Live-in Couples: 2027ರ ಜನಗಣತಿ: ಲಿವ್-ಇನ್ ಸಂಬಂಧದಲ್ಲಿರುವವರಿಗೂ ವಿವಾಹಿತ ದಂಪತಿ ಸ್ಥಾನಮಾನ
ನವದೆಹಲಿ: ಮುಂಬರುವ 2027ರ ರಾಷ್ಟ್ರೀಯ ಜನಗಣತಿಯಲ್ಲಿ ಮಹತ್ವದ ಬದಲಾವಣೆಯೊಂದನ್ನು ತರಲಾಗಿದ್ದು, ಲಿವ್-ಇನ್ ಸಂಬಂಧದಲ್ಲಿರುವ ದಂಪತಿಗಳನ್ನು 'ವಿವಾಹಿತರು' ಎಂದು ಪರಿಗಣಿಸಲು ನಿರ್ಧರಿಸಲಾಗಿದೆ. ಜನಗಣತಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ ಯಾವುದೇ ದಂಪತಿ ತಮ್ಮ ಸಂಬಂಧವನ್ನು 'ಸ್ಥಿರವಾದ ಒಕ್ಕೂಟ' (Stable Union) ಎಂದು ಸ್ವಯಂ ಘೋಷಿಸಿಕೊಂಡರೆ, ಅವರನ್ನು ಗಣತಿಯಲ್ಲಿ ವಿವಾಹಿತ ದಂಪತಿಗಳೆಂದೇ ದಾಖಲಿಸಲಾಗುತ್ತದೆ. ಸಾಮಾಜಿಕ ಬದಲಾವಣೆಗಳಿಗೆ ಪೂರಕವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಎರಡು ಹಂತಗಳಲ್ಲಿ ಪ್ರಕ್ರಿಯೆ
ಈ ಬೃಹತ್ ಜನಗಣತಿ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತವು 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ನಡೆಯಲಿದ್ದು, ಇದರಲ್ಲಿ ಮನೆಗಳ ಪಟ್ಟಿ ಮತ್ತು ವಸತಿ ಸೌಕರ್ಯಗಳ (ಕುಡಿಯುವ ನೀರು, ವಿದ್ಯುತ್, ಇಂಟರ್ನೆಟ್ ಹಾಗೂ ವಾಹನಗಳ ವಿವರ) ಮಾಹಿತಿ ಸಂಗ್ರಹಿಸಲಾಗುತ್ತದೆ. ಎರಡನೇ ಹಂತವು 2027ರ ಫೆಬ್ರವರಿಯಲ್ಲಿ ಆರಂಭವಾಗಲಿದ್ದು, ಇದರಲ್ಲಿ ವ್ಯಕ್ತಿಗಳ ಹೆಸರು, ವಯಸ್ಸು, ಶಿಕ್ಷಣ, ಜಾತಿ, ಧರ್ಮ ಮತ್ತು ಉದ್ಯೋಗದಂತಹ ವೈಯಕ್ತಿಕ ವಿವರಗಳನ್ನು ಪಡೆಯಲಾಗುತ್ತದೆ.

ಡಿಜಿಟಲ್ ಕ್ರಾಂತಿ-ಸ್ವಯಂ ಎಣಿಕೆ
ಈ ಬಾರಿಯ ಜನಗಣತಿಯಲ್ಲಿ ನಾಗರಿಕರಿಗೆ 'ಸ್ವಯಂ ಎಣಿಕೆ' (Self-Enumeration) ಎಂಬ ವಿಶೇಷ ಆಯ್ಕೆಯನ್ನು ನೀಡಲಾಗಿದೆ. ಜನರು ಸರ್ಕಾರಿ ವೆಬ್ ಪೋರ್ಟಲ್ ಮೂಲಕ ತಾವಾಗಿಯೇ ತಮ್ಮ ವಿವರಗಳನ್ನು ದಾಖಲಿಸಬಹುದು. ಹೀಗೆ ಮಾಡಿದವರಿಗೆ ಒಂದು ವಿಶಿಷ್ಟ ಐಡಿ (ID) ದೊರೆಯಲಿದ್ದು, ನಂತರ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಆ ಐಡಿಯನ್ನು ತೋರಿಸಿ ಮಾಹಿತಿ ದೃಢೀಕರಿಸಬಹುದಾಗಿದೆ. ಈ ಕ್ರಮವು ಜನಗಣತಿ ಪ್ರಕ್ರಿಯೆಯನ್ನು ಮತ್ತಷ್ಟು ವೇಗವಾಗಿ ಮತ್ತು ನಿಖರವಾಗಿ ನಡೆಸಲು ಸಹಕಾರಿಯಾಗಲಿದೆ.
