Kolkata: ಹೆರಿಗೆಯಾದ ಕೆಲವೇ ನಿಮಿಷದಲ್ಲಿ ಹಸುಗೂಸನ್ನು ಕಿಟಕಿಯಿಂದ ಎಸೆದ ತಾಯಿ! ಕಾರಣ ಕೇಳಿದ ಪೊಲೀಸರೇ ಶಾಕ್
ಕೋಲ್ಕತ್ತಾ ಏಪ್ರಿಲ್ 25: ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ತಾಯಿಯೊಬ್ಬಳು ಹೆರಿಗೆಯಾಗಿ ಕೆಲವೇ ನಿಮಿಷದಲ್ಲಿ ನವಜಾತ ಶಿಶುವನ್ನು ಕಿಟಕಿಯಿಂದ ಎಸೆದಿದ್ದಾಳೆ. ಏಪ್ರಿಲ್ 22 ರಂದು ಕೋಲ್ಕತ್ತಾದ ಕಸ್ಬಾ ಪ್ರದೇಶದಲ್ಲಿ ಮಹಿಳೆ ತನ್ನ ಮನೆಯ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದಳು. ನಂತರ ಅಳುತ್ತಿದ್ದ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ.
ಮಗುವಿಗೆ ಜನ್ಮ ನೀಡಿದ ಕೆಲವೇ ನಿಮಿಷಗಳಲ್ಲಿ ತಾಯಿ ಹಸೂಗೂಸನ್ನು ಶೌಚಾಲಯದ ಕಿಟಕಿಯಿಂದ ಹೊರಗೆ ಎಸೆದು ಪೊಲೀಸರ ಅತಿಥಿಯಾಗಿದ್ದಾಳೆ. ಬಂಧನದ ಬಳಿಕ ಮಹಿಳೆ, 'ಕಳೆದ ಕೆಲವು ತಿಂಗಳುಗಳಿಂದ ನನಗೆ ಮುಟ್ಟು ಆಗಿರಲಿಲ್ಲ. ನಾನು ಗರ್ಭಿಣಿ ಎಂದು ತಿಳಿದೇ ಇರಲಿಲ್ಲ' ಎಂದು ಪೊಲೀಸರ ಮುಂದೆ ಹೇಳಿಕೊಂಡಿದ್ದಾಳೆ.

'ಶನಿವಾರ ನಾನು ಗಂಡು ಮಗುವಿಗೆ ಜನ್ಮ ನೀಡಿದೆ. ನಮ್ಮ ಮನೆಯ ಶೌಚಾಲಯದಲ್ಲಿ ಮಗು ಹುಟ್ಟಿತು. ನಂತರ ಮಗು ಅಳಲು ಪ್ರಾರಂಭಿಸಿತು. ಆಗ ನನಗೆ ದಿಗ್ಭ್ರಮೆಯಾಯಿತು. ಹೀಗಾಗಿ ನಾನು ಅದನ್ನು ಶೌಚಾಲಯದ ಕಿಟಕಿಯನ್ನು ಒಡೆದು ಅದರಿಂದ ಮಗುವನ್ನು ಹೊರ ಎಸೆದೆ' ಎಂದು ಮಹಿಳೆ ಹೇಳಿಕೊಂಡಿದ್ದಾಳೆ.
ಕಿಟಕಿಯ ಗಾಜು ಒಡೆದ ಸದ್ದು ಕೇಳಿ ಸ್ಥಳೀಯರು ಸ್ಥಳಕ್ಕಾಗಮಿಸಿ ನೋಡಿದಾಗ ಮಗು ನೆಲದ ಮೇಲೆ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯ ದೇಹದ ಕೆಳಗಿನ ಭಾಗದಿಂದ ರಕ್ತಸ್ರಾವ ಕಂಡುಬಂದಿದೆ. ಆಕೆ ಮತ್ತು ಆಕೆಯ ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮರುದಿನ ಬೆಳಗ್ಗೆ ಮಗು ಸಾವನ್ನಪ್ಪಿದೆ.

''ಮಗು ಜೀವಂತವಾಗಿ ಜನಿಸುವುದನ್ನು ತಡೆಯುವ ಅಥವಾ ಹುಟ್ಟಿದ ನಂತರ ಸಾಯುವಂತೆ ಮಾಡುವ ಉದ್ದೇಶದಿಂದ ಮಾಡಿದ ಕೃತ್ಯಕ್ಕಾಗಿ" ಮಹಿಳೆಯ ಮೇಲೆ ಐಪಿಸಿಯ ಒಂದು ವಿಭಾಗದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications