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಕಳೆದ ಮೂರು ದಶಕಗಳಲ್ಲಿ ಪ್ರತಿ ಚುನಾವಣೆಯ ಸಮಯದಲ್ಲಿ ಅಯೋಧ್ಯೆ ಬೀಳುವ ಲೋಕಸಭಾ ಕ್ಷೇತ್ರವಾದ ಫೈಜಾಬಾದ್‌ನಲ್ಲಿ ರಾಮಮಂದಿರ ವಿಷಯವು ಬಿಜೆಪಿಗೆ ಸಹಾಯ ಮಾಡಲಿಲ್ಲ ಎಂದು ರಾಜಕೀಯ ವೀಕ್ಷಕ ವಿ.ಎನ್. ದಾಸ್ ಹೇಳಿದ್ದಾರೆ. ಸಮಾಜವಾದಿ ಪಕ್ಷವು ಅದರ ಒಬಿಸಿ ಬೇಸ್ ಮತ್ತು ಬಿಎಸ್‌ಪಿ ತನ್ನ ದಲಿತ ಬೆಂಬಲಿಗರೊಂದಿಗೆ ಇಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಬಿಜೆಪಿ 2014 ರಿಂದ ಇಲ್ಲಿ ಗೆದ್ದಿದೆ ಆದರೆ ಯಾವುದೇ ಪಕ್ಷವು ಫೈಜಾಬಾದ್ ತನ್ನ ಭದ್ರಕೋಟೆ ಎಂದು ಹೇಳಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಸಂಭಾಲ್, ಹತ್ರಾಸ್, ಆಗ್ರಾ, ಫತೇಪುರ್ ಸಿಕ್ರಿ, ಫಿರೋಜಾಬಾದ್, ಮೈನ್‌ಪುರಿ, ಇಟಾಹ್, ಬದೌನ್, ಬರೇಲಿ ಮತ್ತು ಅಯೋನ್ಲಾದಲ್ಲಿ ಮೇ ಏಳರ ಮಂಗಳವಾರ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ. ಅಯೋಧ್ಯೆ ಜಿಲ್ಲೆಗೆ ಒಳಪಡುವ ಫೈಜಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಮೇ 20 ರಂದು ಐದನೇ ಹಂತದ ಚುನಾವಣೆಯಲ್ಲಿ ಮತದಾನ ನಡೆಯಲಿದೆ.












Click it and Unblock the Notifications