ಜನಗಣತಿಯಲ್ಲಿ 'ಸ್ವಯಂ-ಎಣಿಕೆ' ಎಂಬ ವಿನೂತನ ವ್ಯವಸ್ಥೆಯಡಿ ಜನರು ಗಣತಿದಾರರು ಮನೆಗೆ ಬರುವವರೆಗೆ ಕಾಯುವ ಅಗತ್ಯವಿಲ್ಲದೆ, ಸರ್ಕಾರಿ ವೆಬ್ ಪೋರ್ಟಲ್ ಮೂಲಕ ತಮಗೆ ಅನುಕೂಲಕರವಾದ ಸಮಯದಲ್ಲಿ ಕುಟುಂಬದ ಮಾಹಿತಿಗಳನ್ನು ಭರ್ತಿ ಮಾಡಬಹುದು. ಇದು ಜನಗಣತಿ ಪ್ರಕ್ರಿಯೆಯನ್ನು ಹೆಚ್ಚು ಸುಲಭ ಮತ್ತು ಖಾಸಗಿತನದಿಂದ ಕೂಡಿರುವಂತೆ ಮಾಡುತ್ತದೆ.
ಪ್ರಕ್ರಿಯೆ ಹೇಗೆ ನಡೆಯುತ್ತದೆ?
ನಾಗರಿಕರು ವೆಬ್ ಪೋರ್ಟಲ್‌ನಲ್ಲಿ ಮಾಹಿತಿ ನೀಡಿದ ನಂತರ, ಅವರಿಗೆ ಒಂದು 'ಸ್ವಯಂ-ಎಣಿಕೆ ಗುರುತಿನ ಸಂಖ್ಯೆ' ದೊರೆಯುತ್ತದೆ. ನಂತರ ನಿಗದಿತ ಸಮಯದಲ್ಲಿ ಗಣತಿದಾರರು ನಿಮ್ಮ ಮನೆಗೆ ಭೇಟಿ ನೀಡಿದಾಗ, ನೀವು ಈ ಐಡಿಯನ್ನು ಅವರಿಗೆ ನೀಡಬೇಕಾಗುತ್ತದೆ. ಗಣತಿದಾರರು ತಮ್ಮ ಮೊಬೈಲ್ ಆ್ಯಪ್‌ನಲ್ಲಿ ಈ ಐಡಿಯನ್ನು ನಮೂದಿಸಿ ನೀವು ನೀಡಿದ ಮಾಹಿತಿಯನ್ನು ದೃಢೀಕರಿಸುತ್ತಾರೆ. ಇದರಿಂದ ದೀರ್ಘಕಾಲದ ಪ್ರಶ್ನೋತ್ತರ ಅವಧಿಯನ್ನು ಉಳಿಸಬಹುದಾಗಿದೆ.
ಸಾಂಪ್ರದಾಯಿಕ ಪದ್ಧತಿಯೂ ಮುಂದುವರಿಕೆ
ಒಂದು ವೇಳೆ ಯಾರಿಗಾದರೂ ಆನ್‌ಲೈನ್ ಮೂಲಕ ಮಾಹಿತಿ ನೀಡಲು ಸಾಧ್ಯವಾಗದಿದ್ದರೆ, ಹಳೆಯ 'ಕ್ಯಾನ್ವಾಸರ್ ವಿಧಾನ' (Canvasser Method) ಎಂದಿನಂತೆ ಲಭ್ಯವಿರುತ್ತದೆ. ಅಂತಹ ಸಂದರ್ಭಗಳಲ್ಲಿ ಗಣತಿದಾರರೇ ನೇರವಾಗಿ ಮನೆಗೆ ಬಂದು ಮೊಬೈಲ್ ಆ್ಯಪ್ ಬಳಸಿ ನಿಮ್ಮ ಎಲ್ಲ ವಿವರಗಳನ್ನು ಕೇಳಿ ದಾಖಲಿಸಿಕೊಳ್ಳುತ್ತಾರೆ. ಈ ಡಿಜಿಟಲ್ ಹೆಜ್ಜೆಯು ಭಾರತದ ಜನಗಣತಿ ಇತಿಹಾಸದಲ್ಲಿ ಡೇಟಾ ಸಂಗ್ರಹಣೆಯನ್ನು ಮತ್ತಷ್ಟು ವೇಗಗೊಳಿಸುವ ನಿರೀಕ್ಷೆಯಿದೆ.












Click it and Unblock the Notifications