'ಎಐ' ನೆಪದಲ್ಲಿ ಪ್ರತಿದಿನ ಉದ್ಯೋಗಿಗಳ ವಜಾ; ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಕಾರ್ಪೊರೇಟ್ ಉದ್ಯೋಗಿ
ಕಾರ್ಪೊರೇಟ್ ಜಗತ್ತಿನಲ್ಲಿ ಇಂದು ಕೆಲಸದ ಭದ್ರತೆ ಎನ್ನುವುದು ಕಾಣೆಯಾಗುತ್ತಿದೆ. ದಿನ ಬೆಳಿಗ್ಗೆಯಾದರೆ ಒಂದಲ್ಲ ಒಂದು ಕಂಪೆನಿಯಲ್ಲ ಲೇಆಫ್ ಎನ್ನುವ ಸುದ್ದಿ ಕಿವಿಗೆ ಬೀಳುತ್ತಲೇ ಇರುತ್ತದೆ. ಟೆಕ್ನಾಲಜಿ ಬೆಳೆದಂತೆ ಮನುಷ್ಯನ ಕೆಲಸ ಸುಲಭವಾಗುತ್ತದೆ ಎಂದು ನಾವೆಲ್ಲರೂ ಭಾವಿಸಿದ್ದೆವು. ಆದರೆ, ಅದೇ ಟೆಕ್ನಾಲಜಿ ಇದೀಗ ಉದ್ಯೋಗಿಗಳ ಪಾಲಿಗೆ ಉರುಳಾಗಿ ಪರಿಣಮಿಸುತ್ತಿದೆ.
ಹೌದು, 'ಕೃತಕ ಬುದ್ಧಿಮತ್ತೆ' ಅಥವಾ ಎಐ ತಂತ್ರಜ್ಞಾನದ ನೆಪವೊಡ್ಡಿ ಕಂಪನಿಯೊಂದು ತನ್ನ ಉದ್ಯೋಗಿಗಳನ್ನು ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ತೆಗೆದುಹಾಕುತ್ತಿರುವ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಪ್ರತಿದಿನ ಒಂದಲ್ಲ ಒಂದು ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿರುವ ಸುದ್ದಿಗಳು ಆತಂಕ ಮೂಡಿಸುತ್ತಿರುವ ಬೆನ್ನಲ್ಲೇ, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ನೌಕರನೊಬ್ಬ ರೆಡ್ಡಿಟ್‌ನಲ್ಲಿ ತಮ್ಮ ಅಳಲು ತೋಡಿಕೊಂಡಿದ್ದು, ಇದು ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಉದ್ಯೋಗ ಕಡಿತದಲ್ಲಿ ಹಿರಿಯ ಅಧಿಕಾರಿಗಳೇ ಟಾರ್ಗೆಟ್
"ನನ್ನ ಕಂಪನಿ ಎಐ ಹೆಸರಿನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ವಿಶೇಷವಾಗಿ ತಂಡದಲ್ಲಿರುವ ಹಿರಿಯ ಉದ್ಯೋಗಿಗಳನ್ನು ಮೊದಲು ಗುರಿಯಾಗಿಸಿಕೊಂಡು ಕೆಲಸದಿಂದ ತೆಗೆಯಲಾಗುತ್ತಿದೆ" ಎಂದು ರೆಡ್ಡಿಟ್ ಬಳಕೆದಾರರೊಬ್ಬರು 'Going to be laid off soon. Need advice' ಎಂಬ ಶೀರ್ಷಿಕೆಯಡಿ ಬರೆದುಕೊಂಡಿದ್ದಾರೆ.
ಅವರ ಪೋಸ್ಟ್ ಪ್ರಕಾರ, ಪ್ರತಿದಿನ ಕನಿಷ್ಠ ಒಬ್ಬರನ್ನ ಅಥವಾ ಇಬ್ಬರನ್ನ ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಇದಕ್ಕೂ ಮುನ್ನ ಯಾವುದೇ ಮುನ್ಸೂಚನೆ ಅಥವಾ ಅಧಿಕೃತ ಮಾಹಿತಿ ಕಂಪನಿ ನೀಡಿರಲಿಲ್ಲ. ಕಳೆದ ತಿಂಗಳು ಉದ್ಯೋಗಿಗಳಿಗೆ ವೇತನ ಪಾವತಿ ವಿಳಂಬವಾದಾಗಲೇ ಕಂಪನಿಯಲ್ಲಿ ಏನೋ ಸರಿಯಿಲ್ಲ ಎಂಬ ಅನುಮಾನ ಶುರುವಾಗಿತ್ತು ಎಂದು ಅವರು ವಿವರಿಸಿದ್ದಾರೆ.
ಕಡ್ಡಾಯ ರಾಜೀನಾಮೆ ನೀಡಲೇಬೇಕು
ಅಚ್ಚರಿಯ ವಿಚಾರವೆಂದರೆ, ಕಂಪನಿಯು ಉದ್ಯೋಗಿಗಳನ್ನು ಅಧಿಕೃತವಾಗಿ ವಜಾಗೊಳಿಸುವ ಬದಲು, ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡುವಂತೆ ಒತ್ತಡ ಹೇರುತ್ತಿದೆ. ರಾಜೀನಾಮೆ ನೀಡಿದ ದಿನದಿಂದಲೇ ನೋಟಿಸ್ ಪಿರಿಯಡ್ ಆರಂಭವಾಗುತ್ತದೆ ಎಂದು ಹೆಚ್‌ಆರ್ ವಿಭಾಗ ತಿಳಿಸಿದೆ.
