ಕೋಲ್ಕತ್ತಾ: ಬಾಲಕಿ ನಾಪತ್ತೆ-ಸೂಟ್‌ಕೇಸ್‌ನಲ್ಲಿ ಶವವಾಗಿ ಪತ್ತೆ- ಪೊಲೀಸರ ವಿರುದ್ಧ ಪ್ರತಿಭಟನೆ
ಕೋಲ್ಕತ್ತಾ ಮಾರ್ಚ್ 27: 7 ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದ್ದು, ಬಾಲಕಿಯ ದೇಹ ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿದೆ. ನೆರೆಹೊರೆಯವರೇ ಬಾಲಕಿಯನ್ನು ಅಪಹರಿಸಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಾತ್ರವಲ್ಲದೆ ಪೊಲೀಸರ ಬೇಜವಬ್ದಾರಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ 32 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯನ್ನು ಕೊಂದು ಆಕೆಯ ದೇಹವನ್ನು ಸೂಟ್‌ಕೇಸ್‌ನಲ್ಲಿ ಪ್ಯಾಕ್ ಮಾಡಲಾಗಿರುವುದು ಕಂಡು ಬಂದಿದೆ. ಕೋಲ್ಕತ್ತಾದ ಶ್ರೀಧರ್ ರಾಯ್ ರಸ್ತೆಯ ನಿವಾಸಿಯಾಗಿರುವ ಅಪ್ರಾಪ್ತ ಬಾಲಕಿ ಭಾನುವಾರ ಮುಂಜಾನೆಯಿಂದ ನಾಪತ್ತೆಯಾಗಿದ್ದಳು. ಸ್ಥಳೀಯರ ಪ್ರಕಾರ, ಸಂತ್ರಸ್ತೆಯ ಕುಟುಂಬದವರು ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತಿಲಜಾಲ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ದಾಖಲಿಸಿದ್ದಾರೆ.

ಬಾಲಕಿ ನಾಪತ್ತೆ-ಸೂಟ್‌ಕೇಸ್ ಪತ್ತೆ
ಹೊರಾಂಗಣದಲ್ಲಿ ಹುಡುಕಾಟ ನಡೆಸುವುದಲ್ಲದೆ, ಕಟ್ಟಡದೊಳಗಿನ ಎಲ್ಲಾ 32 ಫ್ಲಾಟ್‌ಗಳಲ್ಲಿ ಪೊಲೀಸರು ಸಂಪೂರ್ಣ ಶೋಧ ಕಾರ್ಯಾಚರಣೆ ನಡೆಸಿದರು. ಆದರೆ ಹುಡುಗಿ ಪತ್ತೆಯಾಗಿರಲಿಲ್ಲ. ಸ್ಥಳೀಯ ನಿವಾಸಿಗಳ ಪ್ರಕಾರ, ಅಪ್ರಾಪ್ತ ಬಾಲಕಿ ಪಕ್ಕದ ಕಟ್ಟಡಕ್ಕೆ ಪ್ರವೇಶಿಸುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ. ಆದರೆ ದೃಶ್ಯಗಳನ್ನು ಪೊಲೀಸರಿಗೆ ತೋರಿಸಿದರೂ ಅದು ಪ್ರಯೋಜನವಾಗಿಲ್ಲ. ಯಾಕೆಂದರೆ ಆ ಸ್ಥಳದಲ್ಲಿ ಪೊಲೀಸರು ಸಂಪೂರ್ಣ ಹುಡುಕಾಟ ನಡೆಸಿದರು ಬಾಲಿಕ ಪತ್ತೆಯಾಗಲಿಲ್ಲ. ಸಂಪೂರ್ಣ ಹುಡುಕಾಟ ನಡೆಸಿದ ನಂತರವೂ ಪೊಲೀಸರು ಬಾಲಕಿಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಸಿಸಿಟಿವಿ ದೃಶ್ಯ ಸಿಕ್ಕರೂ ಬೇಜವಬ್ದಾರಿ ತೋರಿದ ಪೊಲೀಸ್
ಇದು ಪೊಲೀಸರ ಪರಿಣಾಮಕಾರಿತ್ವದ ಬಗ್ಗೆ ನೆರೆಹೊರೆಯವರಲ್ಲಿ ಕಳವಳವನ್ನು ಹುಟ್ಟುಹಾಕಿದೆ. ಸುದೀರ್ಘ ಹುಡುಕಾಟದ ನಂತರ, ಸಂಜೆ ಪಕ್ಕದ ಮನೆಯನ್ನು ಗಮನಿಸಿದ ನೆರೆಹೊರೆಯವರು ಅನುಮಾನಗೊಂಡರು. ಅವರು ಬೀಗವನ್ನು ಒಡೆದು ನೋಡಿದಾಗ ಕಾಣೆಯಾದ ಹುಡುಗಿಯ ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಲಾಗಿರುವುದು ಕಂಡುಬಂದಿದೆ.

