Arvind Kejriwal: ಜಾಮೀನು ಪಡೆದ ಬಳಿಕ ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಮೆಗಾ ರೋಡ್‌ಶೋ
ನವದೆಹಲಿ, ಮೇ. 11: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮದ್ಯ ನೀತಿ ಪ್ರಕರಣದಲ್ಲಿ ಜೂನ್ 1 ರವರೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಜಾಮೀನು ಪಡೆದ ಬಳಿಕ ಅರವಿಂದ್ ಕೇಜ್ರಿವಾಲ್ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕೆ ಭರ್ಜರಿ ಪ್ರಚಾರ ನಡೆಸಲಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷ ಎರಡು ಮೆಗಾ ರೋಡ್‌ಶೋಗಳನ್ನು ನಡೆಸಲು ಸಜ್ಜಾಗಿದೆ. ಜೈಲಿನಿಂದ ಬಂದಿರುವ ಅರವಿಂದ್ ಕೇಜ್ರಿವಾಲ್ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಲೋಕಸಭಾ ಚುನಾವಣೆ ನಾಲ್ಕನೇ ಹಂತದ ಮತದಾನದ ಪ್ರಚಾರದ ಕೊನೆಯ ದಿನವಾದ ಇಂದು ನವದೆಹಲಿ ಭಾರಿ ರಾಜಕೀಯ ಸಮಾವೇಶಕ್ಕೆ ಸಾಕ್ಷಿಯಾಗಲಿದೆ.

ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ನಂತರ ಅವರನ್ನು ತಿಹಾರ್ ಜೈಲಿಗೆ ಕಳಿಸಲಾಗಿತ್ತು. ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ಪಡೆದಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಬೆಳಗ್ಗೆ 11 ಗಂಟೆಗೆ ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ. ಅದರ ನಂತರ, ಅರವಿಂದ್ ಕೇಜ್ರಿವಾಲ್ ಅವರು ಎಎಪಿ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಎರಡು ರೋಡ್‌ಶೋಗಳನ್ನು ನಡೆಸಲಿದ್ದಾರೆ. ದಕ್ಷಿಣ ದೆಹಲಿಯಲ್ಲಿ ಸಂಜೆ 4 ಗಂಟೆಗೆ ಒಂದು, ಇನ್ನೊಂದು ಪೂರ್ವ ದೆಹಲಿಯಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.

ಅರವಿಂದ್ ಕೇಜ್ರಿವಾಲ್ ಪ್ರಕರಣ
ಸದ್ಯಕ್ಕೆ ಅರವಿಂದ್ ಕೇಜ್ರಿವಾಲ್ ಜಾಮೀನಿನ ಮೇಲೆ ಹೊರಗಿರುವುದರಿಂದ, ಅವರ ಉಪಸ್ಥಿತಿಯು ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಣಕ್ಕೆ ಇಳಿದಿರುವ ತನ್ನ ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ದೆಹಲಿ ಮತ್ತು ಪಂಜಾಬ್ ಲೋಕಸಭೆ ಚುನಾವಣೆಗಳು ಕ್ರಮವಾಗಿ ಮೇ 25 ಮತ್ತು ಜೂನ್ 1 ರಂದು ನಡೆಯಲಿವೆ.
ದೆಹಲಿಯಲ್ಲಿ ಎಎಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಸೀಟು ಹಂಚಿಕೆ ಒಪ್ಪಂದದಲ್ಲಿ ಆಪ್ ದಕ್ಷಿಣ ದೆಹಲಿ, ನವದೆಹಲಿ, ಪಶ್ಚಿಮ ದೆಹಲಿ ಮತ್ತು ಪೂರ್ವ ದೆಹಲಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಮತ್ತೊಂದೆಡೆ, ಚಾಂದಿನಿ ಚೌಕ್, ವಾಯುವ್ಯ ದೆಹಲಿ ಮತ್ತು ಈಶಾನ್ಯ ದೆಹಲಿಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಎಎಪಿ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಸಾಹಿ ರಾಮ್ ಪಹಲ್ವಾನ್ ಅವರನ್ನು ಕಣಕ್ಕಿಳಿಸಿದೆ ಮತ್ತು ಪೂರ್ವ ದೆಹಲಿಯಿಂದ ಕುಲದೀಪ್ ಕುಮಾರ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ನವದೆಹಲಿಯಿಂದ ಸೋಮನಾಥ್ ಭಾರ್ತಿ ಮತ್ತು ಪಶ್ಚಿಮ ದೆಹಲಿಯಿಂದ ಮಹಾಬಲ್ ಮಿಶ್ರಾ ಕಣಕ್ಕಿಳಿದಿದ್ದಾರೆ.
ಸರ್ವಾಧಿಕಾರ ಕೊನೆಗೊಳಿಸಬೇಕಿದೆ: ಕೇಜ್ರಿವಾಲ್
ತಿಹಾರ್ ಜೈಲಿನಿಂದ ಹೊರ ಬಂದ ನಂತರ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್ ಅವರನ್ನು ಸಾವಿರಾರು ಬೆಂಬಲಿಗರು ಸ್ವಾಗತ ಕೋರಿದ್ದಾರೆ. ಈ ವೇಳೆ ಮಾತನಾಡಿದ್ದ ಅವರು ದೇಶದಲ್ಲಿ ಸರ್ವಾಧಿಕಾರವನ್ನು ಕೊನೆಗೊಳಿಸುವ ಹೋರಾಟದಲ್ಲಿ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಮೆರವಣಿಗೆಯಲ್ಲಿ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಅವರ ಮನೆಗೆ ತಲುಪಿದರು. ಎಎಪಿ ಕಾರ್ಯಕರ್ತರು ಹೂ ದಳಗಳನ್ನು ಅವರ ಮೇಲೆ ಸುರಿದು ಘೋಷಣೆಗಳನ್ನು ಕೂಗಿದ್ದಾರೆ.
ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಸಿಕ್ಕಿರುವುದು ಎಎಪಿ ಮತ್ತು ಇಂಡಿಯಾ ಬ್ಲಾಕ್‌ನ ಪ್ರಚಾರ ಎರಡಕ್ಕೂ "ಗೇಮ್‌ಚೇಂಜರ್" ಆಗಲಿದೆ ಎಂದು ಎಎಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೆಹಲಿ ಸರ್ಕಾರದ 2021-22 ರ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿತ್ತು.












Click it and Unblock the Notifications