ಲೋಕಸಭೆ ಚುನಾವಣೆ 2024: ಪ್ರಿಯಾಂಕಾ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಕಣಕ್ಕೆ!?
ಲಕ್ನೋ, ಮಾರ್ಚ್ 19: ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕಿ ನೂಪುರ್ ಶರ್ಮಾ ಅವರು ಉತ್ತರ ಪ್ರದೇಶದ ರಾಯ್ ಬರೇಲಿಯಿಂದ ಬಿಜೆಪಿ ಅವರನ್ನು ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಬಹುದು ಎಂಬ ಊಹಾಪೋಹಗಳ ನಡುವೆ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ನೂಪುರ್ ಶರ್ಮಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ಹಲವು ಮಾಧ್ಯಮ ವರದಿಗಳು ಸೂಚಿಸುತ್ತಿವೆ. ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಇಲ್ಲಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯಲಿದ್ದಾರೆ ಎಂಬ ಮಾಹಿತಿಯಿದೆ.

ಬಿಜೆಪಿ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆಯು ಒಡಿಶಾ, ಉತ್ತರ ಪ್ರದೇಶ ಮತ್ತು ಹರಿಯಾಣದಾದ್ಯಂತ 25 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಲ್ಲಿದೆ. ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗವು ಇತ್ತೀಚೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗುವ ನಿರೀಕ್ಷೆಯಿದೆ.
ನೂಪುರ್ ಶರ್ಮಾ ರಾಜಕೀಯ ಹಿನ್ನೆಲೆ
ನೂಪುರ್ ಶರ್ಮಾ 2015 ರಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಪರವಾಗಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ದೇಶದ ಗಮನ ಸೆಳೆದಿದ್ದರು. ಚುನಾವಣೆ ಗೆಲ್ಲುವ ಆಕೆಯ ಪ್ರಯತ್ನಗಳ ಹೊರತಾಗಿಯೂ, ಚುನಾವಣೆಯಲ್ಲಿ 31,000 ಮತಗಳ ಗಮನಾರ್ಹ ಅಂತರದಿಂದ ಸೋಲು ಕಂಡರು.
ರಾಜಕೀಯ ಜೀವನದಾಚೆಗೂ ನೂಪುರ್ ಶರ್ಮಾ ಅವರು ಹೆಚ್ಚು ಚರ್ಚೆಯಾಗಿದ್ದು, ಅವರ ವಿವಾದಗಳಿಂದಲೇ. ಹೌದು.. ಖಾಸಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ದೊಡ್ಡ ವಿವಾದವನ್ನು ಹುಟ್ಟುಹಾಕಿದ್ದರು. ಇದರ ಪರಿಣಾಮವಾಗಿ ಕಾನ್ಪುರದಲ್ಲಿ ದೊಡ್ಡ ಹಿಂಸಾಚಾರ ನಡೆದಿತ್ತು. ದೇಶಾದ್ಯಂತ ಗದ್ದಲದ ನಂತರ ಬಿಜೆಪಿ ಶಿಸ್ತು ಕ್ರಮ ಕೈಗೊಂಡು ಪಕ್ಷದಿಂದ ಅಮಾನತು ಮಾಡಿದೆ.

ನೂಪುರ್ ಶರ್ಮಾ ಶೈಕ್ಷಣಿಕ ಮತ್ತು ರಾಜಕೀಯ ವೃತ್ತಿ
ಏಪ್ರಿಲ್ 23, 1985 ರಂದು ಜನಿಸಿದ ನೂಪುರ್ ಶರ್ಮಾ ಅವರು ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿಪೂರ್ವ ಪದವಿ ಪಡೆದಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ (LLB) ಪದವಿ ಪಡೆದಿದ್ದಾರೆ. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ನೂಪುರ್ ಶರ್ಮಾ ಅವರ ರಾಜಕೀಯ ಜೀವನ ಶುರುವಾಗಿದ್ದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಸಂಘಟನೆ ಸೇರಿದ ಬಳಿಕ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2008 ರ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಏಕೈಕ ಎಬಿವಿಪಿ ಅಭ್ಯರ್ಥಿಯಾಗಿ ವಿಜಯಶಾಲಿಯಾದರು. ತರುವಾಯ, ಅವರು 2010 ರಲ್ಲಿ ಬಿಜೆಪಿಯ ಯುವ ಮೋರ್ಚಾದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಇಲ್ಲಿಂದ ಅವರ ರಾಜಕೀಯ ಜೀವನ ಮುಂದುವರೆಯುತ್ತಿದೆ.
ರಾಯ್ ಬರೇಲಿಯಿಂದ ಪ್ರಿಯಾಂಕಾ ಗಾಂಧಿ ಕಣಕ್ಕೆ?
ಇನ್ನು, ಉತ್ತರ ಪ್ರದೇಶದ ಕಾಂಗ್ರೆಸ್ ಭದ್ರಕೋಟೆಯಾಗಿರುವ ರಾಯ್ ಬರೇಲಿಯಿಂದ ಈ ಬಾರಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ. ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿಯೇ ಕಣಕ್ಕೆ ಇಳಿಯಬೇಕು ಎಂದು ಅಲ್ಲಿನ ಮತದಾರರು ಪಟ್ಟು ಹಿಡಿದಿದ್ದಾರೆ. ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿಯಲಿರುವ ಪ್ರಿಯಾಂಕಾ ಗಾಂಧಿ ಇಲ್ಲಿಂದಲೇ ರಾಜಕೀಯ ಜೀವನ ಆರಂಭಿಸಬೇಕು ಎಂದು ಕ್ಷೇತ್ರದ ಜನರ ಆಶಯ.












Click it and Unblock the Notifications