ಲಖಿಂಪುರ ಖೇರಿ ಘಟನೆ ಬಗ್ಗೆ ಸಿಬಿಐ ತನಿಖೆ?; ಸುಪ್ರೀಂಗೆ ಅರ್ಜಿ
ಲಕ್ನೋ, ಅಕ್ಟೋಬರ್ 07; ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದ ವಿಚಾರ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಘಟನೆಯಲ್ಲಿ ನಾಲ್ವರು ರೈತರು ಸೇರಿ 8 ಜನರು ಮೃತಪಟ್ಟಿದ್ದಾರೆ. ಘಟನೆಗೆ ಕೇಂದ್ರ ಸಚಿವರ ಪುತ್ರ ಕಾರಣ ಎಂದು ಕೇಸು ದಾಖಲಾಗಿದ್ದರೂ ಆತನ ಬಂಧನವಾಗಿಲ್ಲ.
ಲಖಿಂಪುರ ಖೇರಿ ಘಟನೆ ಖಂಡಿಸಿಯನ್ನು ಖಂಡಿಸಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಭಾನುವಾರ ನಡೆದ ಹಿಂಸಾಚಾರದ ಕುರಿತು ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಯಬೇಕು ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಪೀಠ ಈ ಕುರಿತ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಲಿದೆ. ಉತ್ತರ ಪ್ರದೇಶದ ಇಬ್ಬರು ವಕೀಲರು ಸಿಬಿಐ ತನಿಖೆ ಕೋರಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ಲಖಿಂಪುರದ ಹಿಂಸಾಚಾರ, ಮಾಧ್ಯಮಗಳ ವರದಿ, ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸುತ್ತಿರುವ ರೀತಿ ಮುಂತಾದವುಗಳನ್ನು ಉಲ್ಲೇಖಿಸಿ ಇಬ್ಬರು ವಕೀಲರು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವನ್ನು ಬರೆದಿದ್ದಾರೆ. ಘಟನೆ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಲಖಿಂಪುರ ಹಿಂಸಾಚಾರದ ಬಗ್ಗೆ ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಯಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಕಾರ್ಯಕ್ರಮ ಮುಗಿಸಿಕೊಂಡಿ ಹೋಗುತ್ತಿದ್ದ ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಪುತ್ರ ಆಶಿಶ್ ಇದ್ದ ಕಾರು ಪ್ರತಿಭಟನಾನಿತರ ರೈತರಿಗೆ ಡಿಕ್ಕಿ ಹೊಡೆದು ನಾಲ್ವರು ಮೃತಪಟ್ಟಿದ್ದರು. ಬಳಿಕ ಕಾರನ್ನು ಅಡ್ಡಗಟ್ಟಿ ರೈತರು ಬೆಂಕಿ ಹಚ್ಚಿದ್ದು, ಈ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಪ್ರತಿಪಕ್ಷಗಳಿಗೆ ಅಡ್ಡಿ ಪಡಿಸಿದ ಪೊಲೀಸರು
ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಲಖಿಂಪುರ ಖೇರಿಯಲ್ಲಿ ನಡೆದ ಘಟನೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿವೆ. ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಘಟನೆ ಬಳಿಕ ಪ್ರತಿಪಕ್ಷಗಳ ನಾಯಕರು ಲಖಿಂಪುರ ಖೇರಿಗೆ ತೆರಳದಂತೆ ಉತ್ತರ ಪ್ರದೇಶ ಸರ್ಕಾರ ನಿರ್ಬಂಧ ವಿಧಿಸಿತ್ತು. ಅಂತಿಮವಾಗಿ ಒತ್ತಡಕ್ಕೆ ಮಣಿದು ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಖಿಂಪುರ ಖೇರಿಗೆ ಭೇಟಿ ನೀಡಲು ಅವಕಾಶ ನೀಡಿತ್ತು. ರಾಹುಲ್ ಗಾಂಧಿ ಮೃತಪಟ್ಟ ರೈತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಉತ್ತರ ಪ್ರದೇಶ ಪೊಲೀಸರ ತನಿಖೆ
ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಕೇಂದ್ರ ಸಚಿವರ ಪುತ್ರ ಕಾರಣ ಎಂದು ಪ್ರಕರಣ ದಾಖಲು ಮಾಡಲಾಗಿದೆ. ಆದರೆ ಇನ್ನೂ ಆತನ ಬಂಧನವಾಗಿಲ್ಲ. ಆದ್ದರಿಂದ ಪೊಲೀಸರ ತನಿಖೆ ಬಗ್ಗೆ ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ. ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಯಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಆದರೆ ಉತ್ತರ ಪ್ರದೇಶದ ಇಬ್ಬರು ವಕೀಲರು ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ಸಿಬಿಐ ತನಿಖೆಗೆ ಕೋರಿದ್ದಾರೆ. ಈ ಅರ್ಜಿಯ ವಿಚಾರಣೆ ಇಂದು ನ್ಯಾಯಾಲಯದಲ್ಲಿ ನಡೆಯಲಿದೆ.