ಅಲೋಕ್ ಕುಮಾರ್ ಅವರ ಫ್ಲಾಟ್‌ನ ಎರಡನೇ ಮಹಡಿಯಲ್ಲಿ ಶವ ಪತ್ತೆಯಾಗಿದೆ ಎಂದು ಕೋಲ್ಕತ್ತಾ ಪೊಲೀಸರು ಖಚಿತಪಡಿಸಿದ್ದಾರೆ. ಬಿಹಾರದ ಸಮಸ್ತಿಪುರ ಮೂಲದ ಅಲೋಕ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆರೋಪಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತ ಆರೋಪಿ ವಿಚಾರಣೆ
7 ವರ್ಷದ ಬಾಲಕಿಯ ಹತ್ಯೆಯ ಹಿಂದಿನ ಉದ್ದೇಶ ಇನ್ನೂ ತನಿಖೆಯಲ್ಲಿದ್ದು, ಬಂಧಿತ ಆರೋಪಿಯನ್ನು ಪ್ರಸ್ತುತ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಆರೋಪಿ ಮಾತ್ರ ಬಾಲಕಿ ಅಪಹಣಕ್ಕೆ ಕಾರಣವನ್ನು ಬಿಟ್ಟುಕೊಟ್ಟಿಲ್ಲ ಎಂದು ತಿಳಿದು ಬಂದಿದೆ. ಬಾಲಕಿಯ ತಲೆ ಮತ್ತು ಕಿವಿಯಲ್ಲಿ ಗಾಯಗಳಿರುವುದನ್ನು ಪೊಲೀಸರು ಪತ್ತೆ ಮಾಡಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪೊಲೀಸರು ಮಾಡುವ ಕೆಲಸವನ್ನು ಸ್ಥಳೀಯರು ಮಾಡಿರುವುದು ಸದ್ಯ ಆಕ್ರೋಶಕ್ಕೆ ಗುರಿ ಮಾಡಿದೆ.

ಠಾಣೆಯ ಮುಂದೆ ಬಾಲಕಿ ಸಂಬಂಧಿಕರ ಪ್ರತಿಭಟನೆ
ಈ ಘಟನೆಯ ನಂತರ, ಪ್ರದೇಶದಲ್ಲಿ ಗೊಂದಲದ ವಾತಾವರಣ ಉಂಟಾಯಿತು ಮತ್ತು ಪೊಲೀಸರ ನಿರ್ಲಕ್ಷ್ಯವನ್ನು ಆರೋಪಿಸಿ ನೆರೆಹೊರೆಯವರು ತಿಲಜಾಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಸ್ಥಳೀಯರು ಪ್ರತಿಭಟಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹೆಚ್ಚುವರಿ ಪಡೆಗಳನ್ನು ನಿಯೋಜಿಸಬೇಕಾಯಿತು. ಜನಸಂದಣಿ ಪ್ರಕ್ಷುಬ್ಧಗೊಂಡಾಗ ಪೊಲೀಸ್ ಠಾಣೆಯ ಗೇಟ್ ಅನ್ನು ಸಹ ಮುಚ್ಚಬೇಕಾಯಿತು.
ಕೋಲ್ಕತ್ತಾ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ಈ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ ಮತ್ತು ಲಭ್ಯವಾದಂತೆ ಹೆಚ್ಚಿನ ಮಾಹಿತಿಯನ್ನು ಒದಗಿಸುವುದಾಗಿ ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.












Click it and Unblock the Notifications