ಭಾರತ ಹಾಗೂ ನೇಪಾಳ ನಡುವೆ ಪೆಟ್ರೋಲಿಯಂ ಪೈಪ್ ಲೈನ್
ನವದೆಹಲಿ, ಸೆ. 11: ದಕ್ಷಿಣ ಏಷ್ಯಾದ ಮೊಟ್ಟಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಉತ್ಪನ್ನಗಳ ಪೈಪ್ಲೈನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಜಂಟಿಯಾಗಿ ಉದ್ಘಾಟಿಸಿದ್ದಾರೆ.
ಭಾರತದ ಬಿಹಾರದ ಮೋತಿಹಾರಿ ಹಾಗೂ ನೇಪಾಳದ ಅಮ್ಲೆಖ್ಗಂಜ್ ನಡುವಿನ 60 ಕಿಮೀ ಉದ್ದದ ಪೆಟ್ರೋಲಿಯಂ ಉತ್ಪನ್ನಗಳ ಪೈಪ್ಲೈನ್ ಯೋಜನೆ ಜಾರಿಗೊಂಡಿರುವುದರಿಂದ ನೇಪಾಳದಲ್ಲಿ ಇಂಧನ ಬೆಲೆ ತಗ್ಗಲಿದೆ.
ಯಾವುದೇ ದೇಶದ ಆಂತರಿಕ ವಿಚಾರದಲ್ಲಿ ಬಾಹ್ಯ ಪ್ರಭಾವ ನಾವು ಸಹಿಸಲ್ಲ: ಮೋದಿ, ಪುಟಿನ್
1973ರಿಂದ ನೇಪಾಳಕ್ಕೆ ಭಾರತದಿಂದ ಟ್ಯಾಂಕರ್ಗಳ ಮೂಲಕ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಲಾಗುತ್ತಿತ್ತು. ಇದನ್ನು ಸುಧಾರಣೆಗೊಳಿಸಲು ಯತ್ನಿಸಿ ಕೊನೆಗೆ ಪೈಪ್ ಲೈನ್ ಯೋಜನೆ ಕೈಗೊಳ್ಳಲಾಯಿತು.
"ಭಾರತ-ನೇಪಾಳ ಇಂಧನ ಸಹಕಾರ ಯೋಜನೆಯು ಎರಡೂ ದೇಶಗಳ ನಿಕಟ ದ್ವಿಪಕ್ಷೀಯ ಸಂಬಂಧಗಳ ಸಂಕೇತವಾಗಿದೆ. ಈ ಯೋಜನೆ ಇಂಧನದ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ಸಾರಿಗೆ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಲು ಸಹಕಾರಿಯಾಗಿದೆ" ಪ್ರಧಾನಿ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
"2015ರ ಭೂಕಂಪ ನೇಪಾಳ ರಾಷ್ಟ್ರವನ್ನು ಬಹುತೇಕ ಧ್ವಂಸಗೊಳಿಸಿತ್ತು. ಆದರೆ, ಇಂತಹ ದುರಂತದ ನಂತರವೂ ಹಿಮಾಲಯದ ಈ ದೇಶ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವುದು ಸಂತಸ ಮೂಡಿಸಿದೆ. ಅಲ್ಲದೆ, ತನ್ನದೆ ಆದ ಆದ್ಯತೆಗಳಿಗೆ ಅನುಗುಣವಾಗಿ ನೇಪಾಳದ ಅಭಿವೃದ್ಧಿ ಕೆಲಸಗಳಿಗೆ ಸಹಾಯ ಮಾಡಲು ಭಾರತ ಬದ್ಧವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಯೋಜನೆ ವಿವರ:
* 1973ರಿಂದ ಭಾರತದಿಂದ ಟ್ಯಾಂಕರ್ ಮೂಲಕ ನೇಪಾಳಕ್ಕೆ ಇಂಧನ ಸರಬರಾಜು.
*1996ರಲ್ಲಿ ಮೋತಿಹಾರಿ-ಆಮ್ಲೆಖಗಂಜ್ ಪೈಪ್ಲೈನ್ ಯೋಜನೆಯ ಪ್ರಸ್ತಾವನೆ
* 2014ರಲ್ಲಿ ಕಾಠ್ಮಂಡು ಪ್ರವಾಸದ ವೇಳೆ ಪ್ರಧಾನಿ ಮೋದಿಯಿಂದ ಯೋಜನೆಗೆ ಮರು ಜೀವ.
* 2015ರ ಆಗಸ್ಟ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿಗದಿ ಮಾಡಲಾಗಿತ್ತು. 2015ರಲ್ಲಿ ನೇಪಾಳದಲ್ಲಿ ಭಾರೀ ಭೂಕಂಪದಿಂದಾಗಿ ಕಾಮಗಾರಿ ವಿಳಂಬ.
* 2019ರಲ್ಲಿ ಭಾರತ-ನೇಪಾಳ ಇಂಧನ ಪೈಪ್ ಲೈನ್ ಗೆ ಚಾಲನೆ.
* ಯೋಜನಾ ವೆಚ್ಚ: 350ಕೋಟಿ ರು,
* ಪೈಪ್ ಲೈನ್ ಉದ್ದ: 69 ಕಿ.ಮೀ
* ಮಾರ್ಗ: ಬಿಹಾರದ ಮೋತಿಹಾರಿಯಿಂದ ನೇಪಾಳದ ಆಮ್ಲೆಖಗಂಜ್ಗೆ ಡೀಸೆಲ್ ಸರಬರಾಜು
* ಅಂದಾಜು 14 ಸಾವಿರ ಕೋಟಿ ಉಳಿತಾಯ.