ರೈತರ ಮೇಲೆ ವ್ಯವಸ್ಥಿತ ದಾಳಿ
"ದೇಶದ ರೈತರ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಭೂಸ್ವಾಧೀನ ಮಸೂದೆಯನ್ನು ತದ್ವಿರುದ್ಧಗೊಳಿಸಿದ್ದು ಮೊದಲ ದಾಳಿ, ಮೂರು ಕೃಷಿ ಕಾಯ್ದೆಗಳು ಎರಡನೇ ದಾಳಿ, ಈಗ ರೈತರ ಹಕ್ಕುಗಳನ್ನು ಕಸಿದುಕೊಂಡು ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಹೊಸ ರಾಜಕೀಯ ನಡೆಯುತ್ತಿದೆ. ಅಪರಾಧಿಗಳು ತಮಗೆ ಏನು ಬೇಕೋ ಅದೆಲ್ಲವನ್ನೂ ಮಾಡಿ ಮುಕ್ತವಾಗಿ ತಿರುಗಾಡಿಕೊಂಡು ಇರಬಹುದು. ಆದರೆ ಸಂತ್ರಸ್ತರಿಗೆ ನ್ಯಾಯಕೊಡಿ ಎಂದು ನೀವು ಕೇಳಿದರೆ ಅವರನ್ನು ಬಂಧಿಸಲಾಗುತ್ತದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಸಚಿವ ಅಜಯ್ ಕುಮಾರ್ ಮಿಶ್ರಾ ಹೇಳಿಕೆ
ಲಖಿಂಪುರ ಖೇರಿ ಹಿಂಸಾಚಾರದ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಇಲಾಖೆ ರಾಜ್ಯ ಖಾತೆ ಸಚಿವ ಅಜಯ್ ಕುಮಾರ್ ಮಿಶ್ರಾ, "ಲಖಿಂಪುರ ಕೇರಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಹಲವು ತನಿಖಾ ಸಂಸ್ಥೆಗಳು ನ್ಯಾಯ ಸಮ್ಮತ ತನಿಖೆ ನಡೆಸಲಿವೆ. ತನಿಖಾ ಸಂಸ್ಥೆಗಳು ಎಲ್ಲಾ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತವೆ. ಅವುಗಳ ಮೇಲೆ ಯಾವುದೇ ಒತ್ತಡವಿಲ್ಲ. ತಮ್ಮ ಮತ್ತು ತಮ್ಮ ಪುತ್ರನ ವಿರುದ್ಧದ ಆರೋಪಗಳು ಪ್ರತಿಪಕ್ಷಗಳ ಸಂಚು" ಎಂದು ಸಚಿವರು ಆರೋಪಿಸಿದ್ದಾರೆ.












Click it and Unblock the Notifications