ಅಮೇಥಿಯಲ್ಲಿ ಸ್ಪರ್ಧಿಸಲು ಮೋದಿಗೆ ಆಮ್ ಆದ್ಮಿ ಚಾಲೆಂಜ್!
ನವದೆಹಲಿ, ಡಿ. 30 : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಸಾಧಿಸಿ, ಅಧಿಕಾರದ ಗದ್ದುಗೆ ಏರಿರುವ ಆಮ್ ಆದ್ಮಿ ಪಕ್ಷ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಪಕ್ಷದ ಮುಖಂಡ ಕುಮಾರ್ ವಿಶ್ವಾಸ್ ತಾನು ಕಾಂಗ್ರೆಸ್ ಭದ್ರಕೋಟೆ ಅಮೇಥಿಯಲ್ಲಿ ಸ್ಪರ್ಧಿಸುತ್ತೇನೆ ರಾಹುಲ್ ಗಾಂಧಿ, ನರೇಂದ್ರ ಮೋದಿ ಈ ಕ್ಷೇತ್ರದಲ್ಲಿ ಕಣಕ್ಕಿಳಿಯಲಿ ಎಂದು ಸವಾಲು ಹಾಕಿದ್ದಾರೆ.
ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರ್ ವಿಶ್ವಾಸ್, ಉತ್ತರ ಪ್ರದೇಶದ ಅಮೇಥಿಯಲ್ಲಿ ನೆಹರೂ ಕುಟುಂಬದ ಪಾರಪತ್ಯ ವನ್ನು ಅಂತ್ಯಗೊಳಿಸಲು ಜನರು ಸಿದ್ಧರಾಗಿದ್ದಾರೆ. ತಾವು ಕ್ಷೇತ್ರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಲಿದ್ದು, ನರೇಂದ್ರ ಮೋದಿ ಸಹ ಇದೇ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದರು.

ನಾನು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಲಿದ್ದೇನೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಹ ಈ ಕ್ಷೇತ್ರದಿಂದ ಸ್ಪರ್ಧಿಸಲಿ, ಆಯ್ಕೆಯ ವಿಚಾರವನ್ನು ಜನರಿಗೆರ ಒಪ್ಪಿಸೋಣ ಎಂದು ಕುಮಾರ್ ಉಭಯ ನಾಯಕರಿಗೂ ಬಹಿರಂಗ ಸವಾಲು ಹಾಕಿದ್ದಾರೆ. [ರಾಹುಲ್ ಗಾಂಧಿ ವಿರುದ್ಧ ಆಮ್ ಆದ್ಮಿ ಅಭ್ಯರ್ಥಿ ಕಣಕ್ಕೆ]
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಮ್ಮ ಒಂದು ಗಂಟೆ ಭಾಷಣದಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸುತ್ತಾರೆ. ರಾಹುಲ್ ಗಾಂಧಿ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಅವರ ವಿರುದ್ಧ ಮೋದಿ ಏಕೆ ಸ್ಪರ್ಧಿಸಬಾರದು ಎಂದು ಕುಮಾರ್ ಪ್ರಶ್ನಿಸಿದರು. ಕುಮಾರ್ ವಿಶ್ವಾಸ್ ರಾಹುಲ್ ವಿರುದ್ಧ ಸ್ಪರ್ಧಿಸುತ್ತಾರೆ ಎಂಬುದು ಹಳೆ ಸುದ್ದಿ ಸದ್ಯ ಅಖಾಡಕ್ಕೆ ಮೋದಿ ಅವರನ್ನು ಕರೆತರುವ ಯತ್ನ ನಡೆದಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ಕ್ಷೇತ್ರ ಬದಲಾವಣೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಮೇಥಿ ಕ್ಷೇತ್ರದಿಂದ ಪ್ರಿಯಾಂಕ ಗಾಂಧಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಸುದ್ದಿಗಳು ಇವೆ. ಇವಕ್ಕೆ ಪುಷ್ಠಿ ನೀಡುವಂತೆ ಪ್ರಿಯಾಂಕ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ದೆಹಲಿಯಲ್ಲಿ ಭರ್ಜರಿ ಜಯ ಸಾಧಿಸಿದ ಆಮ್ ಆದ್ಮಿ ಪಕ್ಷ ನರೇಂದ್ರ ಮೋದಿ ಅವರಿಗೆ ಅಮೇಥಿಯಲ್ಲಿ ಸ್ಪರ್ಧಿಸುವಂತೆ ಸಲಾಲು ಹಾಕಿದೆ. ಒಂದು ವೇಳೆ ರಾಹುಲ್, ಮೋದಿ, ಕುಮಾರ್ ವಿಶ್ವಾಸ್ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿದರೆ, ಅಮೇಥಿ ಕ್ಷೇತ್ರ ದೇಶದ ಹೈ ವೋಲ್ಟೇಜ್ ಕ್ಷೇತ್ರವಾಗಲಿದೆ.












Click it and Unblock the Notifications