ಆದರೆ, ಆಗಸ್ಟ್ ತಿಂಗಳವರೆಗೆ ನೋಟಿಸ್ ಪಿರಿಯಡ್ ಪೂರೈಸಬೇಕಿದ್ದ ಕೆಲವು ಹಿರಿಯ ವ್ಯವಸ್ಥಾಪಕರಿಗೆ, ದಿಢೀರನೆ ಜುಲೈ 15ರ ನಂತರ ಕಚೇರಿಗೆ ಬರದಂತೆ ಸೂಚಿಸಲಾಗಿದೆ. "ನಾವು ರಾಜೀನಾಮೆ ನೀಡಿದರೂ ಕಂಪನಿ ನಮಗೆ ಸಂಬಳ ನೀಡುವುದಿಲ್ಲ ಹಾಗೂ ನಮ್ಮ ನೋಟಿಸ್ ಪಿರಿಯಡ್ ಪೂರ್ಣಗೊಳಿಸಲೂ ಅವಕಾಶ ನೀಡುವುದಿಲ್ಲ ಎಂಬ ಆತಂಕ ಕಾಡುತ್ತಿದೆ. ಎಲ್ಲರಿಗೂ ಇದೇ ಪರಿಸ್ಥಿತಿ ಎದುರಾಗಲಿದೆ" ಎಂದು ಆ ಉದ್ಯೋಗಿ ಆತಂಕ ವ್ಯಕ್ತಪಡಿಸಿದ್ದಾರೆ.
ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಕಚೇರಿ ಸ್ಥಳಾಂತರದ ಎಚ್ಚರಿಕೆ
ಮನೆಯಿಂದಲೇ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಕಂಪನಿಯು ಅಂತಿಮ ಗಡುವು ನೀಡಿದೆ. ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಂಡು ಕಚೇರಿಯಿಂದಲೇ ಕೆಲಸ ಮಾಡಬೇಕು, ಇಲ್ಲವೇ ರಾಜೀನಾಮೆ ನೀಡಬೇಕು ಎಂಬ ಷರತ್ತು ವಿಧಿಸಿದೆ. ಕಳೆದ ತಿಂಗಳಿನಿಂದ ಹೊಸ ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಈ ನೌಕರನಿಗೆ ಇಲ್ಲಿಯವರೆಗೆ ಯಾವುದೇ ಇಂಟರ್‌ವ್ಯೂ ಅವಕಾಶ ಸಿಕ್ಕಿಲ್ಲವಂತೆ.
"ನನ್ನ ಬಳಿ ಕೇವಲ 3-4 ತಿಂಗಳು ಜೀವನ ಸಾಗಿಸುವಷ್ಟು ಮಾತ್ರ ಹಣವಿದೆ. ಹೀಗಿರುವಾಗ ಬೇರೆ ರಾಜ್ಯಕ್ಕೆ ಏಕಾಏಕಿ ಸ್ಥಳಾಂತರಗೊಳ್ಳುವುದು ಆರ್ಥಿಕವಾಗಿ ನನಗೆ ಅಸಾಧ್ಯ. ಮುಂದೆ ಕೆಲಸ ಸಿಗುತ್ತದೋ ಇಲ್ಲವೋ ಎಂಬ ಖಚಿತತೆಯೂ ಇಲ್ಲ. ರಾಜೀನಾಮೆಯನ್ನು ಮುಂದೂಡಲು ಅಥವಾ ಪರಿಹಾರ ಪ್ಯಾಕೇಜ್ ಪಡೆಯಲು ಎಚ್‌ಆರ್ ಜೊತೆ ಹೇಗೆ ಮಾತನಾಡಬೇಕು?" ಎಂದು ಅವರು ಸಲಹೆ ಕೇಳಿದ್ದಾರೆ.
ರೆಡ್ಡಿಟ್‌ನಲ್ಲಿ ನೆಟ್ಟಿಗರ ಬೆಂಬಲ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಆತನ ಬೆಂಬಲಕ್ಕೆ ನಿಂತಿದ್ದು, ಸೂಕ್ತ ಸಲಹೆಗಳನ್ನು ನೀಡಿದ್ದಾರೆ. "ಒತ್ತಡಕ್ಕೆ ಮಣಿದು ಯಾವುದೇ ಕಾರಣಕ್ಕೂ ನೀವಾಗಿ ಮೊದಲು ರಾಜೀನಾಮೆ ನೀಡಬೇಡಿ. ಸ್ಥಳಾಂತರದ ಷರತ್ತು, ನೋಟಿಸ್ ಪಿರಿಯಡ್ ನಿಯಮಗಳು ಹಾಗೂ ಕೊನೆಯ ಕೆಲಸದ ದಿನದ ಬಗ್ಗೆ ಎಚ್‌ಆರ್‌ನಿಂದ ಇಮೇಲ್ ಮೂಲಕ ಲಿಖಿತ ರೂಪದಲ್ಲಿ ಪಡೆಯಿರಿ" ಎಂದು ಬಹುತೇಕರು ಹೇಳಿದ್ದಾರೆ.
"ಸದ್ಯಕ್ಕೆ ಕಚೇರಿ ಸ್ಥಳಾಂತರಕ್ಕೆ ಒಪ್ಪಿಕೊಂಡು ಕನಿಷ್ಠ ಒಂದು ತಿಂಗಳ ಕಾಲಾವಕಾಶ ಕೇಳಿ, ತಾತ್ಕಾಲಿಕವಾಗಿ ಪಿಜಿ ಮಾಡಿಕೊಂಡು, ಹೊಸ ಕೆಲಸ ಹುಡುಕುವುದನ್ನು ಇನ್ನಷ್ಟು ಚುರುಕುಗೊಳಿಸಿ" ಎಂದು ಮತ್ತೊಬ್ಬ ಬಳಕೆದಾರರು ಸಲಹೆ ನೀಡಿದ್ದಾರೆ.












Click it and Unblock the Notifications